ಜ್ಞಾನ ಸುಧೆ ಬೀರಿದ 'ವಚನ ಸಂಸ್ಕೃತಿ ದರ್ಶನ'
ಶರಣು ಸೊಲಗಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಆ. 4
ಅಂಧಕಾರ, ಮೌಢ್ಯತೆ ಅಳಿದು ಸನ್ಮಾರ್ಗದ ಹಾದಿಯಲ್ಲಿ ಬಾಳಲು ಶರಣರ ಮಾರ್ಗದರ್ಶನ ಅವಶ್ಯ. ಅದರಂತೆ ಪಟ್ಟಣದ ಜನತೆಗೆ ಒಂದು ತಿಂಗಳಿಂದ ನಿರಂತರವಾಗಿ ಆಧ್ಯಾತ್ಮದ ಅಮೃತವಾಣಿ ಸವಿಯುವ ಭಾಗ್ಯ ದೊರೆಯಿತು.
ಇಂದಿನ ದಿನ ಶ್ರೇಷ್ಠ, ನಾಳಿನ ದಿನ ಕೆಟ್ಟದ್ದು, ಶ್ರಾವಣಮಾಸ ಎಂದರೆ ಒಳ್ಳೆಯದು, ಆಷಾಢ ಮಾಸ ಎಂದರೆ ಕೆಟ್ಟದ್ದು ಎನ್ನುವುದು ಸೇರಿದಂತೆ ಜನರಲ್ಲಿ ಅನೇಕ ವಿಷಯಗಳ ಹಾಗೂ ಆಚರಿಸುವ ಹಬ್ಬ ಹರಿದಿನಗಳ ಕುರಿತು ಇರುವ ಮೂಢನಂಬಿಕೆಯನ್ನು ದೂರ ಮಾಡಿ ಜನರನ್ನು ಮೌಢ್ಯದಿಂದ ಹೊರತರುವ ಉದ್ದೇಶದಿಂದ ಗದುಗಿನ ಜಗದ್ಗುರು. ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಪ್ರತಿವರ್ಷ ಆಷಾಢ ಮಾಸದಲ್ಲಿಯೇ ಇಲ್ಲಿ ಒಂದು ತಿಂಗಳಕಾಲ ಬಸವತತ್ವದಡಿಯಲ್ಲಿ ಪ್ರವಚನ ಜರುಗುತ್ತಾ ಬಂದಿದೆ.
ವಚನ ಸಂಸ್ಕೃತಿ ದರ್ಶನ: ಪುರಾಣ, ಪ್ರವಚನಗಳೆಂದರೆ ಎಲ್ಲರಿಗೂ ನೆನಪಾಗುವುದು ಶ್ರಾವಣ ಮಾಸ. ಆದರೆ, ಮುಂಡರಗಿ ತೋಂಟದಾರ್ಯ ಮಠ ಇದಕ್ಕೆ ವಿಭಿನ್ನವಾಗಿದೆ. ಆಷಾಢ ಮಾಸದಲ್ಲಿಯೇ ಪ್ರತಿವರ್ಷ ಓರ್ವ ಬಸವತತ್ವ ಪ್ರಚಾರಕರನ್ನು ಕರೆದು ಪ್ರವಚನದ ಮೂಲಕ ಬಸವಾದಿ ಪ್ರಥಮರ ಕುರಿತು ಹಾಗೂ ಅವರ ವಚನಗಳ ಕುರಿತು ತಿಳಿವಳಿಕೆ ನೀಡುತ್ತಾ ಬಂದಿದೆ. ಪ್ರಸ್ತುತ ವರ್ಷ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಕುಮಾರದೇವರನ್ನು ಕರೆತಂದು ವಚನ ಸಂಸ್ಕೃತಿ ದರ್ಶನ ಪ್ರವಚನವನ್ನು ಜುಲೈ 9 ರಿಂದ ಪ್ರಾರಂಭಿಸಲಾಗಿತ್ತು. ಆಗಸ್ಟ್ 5ರ ಸಂಜೆ ಪ್ರವಚನ ಮುಕ್ತಾಯಗೊಳ್ಳಲಿದೆ.
ಮತೀಯ ಕಂದಾಚಾರಗಳನ್ನು ಬದಿಗೆ ಸರಿಸುತ್ತ ವೈಚಾರಿಕ ಹಾಗೂ ವೈಜ್ಞಾನಿಕ ಪಥದಲ್ಲಿ ಸಾಗಿದವರು ಗದುಗಿನ ಕನ್ನಡದ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಯವರು. 30 ವರ್ಷಗಳಿಂದ ತೋಂಟದಾರ್ಯ ಮಠ ಪ್ರವಚನವನ್ನು ನಡೆಸುತ್ತ ಬಂದಿದ್ದು, ಮಠದಲ್ಲಿ ಯಾವುದೇ ಜಾತಿ ಭೇದವಿಲ್ಲದೇ ಮಠವನ್ನು ಎಲ್ಲ ಧರ್ಮೀಯರಿಗಾಗಿ ಸದಾ ತೆರೆದಿಟ್ಟಿರುತ್ತಾರೆ. ಪ್ರತಿವರ್ಷ ಆಷಾಢ ಮಾಸದಲ್ಲಿ ಜರುಗುವ ಪ್ರವಚನಕ್ಕೆ ಇದುವರೆಗೆ ವಿವಿಧ ಜಾತಿ, ಜನಾಂಗದವರನ್ನು ಪ್ರವಚನ ಕಮಿಟಿ ಅಧ್ಯಕ್ಷರನ್ನಾಗಿ ಮಾಡುತ್ತಾ ಬಂದಿದ್ದು, ಪ್ರಸ್ತುತ ವರ್ಷ ಹಿಂದುಳಿದ ವರ್ಗದವರಿಗೆ ಅಧ್ಯಕ್ಷತೆಯನ್ನು ನೀಡುವ ಮೂಲಕ ಕೋಮು ಸೌಹಾರ್ದತೆಯನ್ನು ಶ್ರೀಗಳು ಎತ್ತಿ ಹಿಡಿದಿದ್ದಾರೆ.
ಈ ಹಿಂದೆ ಬಸವತತ್ವ ಪ್ರಚಾರಕರಾಗಿ ರಾಜ್ಯಾದ್ಯಂತ ಹೆಸರು ಮಾಡಿರುವ ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಗುಲ್ಬರ್ಗಾದ ಸಿದ್ಧಬಸವ ಕಬೀರಾನಂದ ಶ್ರೀಗಳು, ಕಳೆದ ವರ್ಷ ಧಾರವಾಡದ ಬಸವ ಮಹಾಮನೆಯ ಬಸವಾನಂದ ಶ್ರೀಗಳನ್ನು ಕರೆಸುವ ಮೂಲಕ ಜನರಲ್ಲಿ ಬಸವಾದಿ ಶರಣರ ಕುರಿತು ತಿಳಿವಳಿಕೆ, ವಚನಗಳ ಮಹತ್ವ ಹಾಗೂ ಅರ್ಥವನ್ನು ಜನತೆಗೆ ತಿಳಿಸುತ್ತಾ ಬಂದಿದ್ದಾರೆ. ಒಂದು ತಿಂಗಳ ಕಾಲ ಜರುಗುವ ಬಸವತತ್ವ ಪ್ರವಚನದಲ್ಲಿ ನಿತ್ಯ ಪ್ರವಚನಕ್ಕೆ ಬಂದ ಎಲ್ಲ ಭಕ್ತರಿಗೂ ಪ್ರಸಾದ ಸೇವೆಯನ್ನು ತೋಂಟದಾರ್ಯ ಪ್ರವಚನ ಸಮಿತಿಯಿಂದ ಪ್ರಸಾ ಸಮಿತಿ ಅಧ್ಯಕ್ಷ ದೇವಪ್ಪ ರಾಮೇನಹಳ್ಳಿಯವರ ನೇತೃತ್ವದಲ್ಲಿ ನಡೆಸಲಾಗುತ್ತಿದೆ.
ವಿವಿಧ ಕಾರ್ಯಕ್ರಮ: ಒಂದು ತಿಂಗಳಲ್ಲಿ ಭಾನುವಾರ ವಿವಿಧ ಜನಪದ ಕಾರ್ಯಕ್ರಮ, ಡೊಳ್ಳಿನ ಪದ, ದಿನ ಬೆಳಗ್ಗೆ ಯೋಗ, ಜ್ಞಾನ, ಪ್ರಾಣಾಯಾಮ, ಲಿಂಗಪೂಜೆ ವಿಧಾನ, ಲಿಂಗದೀಕ್ಷೆ, ವಿವಿಧ ದುಶ್ಚಟಗಳಿಂದ ಮುಕ್ತವಾಗಿಸಲು ನುರಿತ ಗಣ್ಯರಿಂದ ಉಪನ್ಯಾಸ ಹೀಗೆ ತಿಂಗಳುದ್ದಕ್ಕೂ ಪ್ರವಚನ ವಿಶೇಷವಾಗಿ ಸಾಗುತ್ತಾ ಬಂದಿದ್ದು, ಪ್ರವಚನ ಸಮಿತಿ ಎಲ್ಲ ಪದಾಧಿಕಾರಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ್ದಾರೆ.