ಕ್ಷೀರಭಾಗ್ಯ ಯೋಜನೆ ಸ್ವಾಗತಾರ್ಹ
ರೋಣ: ಮಕ್ಕಳಿಗಾಗಿ ಸರ್ಕಾರ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿರುವುದು ಸ್ವಾಗತಾರ್ಹವಾಗಿದೆ ಎಂದು ಮುಖ್ಯೋಪಾಧ್ಯಾಯ ರಮಾಕಾಂತ ಕಮತಗಿ ಹೇಳಿದರು.
ಅವರು ಗುರುವಾರ ತಾಲೂಕಿನ ಹುಲ್ಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಭವನದಲ್ಲಿ ಆಯೋಜಿಸಿದ್ದ ಕ್ಷೀರಭಾಗ್ಯ ಯೋಜನೆ ಕಾರ್ಯಕ್ರಮವನ್ನು ಮಕ್ಕಳಿಗೆ ಹಾಲು ವಿತರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಶಾಲಾ ಮಕ್ಕಳಿಗೆ ಸರ್ಕಾರ ರೂಪಿಸಿರುವ ಕ್ಷೀರಭಾಗ್ಯ ಯೋಜನೆ ಮುಂದಿನ ದಿನಗಳಲ್ಲಿ ಶೈಕ್ಷಣಿಕ ಬೆಳವಣಿಗೆಗೆ ಮಾರ್ಗಸೂಚಿಯಾಗಿದ್ದು, ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದ ಶಕ್ತಿಯಾಗಿ ಬೆಳೆಯಲಿದ್ದಾರೆ. ಭವಿಷ್ಯದ ಸದೃಢ ಸಮಾಜ ನಿರ್ಮಾಣಕ್ಕೆ ಸರ್ಕಾರ ಕೈಗೊಂಡ ಈ ಯೋಜನೆ ಮಹತ್ವ ಪೂರ್ಣದ್ದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಬಿ.ಆರ್. ನರೇಗಲ್, ಸಿ.ಕೆ. ವಿರಕ್ತಮಠ, ಎಸ್.ಬಿ. ನರಸಣ್ಣವರ, ಬಿ.ಎಲ್. ಬ್ಯಾಳಿ, ಎಂ.ಎಚ್. ಕಡಿವಾಲ ಮುಂತಾದವರು ಉಪಸ್ಥಿತರಿದ್ದರು.