ಝಾನ್ಸಿರಾಣಿಗೆ ಅಪಮಾನ: ಪ್ರತಿಭಟನೆ
ಗದಗ: ಸಿಬಿಎಸ್‌ಇ ಪಠ್ಯದಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿಯನ್ನು ಹುಕ್ಕಾ ಹಿಡಿದಿರುವಂತೆ ಚಿತ್ರಿಸಿ ಅಪಮಾನ ಮಾಡಿರುವುದನ್ನು ಖಂಡಿಸಿ ಮತ್ತು ಸಂಬಂಧಿಸಿದವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿ ಭಾನುವಾರ ನಗರದ ಗಾಂಧಿವೃತ್ತದಲ್ಲಿ ಹಿಂದೂ ಜನಜಾಗೃತಿ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಿದರು.
ಓರಿಯಂಟ್ ಬ್ಲಾಕ್‌ಸ್ಮಿತ್ ಪ್ರಕಾಶನವು ಪ್ರಕಾಶಿಸಿದ ಸಿಬಿಎಸ್‌ಇ 5ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಝಾನ್ಸಿಯ ಪಾತ್ರ ಎಂಬ ಅಧ್ಯಾಯದ 139ನೇ ಪುಟದಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿಯನ್ನು ಹುಕ್ಕಾ ಹಿಡಿದಿರುವಂತೆ ಚಿತ್ರಿಸಿ ಅಪಮಾನ ಮಾಡಲಾಗಿದೆ. ಝಾನ್ಸಿಯು ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ಲೆಕ್ಕಿಸದೇ ಹೋರಾಡಿದ ವೀರ ಮಹಿಳೆ. ಝಾನ್ಸಿಯ ಪ್ರೇರಣೆಯಿಂದಲೇ ಮುಂದೆ ಸುಭಾಷಚಂದ್ರ ಬೋಸ್‌ರಂತಹ ಕ್ರಾಂತಿಕಾರಿಗಳು ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಟ ಮಾಡಿದರು. ಮುಂದೆ ದೇಶವು ಸ್ವಾತಂತ್ರ್ಯವಾಯಿತು ಎಂದು ಪ್ರತಿಭಟನಾಕಾರರು ಹೇಳಿದರು.
ಒಂದು ಕಡೆ ಕೇಂದ್ರ ಸರ್ಕಾರ ಸಿನಿಮಾ, ಸಾರ್ವಜನಿಕ ಸ್ಥಳಗಳಲ್ಲಿ ಹುಕ್ಕಾ ಸೇವನೆ, ಧೂಮಪಾನ ಮಾಡುವ ಚಿತ್ರಗಳ ಮೇಲೆ ನಿಷೇಧ ಹಾಕುವ ಕಾನೂನು ಮಾಡುತ್ತಿದೆ. ಆದರೆ ಮತ್ತೊಂದು ಕಡೆ ಮಕ್ಕಳ ಪಠ್ಯಕ್ರಮದಲ್ಲಿ ಹುಕ್ಕಾ ಸೇವನೆ ಚಿತ್ರಹಾಕಿ ಮಕ್ಕಳನ್ನು ವ್ಯಸನಾಧೀನತೆ ಕಡೆಗೆ ವಾಲುವಂತೆ ಪ್ರಚೋದಿಸುತ್ತಿದೆ. ಈ ರೀತಿ ಕೇಂದ್ರ ಸರ್ಕಾರ ಮುಂದಿನ ಪೀಳಿಗೆಯನ್ನು ವ್ಯಸನಿಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ.
ರಾಣಿ ಹುಕ್ಕಾ ಸೇವನೆ ಮಾಡಿರುವ ಉಲ್ಲೇಖ ಇತಿಹಾಸದಲ್ಲಿಲ್ಲ. ಹೀಗಿರುವಾಗ ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಹುಕ್ಕಾ ಸೇವನೆ ಮಾಡುವ ಚಿತ್ರವನ್ನು ಹಾಕಿ ಝಾನ್ಸಿಯ ಅಪಮಾನ ಮಾಡಿ ದೇಶದ ಗೌರವಪೂರ್ಣ ಇತಿಹಾಸಕ್ಕೆ ಕಪ್ಪುಚುಕ್ಕೆಯನ್ನುಂಟು ಮಾಡಿದೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್‌ಗಾಂಧಿಯನ್ನು ಮಾನವೀಯತೆ ಮತ್ತು ದೂರದರ್ಶಿತ್ವ ಗುಣವುಳ್ಳ ದೇಶದ ಭಾವಿನಾಯಕ ಎಂಬಂತೆ ಬಿಂಬಿಸಿ ರಾಹುಲ್‌ಗಾಂಧಿಯ ಪಾಠವನ್ನು ಹಾಕಲಾಗಿದೆ.
ಇದು ಕಾಂಗ್ರೆಸ್ ಸರ್ಕಾರವನ್ನು ಹೊಗಳಲು ಉಪಯೋಗಿಸಿದಂತೆ ಕಂಡುಬರುತ್ತಿದೆ. ಅಲ್ಲದೇ ಪಠ್ಯಕ್ರಮ ಮಂಡಳಿಯ ದುರ್ಬಳಕೆ ಮಾಡುತ್ತಿದೆ. ಇಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ತಪ್ಪಿತಸ್ಥರಿಗೆ ಪಾಠಕಲಿಸಬೇಕು ಎಂದು ಆಗ್ರಹಿಸಿದರು. ನಗರದ ಜ. ತೋಂಟದಾರ್ಯ ಮಠದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಪ್ರಮುಖ ರಸ್ತೆಗಳ ಮೂಲಕ ಹಾದು ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಜಿ.ಆರ್.ಹಿರೇಮಠ, ನಾಗೇಶ್ವರ ಮಿತ್ರಮಂಡಳಿಯ ಅಧ್ಯಕ್ಷ ವಿಶ್ವನಾಥ ಅಂಗಡಿ, ಶ್ರೀರಾಮಸೇನೆಯ ಸಂಚಾಲಕ ರಾಜು ಖಾನಪ್ಪನವರ, ಜಯಶ್ರೀ ಹೆಬಸೂರ ಉಪಸ್ಥಿತರಿದ್ದರು.