ಬಸವ ವಸತಿ: ಹಣ ಬಾರದೇ ಮನೆ ಕಟ್ಟಿಸಿಕೊಂಡವರು ಕಂಗಾಲು
ಕನ್ನಡಪ್ರಭ ವಾರ್ತೆ, ನರಗುಂದ, ಆ. 4
ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡುವ ಭರವಸೆ ನೀಡುತ್ತದೆ. ಅದಕ್ಕಾಗಿ ಯೋಜನೆ ರೂಪಿಸುತ್ತಾರೆ. ಆದರೆ, ಯೋಜನೆಗಳು ಮಾತ್ರ ಸಫಲವಾಗುತ್ತಿಲ್ಲ ಎನ್ನುವುದಕ್ಕೆ ನರಗುಂದ ತಾಲೂಕಿನ ಬಸವ ವಸತಿ ಯೋಜನೆಯೇ ಪ್ರಮುಖ ಸಾಕ್ಷಿ. ತಾಲೂಕಿನಲ್ಲಿ ಮನೆಗಳ ನಿರ್ಮಾಣಕ್ಕಾಗಿ ಆಯ್ಕೆಯಾದ ಫಲಾನುಭವಿಗಳಿಗೆ ಸರ್ಕಾರದಿಂದ ಬರಬೇಕಾದ ಹಣ ಮಾತ್ರ ಬಿಡುಗಡೆಯಾಗದೇ ಬಡವರು ಮತ್ತಷ್ಟು ಕಂಗಾಲಾಗಿದ್ದಾರೆ.
ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೆ ಮನೆ ಕಟ್ಟಿಕೊಳ್ಳಲು ಅನುಕೂಲವಾಗಲೆಂದು ಬಸವ ವಸತಿ ಯೋಜನೆಯಡಿ ರು. 1.20 ಲಕ್ಷ ನೀಡುತ್ತದೆ. ಅದರಲ್ಲಿ ರು. 75 ಸಾವಿರ ಸಹಾಯಧನ ಇದೆ. ಇಂಥ ಮಹತ್ವದ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾದಿ ತಪ್ಪಿ ಹೋಗಿ, ನೈಜ ಫಲಾನುಭವಿಗಳು ಹಣ ಬಾರದೇ ಗೋಳಾಡುತ್ತಿದ್ದಾರೆ.
8300 ಮನೆ ಮಂಜೂರು: ಹಿಂದಿನ ಸರ್ಕಾರದಲ್ಲಿ ಮಾಜಿ ಸಚಿವ ಸಿ.ಸಿ. ಪಾಟೀಲ ತಮ್ಮ ಪ್ರಭಾವ ಬಳಸಿ ನರಗುಂದ ವಿಧಾನ ಮತಕ್ಷೇತ್ರಕ್ಕೆ 8300 ಮನೆಗಳನ್ನು ಮಂಜೂರು ಮಾಡಿಸಿದ್ದರು. 2010-11ನೇ ಸಾಲಿನಲ್ಲಿ ಈ ಯೋಜನೆಯಡಿಯಲ್ಲಿ ತಾಲೂಕಿನ ವಿವಿಧ ಗ್ರಾಪಂಗಳಿಗೆ ಮನೆ ನೀಡಲಾಗಿತ್ತು. ಅವುಗಳಲ್ಲಿ ಪ್ರಗತಿಯಾಗಿದ್ದು, ಮೊದಲ ಹಂತವಾಗಿ ಜಿಪಿಎಸ್ ಮಾಡಲಾಗಿದೆ. ರಾಜೀವಗಾಂಧಿ ವಸತಿ ನಿಗಮದಿಂದ 2013ರ ಜನವರಿ 29ರಂದು ಅನುಮೋದನೆಗೊಂಡು, ಫಲಾನುಭವಿಗಳು ಮನೆಗಳನ್ನು ಪ್ಲಿಂಥ್ ಹಂತದವರೆಗೆ ನಿರ್ಮಿಸಿದ್ದರೂ ಅವರಿಗೆ ಹಣವನ್ನು ಮಾತ್ರ ನೀಡುತ್ತಿಲ್ಲ. ಸಾಲ ಮಾಡಿ ಮನೆ: ನರಗುಂದ ತಾಲೂಕು ಸಂಪೂರ್ಣ ಕೃಷಿ ಆಧಾರಿತವಾಗಿದ್ದು, 2 ವರ್ಷಗಳಿಂದ ತೀವ್ರ ಬರಗಾಲದ ಛಾಯೆ ಆವರಿಸಿದ್ದು, ಇದರ ಮಧ್ಯೆಯೇ ತಾಲೂಕಿನ ಬಡವರು ಇಂದಲ್ಲ ನಾಳೆ ನಮಗೆ ಸರ್ಕಾರದಿಂದ ಹಣ ಬರುತ್ತದೆ ಎನ್ನುವ ಸದಾಶಯದೊಂದಿಗೆ ಬೇರೆ ಬೇರೆ ಜನರ ಬಳಿ ಸಾಲ ಮಾಡಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಇವರೆಲ್ಲಾ ಬಸವ ವಸತಿ ಯೋಜನೆಯಡಿಯಲ್ಲಿ ಗ್ರಾಪಂನವರು ನಡೆಸಿದ ಸಮೀಕ್ಷೆಯಲ್ಲಿಯೇ ಆಯ್ಕೆಯಾಗಿದ್ದಾರೆ. ಗ್ರಾಪಂ ಅಧಿಕಾರಿಗಳ ಸೂಚನೆಯ ಮೇರೆಗೆ ಮನೆಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದಾರೆ. ಆದರೆ, ಇಂದು ಸರ್ಕಾರ ಮಾತ್ರ ಬಡವರ ನೆರವಿಗೆ ಧಾವಿಸುತ್ತಿಲ್ಲ.
ಭರವಸೆ: ಗ್ರಾಪಂ ಅಧಿಕಾರಿಗಳು ನೀವು ಮನೆಗಳನ್ನು ಕಟ್ಟಿಸಿಕೊಳ್ಳಲು ಪ್ರಾರಂಭ ಮಾಡಿ ತಮಗೆ ಮುಂದೆ ಸರ್ಕಾರ ಹಣ ಸಂದಾಯ ಮಾಡುತ್ತದೆ. ಅದನ್ನು ಚೆಕ್‌ಗಳ ಮೂಲಕ ವಿತರಣೆ ಮಾಡಲಾಗುವದೆಂದು ಭರವಸೆ ನೀಡಿದ್ದಾರೆ.
ಇದರ ಆಧಾರದಲ್ಲಿಯೇ ತಾಲೂಕಿನ ಹಲವಾರು ಬಡವರು ಮನೆಗಳನ್ನು ನಿರ್ಮಿಸಿಕೊಂಡಿದ್ದು, ಭರವಸೆ ನೀಡಿದ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಮಾತ್ರ ಇದನ್ನು ಸಮರ್ಪಕವಾಗಿ ಗಮನಿಸದೇ ಇರುವುದರಿಂದ ಬಡವರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗಿವೆ.
-ಎಸ್.ಜಿ. ತೆಗ್ಗಿನಮನಿ