ವಿಧಾನ ಪರಿಷತ್ ಚುನಾವಣೆ: ಗರಿಗೆದರಿದ ರಾಜಕೀಯ
ಕನ್ನಡಪ್ರಭ ವಾರ್ತೆ, ಗದಗ, ಆ. 3
ಚುನಾವಣಾ ಆಯೋಗ ವಿಧಾನ ಪರಿಷತ್ ಚುನಾವಣೆ ದಿನಾಂಕ ಘೋಷಣೆ ಮಾಡುತ್ತಿದ್ದಂತೆ ಜಿಲ್ಲೆಯಲ್ಲಿ ಮತ್ತೆ ರಾಜಕೀಯ ಚಟುವಟಿಕೆ ತೀವ್ರ ಬಿರುಸುಗೊಂಡಿದೆ.
ಆಡಳಿತಾರೂಢ ಕಾಂಗ್ರೆಸ್ ಮತ್ತೆ ವಿಧಾನ ಪರಿಷತ್‌ನಲ್ಲಿ ಪ್ರಭಾವ ಬೀರುವ ತವಕದಲ್ಲಿದ್ದರೆ, ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ಸೋಲಿನ ಆಘಾತದಿಂದ ಹೊರಬರಲು ಈ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಿದ್ಧತೆಗಳನ್ನು ಬಲು ಜೋರಾಗಿಯೇ ನಡೆಸುತ್ತಿದೆ.
ಗದಗ ಜಿಲ್ಲೆಗೆ ಸಿಗಲಿದೆಯೇ ಪ್ರಾತಿನಿಧ್ಯ ?: ಈ ಹಿಂದೆ ವಿಧಾನ ಪರಿಷತ್ ಚುನಾವಣೆಯಲ್ಲಿ ಗದಗ ಜಿಲ್ಲೆಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಬಹುತೇಕವಾಗಿ ಹಾವೇರಿ ಜಿಲ್ಲೆಗೆ ಹೆಚ್ಚಿನ ಪ್ರಾಧಾನ್ಯ ನೀಡಿತ್ತು. ಇದರಿಂದಾಗಿಯೇ ಆ ಪಕ್ಷವು ಈಚೆಗೆ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಮಟ್ಟಿಗೆ ಹಿನ್ನಡೆ ಅನುಭವಿಸುವಂತಾಯಿತು. ಈ ಬಾರಿಯಾದರೂ ರಾಷ್ಟ್ರೀಯ ಪಕ್ಷಗಳು ಗದಗ ಜಿಲ್ಲೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡದೇ ಇದ್ದಲ್ಲಿ ಫಲಿತಾಂಶದ ಮೇಲೆ ಮತ್ತೆ ಪರಿಣಾಮ ಬೀರುವ ಸಾಧ್ಯತೆ ಖಚಿತ.
ಸಮಬಲದ ಹೋರಾಟ: ಜಿಲ್ಲೆಯ ಮಟ್ಟಿಗೆ ಹೋಲಿಕೆ ಮಾಡಿದಲ್ಲಿ ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹೆಚ್ಚು ಕಡಿಮೆ ಸಮಬಲದ ಹೋರಾಟ ಪ್ರದರ್ಶಿಸುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ 18 ಜಿಪಂ ಸ್ಥಾನಗಳನ್ನು ಹೊಂದಿದ್ದು, ಇಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇನ್ನು ತಾಪಂನಲ್ಲಿ ರೋಣ, ನರಗುಂದ, ಮುಂಡರಗಿ ಬಿಜೆಪಿ ಅಧಿಕಾರದಲ್ಲಿದ್ದರೆ, ಗದಗ ಹಾಗೂ ಶಿರಹಟ್ಟಿಯಲ್ಲಿ ಕಾಂಗ್ರೆಸ್ ಹಾಗೂ ಅನ್ಯ ಪಕ್ಷಗಳ ಸಹಕಾರದಲ್ಲಿ ಅಧಿಕಾರ ನಡೆಯುತ್ತಿದೆ. ಗದಗ-ಬೆಟಗೇರಿ ನಗರಸಭೆ, ಮುಳಗುಂದ, ರೋಣ, ಪುರಸಭೆಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ, ನರಗುಂದ, ಗಜೇಂದ್ರಗಡ, ಹಾಗೂ ನರೇಗಲ್ಲನಲ್ಲಿ ಮಾತ್ರ ಬಿಜೆಪಿ ಅಧಿಕಾರ ಹಿಡಿಯುವಷ್ಟು ಬಹುಮತ ಪಡೆದಿದೆ.ಹಾಗಾಗಿ ಜಿಲ್ಲೆಯ ಮಟ್ಟಿಗೆ ಪರಿಷತ್ ಚುನಾವಣೆ ಅವಲೋಕಿಸಿದಲ್ಲಿ ಎರಡೂ ಪಕ್ಷಗಳಿಂದ ಸಮಬಲದ ಹೋರಾಟ ಕಂಡು ಬರಲಿದೆ.
ಗ್ರಾಪಂ ಸದಸ್ಯರದ್ದೇ ತಲೆನೋವು: ವಿಧಾನ ಪರಿಷತ್ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಮತದಾರರೇ ಗ್ರಾಪಂ ಸದಸ್ಯರು. ಆದರೆ, ಗ್ರಾಪಂ ಸದಸ್ಯರು ಯಾವುದೇ ಪಕ್ಷದ ಚಿಹ್ನೆಯ ಮೇಲೆ ಆಯ್ಕೆಯಾಗದೇ ಇರುವುದರಿಂದ ಪ್ರತಿಬಾರಿಯೂ ಈ ಚುನಾವಣೆಯಲ್ಲಿ ಗ್ರಾಪಂ ಸದಸ್ಯರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದರ ಮೇಲೆಯೇ ಫಲಿತಾಂಶ ನಿರ್ಧಾರವಾಗಲಿದೆ ಎನ್ನುವುದು ಮಾತ್ರ ಸ್ಪಷ್ಟ. ಆದರೆ, ಕಳೆದ ಚುನಾವಣೆಯಲ್ಲಿ ಸಾಕಷ್ಟು ಹಣಕಾಸಿನ ವ್ಯವಹಾರ ನಡೆದಿದ್ದರಿಂದಲೇ ಬಿಜೆಪಿ ಆಯ್ಕೆಯಾಯಿತು ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಈ ಬಾರಿಯೂ ಸಾಕಷ್ಟು ಹಣಕಾಸಿನ ವ್ಯವಹಾರ ನಡೆಯುವ ಸಾಧ್ಯತೆ ನಿಚ್ಚಳವಾಗಿದ್ದು, ಒಂದು ಮತಕ್ಕೆ ಇಂತಿಷ್ಟು ಹಣ ಎಂದು ಈಗಲೇ ನಿಗದಿಯಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಪಕ್ಷದ ಕಾರ್ಯಕರ್ತನೋರ್ವ 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ್ದಾನೆ.
1881 ಮತದಾರರು: ಗದಗ ಜಿಲ್ಲೆ ಈ ಪರಿಷತ್ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅತ್ಯಂತ ಸಣ್ಣ ಜಿಲ್ಲೆಯಾಗಿದ್ದು, ಇಲ್ಲಿ ಒಟ್ಟು 1881 ಮತದಾನದ ಹಕ್ಕನ್ನು ಹೊಂದಿದ್ದಾರೆ. ಅವರಲ್ಲಿ 203 ಸ್ಥಳೀಯ ಸಂಸ್ಥೆಗಳ ಸದಸ್ಯರಿದ್ದಾರೆ. 18 ಜಿಪಂ ಸದಸ್ಯರಿದ್ದಾರೆ. 73 ತಾಪಂ ಸದಸ್ಯರಿದ್ದು, ಇನ್ನುಳಿದಂತೆ 1586 ಗ್ರಾಪಂ ಸದಸ್ಯರು ಮತದಾನದ ಹಕ್ಕನ್ನು ಹೊಂದಿದ್ದು, ಇವರು ಯಾವುದೇ ಪಕ್ಷದ ಅಧಿಕೃತ ಚಿಹ್ನೆಯ ಮೇಲೆ ಆಯ್ಕೆಯಾಗದೇ ಇರುವುದರಿಂದ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಸಾಕಷ್ಟು ಗೊಂದಲ ಉಂಟಾಗಲಿದೆ.
ಹಾವೇರಿ ಮತಗಳೇ ನಿರ್ಣಾಯಕ: ಹಾವೇರಿ ಜಿಲ್ಲೆಯ ಮತಗಳೇ ಇಲ್ಲಿ ನಿರ್ಣಾಯಕವಾಗಲಿವೆ. ಗದಗ ಹಾಗೂ ಧಾರವಾಡ ಎರಡೂ ಜಿಲ್ಲೆಗಳ ಒಟ್ಟು ಮತದಾರರಷ್ಟು ಜನ, ಹಾವೇರಿ ಜಿಲ್ಲೆಯಲ್ಲಿಯೇ ಇರುವುದರಿಂದ ಪ್ರತಿ ಬಾರಿಯ ಚುನಾವಣೆಯಲ್ಲಿಯೂ ಹಾವೇರಿ ಜಿಲ್ಲೆಯ ಮತಗಳೇ ನಿರ್ಣಾಯಕವಾಗಲಿವೆ. ಇನ್ನುಳಿದ ಎಲ್ಲ ಚುನಾವಣೆಗಳಲ್ಲಿ ಪಕ್ಷದ ಹಿನ್ನೆಲೆ ಅತ್ಯಂತ ಮುಖ್ಯವಾಗಿರುತ್ತದೆ. ಆದರೆ, ಈ ಚುನಾವಣೆಯಲ್ಲಿ ಮಾತ್ರ, ಪಕ್ಷಕ್ಕಿಂತ ವ್ಯಕ್ತಿ ಆಧಾರಿತ ಹಾಗೂ, ಅವರು ಸಾರ್ವಜನಿಕರೊಂದಿಗೆ ಇಟ್ಟುಕೊಂಡಿರುವ ಸಂಪರ್ಕ ಮುಖ್ಯ.
ಇದಕ್ಕಾಗಿಯೇ ಬಹುತೇಕ ಎಲ್ಲ ಪಕ್ಷಗಳು ಹಾವೇರಿ ಜಿಲ್ಲೆಯ ಅಭ್ಯರ್ಥಿಗಳನ್ನೇ ಹೆಚ್ಚಾಗಿ ಕಣಕ್ಕಿಳಿಸುತ್ತಿದ್ದಾರೆ ಎನ್ನುವ ರಾಜಕೀಯ ಲೆಕ್ಕಾಚಾರ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಶಿವಕುಮಾರ ಕುಷ್ಟಗಿ