ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಚನಗಳು ಬೆಳಕು ನೀಡುವ ಸಾಧನಗಳು

Mainashree
Updated On : 4 Aug 2013, 1:18 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಆ. 3
ಒಂದು ದೀಪ ಉರಿಯುತ್ತಿದ್ದರೆ ಅದರಿಂದ ಉಳಿದ ದೀಪಗಳನ್ನು ಉರಿಸಲು ಸಾಧ್ಯ. ಹಾಗೆಯೇ ವಚನಗಳು ಬದುಕಿನಲ್ಲಿ ಬೆಳಕನ್ನು ಚೆಲ್ಲುವ ಸಾಧನಗಳಾಗಿವೆ. ವಚನಗಳು ಬೆಳಕನ್ನು ನೀಡುವ ಕಂದೀಲುಗಳಾಗಿ ಕೆಲಸ ಮಾಡುತ್ತವೆ ಎಂದು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಕುಮಾರದೇವರು ಹೇಳಿದರು.
ಅವರು ಶುಕ್ರವಾರ ರಾತ್ರಿ ಮುಂಡರಗಿ ತೋಂಟದಾರ್ಯ ಮಠದಲ್ಲಿ ನಡೆಯುತ್ತಿರುವ ವಚನ ಸಂಸ್ಕೃತಿ ದರ್ಶನ ಪ್ರವಚನದಲ್ಲಿ ಮಾತನಾಡಿದರು. ಬದುಕು ಸಮರಸಗೊಳ್ಳಲು ಷಟ್‌ಸ್ಥಲ ಎಂಬ ಆರು ಸೋಪಾನುಗಳಿವೆ. ಕೆಡುವ ಶರೀರದ ಸಫಲತೆಯು ಪರಿಹಿತವಾಗಿರುತ್ತದೆ. ಸಮಾಜಮುಖಿಯಾಗಿ ನಮ್ಮನ್ನು ನಾವು ಸಮರ್ಪಿಸಿಕೊಂಡಾಗ ಮಾತ್ರ ಲೋಕಕಲ್ಯಾಣದ ಜತೆಗೆ ಅಂತರಂಗದ ಕೃಷಿಯೂ ಆಗುತ್ತದೆ. ಷಟ್‌ಸ್ಥಲಗಳಾದ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗ, ಶರಣ ಮತ್ತು ಐಕ್ಯ ಇವು ಭಗವಂತನಲ್ಲಿ ಒಂದಾಗುವ ಮಾರ್ಗವನ್ನು ತಿಳಿಸಿಕೊಡುತ್ತವೆ. ಭಕ್ತ ಮತ್ತು ಮಹೇಶ ಇವುಗಳಲ್ಲಿ ದ್ವೈತಭಾವ ಇರುತ್ತದೆ. ಅಂಗ-ಲಿಂಗ, ಜೀವಾತ್ಮ-ಪರಮಾತ್ಮ, ಜೀವ-ದೇವ ಎನ್ನುವಂತಹ ಭಾವವನ್ನೊಳಗೊಂಡಿರುತ್ತದೆ. ಪ್ರಸಾದಿಯೂ ದ್ವೈತಭಾವವನ್ನು ಸೂಚಿಸಿದೆ. ಪ್ರಾಣಲಿಂಗ ಅದ್ವೈತಭಾವವನ್ನು ಹೇಳುತ್ತದೆ. ಶರಣ ಸತಿ-ಲಿಂಗಪತಿ ತರಹ ಈ ಎರಡು ಸ್ಥಲಗಳು ಮುಖ್ಯವಾಗುತ್ತವೆ ಎಂದು ಹೇಳಿದರು.
ಅಲ್ಲಮಪ್ರಭು ಪ್ರಾಣಲಿಂಗಿಯಾದರೆ, ಬಸವಣ್ಣ ಜಂಗಮಪ್ರಾಣ ಎನ್ನಲಾಗುತ್ತದೆ. ಶರಣ ಮತ್ತು ಐಕ್ಯ ಸ್ಥಲಗಳು ಆನಂದ-ಸಮರಸ-ಆನಂದ ಹೊಂದುವ ಭಾವವನ್ನು ವ್ಯಕ್ತಪಡಿಸುತ್ತದೆ. ಘಟಾಕಾಶ ಮತ್ತು ಮಠಾಕಾಶ ಇಲ್ಲಿ ಮುಖ್ಯವಾಗುತ್ತವೆ. ಘಟಕಾಶ ಅಂದರೆ ಮಡಕೆಯಲ್ಲಿ ಸ್ಥಳ ಇರುತ್ತದೆ. ಮಡಕೆ ಒಡೆದ ಅನಂತರ ಆ ಸ್ಥಳ ಹೊರಗಿನ ಬಯಲಲ್ಲಿ ಕೂಡಿ ಎರಡು ಬಯಲು ಒಂದಾಗುವ ತರಹ ಭಗವಂತನಲ್ಲಿ ಸಮರಸಗೊಳ್ಳಲು ಷಟ್‌ಸ್ಥಲಗಳು ಮುಖ್ಯವಾದವುಗಳು ಎಂದು ಕುಮಾರದೇವರು ಹೇಳಿದರು.
ಭಕ್ತ ಸ್ಥಳ ಭಕ್ತಿಯ ಪರಿಪೂರ್ಣತೆಯ ಭಾವವನ್ನು ತಿಳಿಸುತ್ತ, ಶ್ರದ್ಧಾಭಕ್ತಿಗೆ ಹೆಚ್ಚು ಪ್ರಧಾನ್ಯ ನೀಡುತ್ತದೆ. ಮಹೇಶ ನಿಷ್ಠಾಭಕ್ತಿಯ ಭಾವವನ್ನು ಹೊಂದಿದ್ದರೆ, ಪ್ರಾಣಲಿಂಗ ಅನುಭಾವಭಕ್ತಿ, ಪ್ರಸಾದಿ ಅವಧಾನಭಕ್ತಿ ಮತ್ತು ಶರಣ-ಐಕ್ಯ ಸಮರಸ ಭಕ್ತಿಯನ್ನು ಹೊಂದಿರುತ್ತದೆ. ಬಾಗುವುದು ಯಾವಾಗಲೂ ಬದಕುತ್ತದೆ, ಆದರೆ ಬೀಗುವುದು ಸಾಯುತ್ತದೆ. ಶರಣರ ವಚನಗಳಲ್ಲಿ ಷಟ್‌ಸ್ಥಲಗಳ ಕುರಿತು ಸಾಕಷ್ಟು ಮಾಹಿತಿ ಇದ್ದು, ಭಗವಂತನನ್ನು-ಮುಕ್ತಿಯನ್ನು ಕಾಣುವ ದಾರಿಯಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement