ಸ್ವಾತಂತ್ರ್ಯೋತ್ಸವಕ್ಕೆ ಗೈರಾದ್ರೆ ಕ್ರಮ
ಮುಂಡರಗಿ: ಸ್ವಾತಂತ್ರ್ಯೋತ್ಸವ ಅದ್ದೂರಿಯಾಗಿ ಆಚರಿಸಲು ಎಲ್ಲ ಇಲಾಖೆ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಕಡ್ಡಾಯವಾಗಿ ಹಾಜರಿರಬೇಕು. ಗೈರು ಇದ್ದವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಎಸ್.ಆರ್. ಶಿರಕೋಳ ಹೇಳಿದರು.
ಅವರು ಶುಕ್ರವಾರ ಪಟ್ಟಣದ ತಹಸೀಲ್ದಾರ್ ಸಭಾಭವನದಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಶಾಲಾ ವಿದ್ಯಾರ್ಥಿಗಳು, ಎನ್ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಪೊಲೀಸ್ ಸಿಬ್ಬಂದಿಯಿಂದ ಪರೇಡ್ ನಡೆಸುವುದು ಸೇರಿದಂತೆ ಮಕ್ಕಳಿಗೆ ಸಹಿತಿಂಡಿ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸುವ ಬಗ್ಗೆಯೂ ಚರ್ಚೆ ನಡೆಯಿತು. ತಾಪಂ ಇಒ ಡಿ.ಮೋಹನ ಮಾತನಾಡಿ, ಎಲ್ಲ ಇಲಾಖೆಯಲ್ಲಿಯೂ ವಿದ್ಯುತ್ ದೀಪ ಅಲಂಕರಿಸಬೇಕು ಹಾಗೂ ಕಡ್ಡಾಯವಾಗಿ ಇಲಾಖೆಯ ಕಚೇರಿಯಲ್ಲಿ ಆಯಾ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ರಾಷ್ಟ್ರೀಯ ಧ್ವಜಾರೋಹಣ ನೆರವೇರಿಸಬೇಕು ಎಂದು ಆದೇಶಿಸಿದರು.
ಸಿಂಗಟಾಲೂರು ಏತ ನೀರಾವರಿ ಅಭಿಯಂತರ ಜಿ.ಪಿ. ಶಿವಕುಮಾರ, ಪುರಸಭೆ ಆರೋಗ್ಯಾಧಿಕಾರಿ ಪಟ್ಟದಕಲ್ಲು, ಪಂಚಾಯತ್ ರಾಜ್ ಇಲಾಖೆಯ ಅಭಿಯಂತರ ಕೆ.ಬಿ. ಗಂಜಿಹಾಳ, ಸಮಾಜ ಕಲ್ಯಾಣಾಧಿಕಾರಿ ಶಿವಶಂಕರೇಗೌಡ, ರೇಷ್ಮೆ ಇಲಾಖೆಯ ಬಳ್ಳೊಳ್ಳಿ, ಸಿಡಿಪಿಒ ಎಸ್.ಎಸ್. ವಾರದ, ಅರಣ್ಯ ಇಲಾಖೆಯ ಎಂ.ಜಿ. ಕಮತರ, ಕೃಷಿ ಇಲಾಖೆಯ ರೇಖಾ, ಬಸವರಾಜ ನವಲಗುಂದ, ಕುರುವತ್ತೆಪ್ಪ ಅರಿಷಿಣದ, ಎಂ.ಜಿ. ವಡ್ಡಟ್ಟಿ ಎಎಸ್ಐ ಆರ್.ಎಂ. ತಳವಾರ ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ಸ್ವಾಗತಿಸಿದರು.