ಲಕ್ಷ್ಮೇಶ್ವರದಲ್ಲಿಬ್ಬರು ಅಪರೂಪದ ಹಿಂದೂ-ಮುಸ್ಲಿಂ ಸ್ನೇಹಿತರು
ಅಶೋಕ ಸೊರಟೂರ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಆ. 3
ಗೆಳೆತನಕ್ಕಾಗಿ ಅನೇಕರು ಪ್ರಪಂಚದಾದ್ಯಂತ ಹೆಸರುವಾಸಿಯಾಗಿದ್ದಾರೆ. ಆದರೆ, ಪಟ್ಟಣದಲ್ಲಿ ಅಪರೂಪದಲ್ಲಿ ಅಪರೂಪವೆನ್ನಿಸುವ ಸ್ನೇಹಿತರನ್ನು ನೋಡಬಹುದಾಗಿದೆ.
ಪಟ್ಟಣದ ಬಸ್ ನಿಲ್ದಾಣದಲ್ಲಿ ಹಮಾಲಿ ಕಾಯಕ ಮಾಡುತ್ತ ಬಂದ ಹಣವನ್ನು ಸಮಾನವಾಗಿ ಹಂಚಿಕೊಂಡು ಸಹಬಾಳ್ವೆಯ ಜೀವನ ಸಾಗಿಸುತ್ತಿರುವ ಇವರು ಅಪರೂಪದ ಸ್ನೇಹಿತರು ಎನ್ನುವುದಕ್ಕೆ ಜೀವಂತ ಉದಾಹರಣೆಗಳಾಗಿದ್ದಾರೆ. ತಾಮ್ರದ ದುಡ್ಡು ತಾಯಿ ಮಕ್ಕಳ ಕೆಡಿಸಿತು ಎನ್ನುವ ಗಾದೆ ಮಾತನ್ನು ಕೂಡಾ ಸುಳ್ಳಾಗಿಸಿದ ಇವರ ಸ್ನೇಹಕ್ಕೆ ನಾವೆಲ್ಲರೂ ಜೈ ಎನ್ನಲೇಬೇಕು.
ಯಾರಿವರು ?: ಪಟ್ಟಣದ ಬಸ್ ಹಮಾಲಿ ಕಾರ್ಮಿಕರಾದ ಹಜರೇಸಾಬ ಗೌಸುಸಾಬ ತಂಬಾಕ ಹಾಗೂ ಫಕ್ಕಿರಪ್ಪ ಮರಿಯಪ್ಪ ನಾರಾಯಣಕರ ಎನ್ನುವ ಇಬ್ಬರು ಗೆಳೆತನಕ್ಕೆ ಮಾದರಿಯಾಗಿದ್ದಾರೆ. ಹಿಂದೂ-ಮುಸ್ಲಿಂ ಆಗಿದ್ದರೂ ಇವರ ಕೋಮು ಸಾಮರಸ್ಯಕ್ಕೆ ಇದುವರೆಗೂ ಯಾವುದೇ ಭಂಗ ಬಂದಿಲ್ಲ. ಕಳೆದ 30 ವರ್ಷಗಳಿಗೂ ಹೆಚ್ಚು ಕಾಲ ಪಟ್ಟಣದ ಬಸ್ ನಿಲ್ದಾಣದಲ್ಲಿ ಬೇರೆಯವರ ಲಗೇಜುಗಳನ್ನು ಹೊತ್ತು ಬಸ್ಸಿನಲ್ಲಿ ಹಾಕಿ ಪ್ರಯಾಣಿಕರು ನೀಡುವ ಹಣವನ್ನು ಸಮಾನವಾಗಿ ಹಂಚಿಕೊಂಡು ಆದರ್ಶದ ಬದುಕನ್ನು ಹಾಗೂ ಗೆಳೆತನವನ್ನು ಕಾಣಬಹುದಾಗಿದೆ.
ಭಿನ್ನಾಭಿಪ್ರಾಯವೇ ಇಲ್ಲ: ಆದರೆ, ಇಷ್ಟೇ ಹೇಳಿದರೆ ಇವರ ಗೆಳೆತನಕ್ಕೆ ಅರ್ಥ ಬರುವುದಿಲ್ಲ. ಇಬ್ಬರಲ್ಲಿ ಯಾರೋ ಒಬ್ಬರಿಗೆ ಅನಾರೋಗ್ಯ ಕಾಡಿ ಮೈಯಲ್ಲಿ ಹುಷಾರು ಇಲ್ಲದಂತಾದ ವೇಳೆಯಲ್ಲಿ ತಾನು ದುಡಿದ ಹಣದಲ್ಲಿ ಅರ್ಧದಷ್ಟನ್ನು ಕೆಲಸಕ್ಕೆ ಬಾರದಿರುವವರ ಮನೆಗೆ ಸ್ವತಃ ತಾವೇ ಹೋಗಿ ಪ್ರಾಮಾಣಿಕವಾಗಿ ಅಂದಿನ ಹಣವನ್ನು ಮುಟ್ಟಿಸಿ ಬರುತ್ತಾರೆ. ಕಳೆದ 30 ವರ್ಷಗಳಲ್ಲಿ ಒಮ್ಮೆಯೂ ಹಣಕ್ಕಾಗಿ ಕಿತ್ತಾಡಿಕೊಂಡಿಲ್ಲ. ಪರಸ್ಪರರು ಹಿಂದೂ-ಮುಸ್ಲಿಂ ಆಗಿದ್ದರೂ ಇಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯ ಮೂಡದೇ ಅಪರೂಪದ ಸ್ನೇಹಿತರಾಗಿದ್ದಾರೆ.
ದುಡಿದ ಹಣದಲ್ಲಿ ಸಮಾನ ಹಂಚಿಕೆ: ಇವರಿಬ್ಬರು ಹೆಚ್ಚಿನ ಶಿಕ್ಷಣವನ್ನು ಪಡೆದುಕೊಳ್ಳದೇ ಇದ್ದರೂ ಇಬ್ಬರಲ್ಲಿ ಯಾವುದೇ ಅನುಮಾನವಿಲ್ಲ, ಇದುವರೆಗೂ ಕಾಡಿಲ್ಲ. ಹಣಕ್ಕಾಗಿ ಸ್ನೇಹಿತನ್ನೇ ಅಥವಾ ಗೆಳೆತನವನ್ನು ಬಲಿಕೊಡುವ ಇಂದಿನ ಕಾಲದಲ್ಲಿ ತಾನು ದುಡಿದ ಹಣವನ್ನು ನಿಷ್ಕಳಂಕವಾಗಿ ಹಂಚಿಕೊಂಡು ನೆಮ್ಮದಿಯಿಂದ ಬದುಕುತ್ತಿರುವುದು ಇಂದಿನ ಪೀಳಿಗೆಗೆ ಮಾದರಿಯಾಗಿದೆ. ತಮ್ಮ ದುಡಿಮೆಯನ್ನು ದೇವರೆಂದು ತಿಳಿದು ಬದುಕು ಸಾಗಿಸುತ್ತಿರುವ ಇವರಿಬ್ಬರು ಮಾದರಿ ಸ್ನೇಹಿತರಾಗಿದ್ದಾರೆ.
ಬಸ್ನಲ್ಲಿ ಸಂಚಾರ ಮಾಡುವ ಹಾಗೂ ಬಸ್ಸಿನ ಚಾಲಕರ ಹಾಗೂ ನಿರ್ವಾಹಕರ ಪ್ರೀತಿ ಪಾತ್ರರಾಗಿದ್ದಾರೆ. ಅಲ್ಲದೆ ಇವರಿಬ್ಬರ ಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ಯಾರದೇ ಮನೆಯಲ್ಲಿ ನಡೆದರೆ ಆ ಕಾರ್ಯದಲ್ಲಿ ಭಾಗಿಯಾಗಿ ಆ ಕಾರ್ಯವನ್ನು ಯಶಸ್ವಿಗೊಳಿಸುತ್ತಾರೆ. ಅಲ್ಲದೆ ಇಬ್ಬರ ಮನೆಯವರೂ ಅದೇ ಪ್ರೀತಿ ವಿಶ್ವಾಸವನ್ನು ಹೊಂದಿದ್ದಾರೆ.
ಕೇವಲ ಫ್ರೆಂಡ್ಶಿಪ್ ಬೆಲ್ಟ್ನ್ನು ಕಟ್ಟಿಕೊಂಡ ಮರುಗಳಿಗೆಯಲ್ಲಿಯೇ ಗೆಳೆತನ ಮರೆತು ವೈರಿಯಂತೆ ಕಿತ್ತಾಡುತ್ತಿರುವ ಇಂದಿನ ಯುವಕರಿಗೆ ಈ ಹಳೆಯ ಗೆಳೆಯರು ಸಾಕಷ್ಟು ಮಾದರಿಯಾಗಿದ್ದಾರೆ. ಕಾಲ ಘಟ್ಟದಲ್ಲಿ ಇಂತಹ ಅಪರೂಪದ ಸ್ನೇಹಿತರನ್ನು ಸ್ನೇಹಿತರ ದಿನದಂದೇ ನೆನಪಿಸಿಕೊಳ್ಳುತ್ತಾ.. ಅವರ ಸ್ನೇಹಕ್ಕೊಂದು ಶುಭ ಕೋರೋಣ.