ರಾಷ್ಟ್ರ ಕಟ್ಟುವ ಮನೋಭಾವ ಬೆಳೆಸಿಕೊಳ್ಳಿ
ಗದಗ: ಯುವಕರು ರಾಹುಲ್ಗಾಂಧಿಯವರ ಕನಸಿನಂತೆ ರಾಷ್ಟ್ರಕಟ್ಟುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಅವರು ಭಾನುವಾರ ಸಂಜೆ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರ್ವತ್ರಿಕ ಚುನಾವಣೆಯಲ್ಲಿ ಯುವಕರ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಪಕ್ಷ ಗೆಲ್ಲಬೇಕಾದಲ್ಲಿ ಅವರ ಶ್ರಮವೇ ಪ್ರಮುಖವಾಗಿರುತ್ತದೆ. ಸದಸ್ಯತ್ವ ಅಭಿಯಾನ ಯುವಶಕ್ತಿಯನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ರಾಹುಲ್, ಸೋನಿಯಾ ಹಾಗೂ ಮನಮೋಹನ್ಸಿಂಗ್ ಸರ್ಕಾರದ ಯೋಜನೆಗಳನ್ನು ಜನಮಾನಸಕ್ಕೆ ತಲುಪಿಸುವ ಕಾರ್ಯದಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳಬೇಕಿದೆ. ರಾಜ್ಯ ಸರ್ಕಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಯುವಶಕ್ತಿಯನ್ನು ಗಮನದಲ್ಲಿರಿಸಿಕೊಂಡು ರಾಜೀವಗಾಂಧಿ ಚೈತನ್ಯ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆ ಸ್ವಾಭಿಮಾನಿ, ಸ್ವಾವಲಂಬಿ ಮನೋಭಾವನೆ ಉಳ್ಳವರನ್ನು ಗುರ್ತಿಸಿ, ಪ್ರತಿ ಗ್ರಾಮ ಮಟ್ಟದಲ್ಲಿ 50 ನಿರುದ್ಯೋಗಿ ಯುವಕರಿಗಾಗಿ ಸಂಘ ರಚಿಸುವ ಮೂಲಕ ಪ್ರತಿ ವ್ಯಕ್ತಿಗೆ ರು. 20 ಸಾವಿರ ಸಹಾಯಧನದ ಯೋಜನೆ ರೂಪಿಸಲಾಗಿದೆ. ರಾಜ್ಯದ ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಹಾವೇರಿ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಿಥುನ್ ಪಾಟೀಲ ಮಾತನಾಡಿ, ಸಂಘಟನೆ ಹಾಗೂ ಸದಸ್ಯತ್ವದ ಕುರಿತು ಯುವ ಕಾರ್ಯಕರ್ತರಿಗೆ ತಿಳಿವಳಿಕೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ಮಾಜಿ ಶಾಸಕ ಡಿ.ಆರ್. ಪಾಟೀಲ, ಬಿ.ಬಿ. ಅಸೂಟಿ, ಅಕ್ಬರ್ಸಾಬ ಬಬರ್ಚಿ, ಸಿದ್ದು ಪಾಟೀಲ, ಶ್ರೀನಿವಾಸ ಹುಯಿಲಗೋಳ, ಸಚಿನ್ ಪಾಟೀಲ, ಪರಪ್ಪ ಬಂದಕ್ಕನವರ, ಪ್ರಕಾಶ ಬಾಕಳೆ, ಉಮರ್ಫಾರೂಕ್ ಹುಬ್ಬಳ್ಳಿ, ಸುಧೀಂದ್ರ ಶಿವಪುರ, ಅಶೋಕ ಮಂದಾಲಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು. ಮಂಜುನಾಥ ಮುಳಗುಂದ ನಿರೂಪಿಸಿ, ವಂದಿಸಿದರು.