ಗಬ್ಬೆದ್ದ ಗ್ರೇನ್ ಮಾರ್ಕೇಟ್
ಕನ್ನಡಪ್ರಭ ವಾರ್ತೆ, ಗದಗ, ಆ. 2
ಗದಗ-ಬೆಟಗೇರಿ ಅವಳಿ ನಗರದ ಗ್ರೇನ್ ಮಾರ್ಕೇಟ್ ಈಗ ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದೆ.
ಗ್ರೇನ್ ಮಾರ್ಕೇಟ್ಗೆ ತೆರಳಿದರೆ ಸಾಕು ಅಲ್ಲಿ ಎಲ್ಲೆಂದರಲ್ಲಿ ಹಾಕಿದ ಕಸ, ಅದರಿಂದ ಬರುವ ದುರ್ವಾಸನೆ, ಅಲ್ಲಲ್ಲಿ ನಿಂತಿರುವ ಬಿಡಾಡಿ ದನಗಳು, ಹಂದಿಗಳೇ ಸಾರ್ವಜನಿಕರನ್ನು ಸ್ವಾಗತಿಸುವಂತಿದೆ. ಮಾರ್ಕೇಟ್ನ ಹೊರಾಂಗಣದಲ್ಲಿ ಹಾಕಿರುವ ಕಸವನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸದೇ ಇರುವುದರಿಂದ ಅಲ್ಲಿ ಗಬ್ಬೆದ್ದು ನಾರುತ್ತಿದ್ದು, ಜನರು ಸಂಚರಿಸಲು ಯಮಯಾತನೆ ಅನುಭವಿಸುತ್ತಿದ್ದಾರೆ.
ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆಯ ಜನತೆ, ವ್ಯಾಪಾರಸ್ಥರು, ಗುತ್ತಿಗೆದಾರರು ನಿತ್ಯ ಗ್ರೇನ್ ಮಾರ್ಕೇಟ್ನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಾರೆ. ಸಾವಿರಾರು ಜನರು ತರಕಾರಿ, ಹಣ್ಣು, ಹೂ, ಇತ್ಯಾದಿ ನಿತ್ಯದ ಅವಶ್ಯಕ ವಸ್ತುಗಳನ್ನು ಕೊಂಡುಕೊಳ್ಳಲು ಆಗಮಿಸುತ್ತಾರೆ. ಆದರೆ, ಇಲ್ಲಿಗೆ ಆಗಮಿಸುವ ಸಾರ್ವಜನಿಕರು ಇಲ್ಲಿನ ಅವ್ಯವಸ್ಥೆ ಕಂಡು ಹಿಡಿ ಶಾಪ ಹಾಕುತ್ತಿದ್ದಾರೆ.
ಕಸದ ರಾಶಿ: ಗ್ರೇನ್ ಮಾರ್ಕೇಟ್ ದೊಡ್ಡ ಸ್ಥಳವನ್ನು ಹೊಂದಿದೆ. ನಗರದ ಸಂಗಮ ಬಜಾರ್ನಿಂದ ಬಸವೇಶ್ವರ ವೃತ್ತದವರೆಗೂ ಹರಡಿಕೊಂಡಿದೆ. ಇನ್ನು ಈ ಮಾರ್ಕೇಟ್ನ ಸುತ್ತಲೂ ಹಲವು ಮಳಿಗೆಗಳಿವೆ. ಇವರು ನಿತ್ಯ ತ್ಯಾಜ್ಯ ವಸ್ತುಗಳನ್ನು ರಸ್ತೆಯ ಪಕ್ಕದಲ್ಲಿರುವ ಕಸದ ಡಬ್ಬಿಗೆ ಹಾಕುತ್ತಾರೆ. ಆದರೆ, ಕಸ ವಿಲೇವಾರಿಯಾಗದೇ ಗಬ್ಬೆದ್ದು ನಾರುತ್ತಿದೆ. ನಗರದ ಸಂಗಮ್ ಟ್ರೇಡಿಂಗ್ ಕಂಪನಿ ಎದುರು, ಹತ್ತಿಕಾಳಕೂಟದಿಂದ ಬಸವೇಶ್ವರ ವೃತ್ತ, ಸಂಗಮ್ ಬಜಾರ ಎದುರು, ಅಶೋಕ ಹಂಜಗಿ ಅಂಗಡಿಯ ಬಳಿ, ವಾಸಣ್ಣ ಹೆಬಸೂರ ಅಂಗಡಿಯ ಬಳಿ, ಟಿಳಕ್ ಪಾರ್ಕ್, ಕೆ.ಎಚ್.ಪಾಟೀಲ ವೃತ್ತದವರೆಗೆ, ಟಾಂಗಾಕೂಟದಿಂದ ಮಾಳಶೆಟ್ಟಿ ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಕಸದ ರಾಶಿ ಬಿದ್ದಿದೆ. ಅಲ್ಲದೇ ಮಳೆ ಬಂದರೆ ಗ್ರೇನ್ ಮಾರ್ಕೇಟ್ನ ಸ್ಥಿತಿ ಹೇಳತೀರದು. ಈಗಾಗಲೇ ಹಲವು ದಿನಗಳಿಂದ ನಗರದಲ್ಲಿ ಜಿಟಿಜಿಟಿ ಮಳೆ ಪ್ರಾರಂಭವಾಗಿದ್ದು, ಸಂಗಮ್ ಬಜಾರ್ದಿಂದ ಮಾರ್ಕೇಟ್ಗೆ ತೆರಳುವ ರಸ್ತೆ ಅಲ್ಪ ಮಳೆಯಾದರೂ ಚರಂಡಿಯಾಗಿ ಮಾರ್ಪಡುತ್ತದೆ. ಇದರಿಂದ ಇಲ್ಲಿ ಸಂಚರಿಸಲು ಸಾರ್ವಜನಿಕರು ಹೆಣಗಾಡುತ್ತಾರೆ.
ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯ: ಮಾರ್ಕೇಟ್ನಲ್ಲಿ ನಿತ್ಯ ಹಾಳಾದ ತರಕಾರಿ, ಹೂ ಸೇರಿದಂತೆ ಇನ್ನಿತರೇ ತ್ಯಾಜ್ಯ ವಸ್ತುಗಳು ಹಲವು ಟನ್ಗಳಷ್ಟು ನಿತ್ಯ ಸಂಗ್ರಹವಾಗುತ್ತದೆ. ಇಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ನಿತ್ಯ ವಿಲೇವಾರಿ ಮಾಡಬೇಕು. ಆದರೆ ಇಲ್ಲಿ ನಿತ್ಯ ಕಸ ವಿಲೇವಾರಿಯಾಗದೇ ಇರುವುದರಿಂದ ಗ್ರೇನ್ ಮಾರ್ಕೆಟ್ನಲ್ಲಿ ಗಬ್ಬುನಾತ ಬೀರುತ್ತಿದೆ. ವಾರಕ್ಕೆ, 10-15 ದಿನಗಳಿಗೊಮ್ಮೆ ಕಸ ವಿಲೇವಾರಿ ಮಾಡುತ್ತಿದ್ದಾರೆ. ಅದು ಬೇಕಾಬಿಟ್ಟಿಯಾಗಿ ಕಸ ವಿಲೇವಾರಿ ಮಾಡುತ್ತಿದ್ದಾರೆ ಎಂಬುದು ಇಲ್ಲಿನ ವ್ಯಾಪಾರಸ್ಥರ ಆರೋಪವಾಗಿದೆ.
ಜಿಲ್ಲಾಧಿಕಾರಿಗೆ ಮನವಿ
ಗ್ರೇನ್ ಮಾರ್ಕೇಟ್ನ ಅವ್ಯವಸ್ಥೆ ಕುರಿತು ಗದಗ-ಬೆಟಗೇರಿ ನಗರಸಭೆ ನಿರ್ಲಕ್ಷ್ಯ ತೋರುತ್ತಿದ್ದು, ಜಿಲ್ಲಾಧಿಕಾರಿಗಳು ಈ ಕುರಿತು ಗಮನ ಹರಿಸಿ ಶಾಶ್ವತ ಪರಿಹಾರ ಕಲ್ಪಿಸಿಕೊಡುವಂತೆ ಹಾಗೂ ನಿತ್ಯ ಕಸದ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಗ್ರೇನ್ ಮಾರ್ಕೇಟ್ ವ್ಯಾಪಾರಸ್ಥರು ಹಾಗೂ ಇಲ್ಲಿ ವಾಸಿಸುವ ಸಾರ್ವಜನಿಕರು ಈಚೆಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಇಲ್ಲಿನ ಜನರಲ್ಲಿ ಬೇಸರ ತಂದಿದೆ.
-ಅಜೀಜಅಹ್ಮದ ಬಳಗಾನೂರ