ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅತಿಯಾದ ಗಾಳಿ: ಒಣಗುವ ಹಂತಕ್ಕೆ ಬೆಳೆಗಳು

Lingaraj Badiger
Updated On : 6 Aug 2013, 11:50 am

ಕನ್ನಡಪ್ರಭ ವಾರ್ತೆ, ಗದಗ, ಆ. 5
ಜಿಲ್ಲೆಯಲ್ಲಿ ಬಿತ್ತನೆಯಾಗಿರುವ ಬೆಳೆಗಳು ಭೂಮಿಯಲ್ಲಿರುವ ಅಲ್ಪ ತೇವಾಂಶದ ಆಧಾರದಲ್ಲಿಯೇ ಹುಟ್ಟಿದ್ದು, ಒಂದು ವಾರದಿಂದ ಬೀಸುತ್ತಿರುವ ಅತಿಯಾದ ಗಾಳಿ, ಬಿತ್ತಿರುವ ಬೆಳೆಗಳಿಗೆ ತೀರಾ ತೊಂದರೆದಾಯಕವಾಗಿದ್ದು, ರೈತ ಸಮುದಾಯವನ್ನು ಕಂಗಾಲು ಮಾಡಿದೆ. ಅದರಲ್ಲಿಯೂ ಹೆಸರು ಮತ್ತು ಈರುಳ್ಳಿ ಬೆಳೆದ ರೈತರಿಗಂತೂ ಈ ಅತಿಯಾದ ಗಾಳಿ ದಂಗು ಬಡಿಸಿದೆ.
ಮುಂಗಾರು ಪ್ರಾರಂಭದಲ್ಲಿ ಚೆನ್ನಾಗಿ ಬಂದ ಮಳೆ ಅನಂತರ ಕೈಕೊಟ್ಟಿದ್ದು, ಬಂದಷ್ಟು ಬರಲಿ ಎನ್ನುವ ಧೈರ್ಯದಿಂದ ಎದೆಗುಂದದೇ ರೈತ ಬಿತ್ತನೆ ಮಾಡಿದ್ದಾರೆ. ಜಿಲ್ಲೆಯ ರೋಣ ಹಾಗೂ ಶಿರಹಟ್ಟಿ ತಾಲೂಕಿನ ಕೆಲವೆಡೆ ಬೆಳೆಗಳು ಕೊಂಚ ನೆಮ್ಮದಿ ತರುವಂತಿವೆ.
ಆಗಾಗ್ಗೆ ಬರುವ ತುಂತುರು ಮಳೆ ಬೆಳೆಗಳಿಗೆ ಜೀವ ಹಿಡಿಯಲು ಅನುಕೂಲಕರವಾಗಿತ್ತು. ಆದರೆ, ಅತಿಯಾದ ಪ್ರಮಾಣದಲ್ಲಿ ಬೀಸುತ್ತಿರುವ ಗಾಳಿಯಿಂದ ಬೆಳೆಗಳು ಕಿತ್ತು ಬೀಳುವ ಹಂತಕ್ಕೆ ಬಂದಿವೆ. ಈ ಅತಿಯಾದ ಗಾಳಿ ಕೇವಲ ಬೆಳೆಗಳಿಗೆ ಮಾತ್ರವಲ್ಲ ಭೂಮಿಯಲ್ಲಿರುವ ತೇವಾಂಶವೂ ಕಡಿಮೆಯಾಗುತ್ತಿದ್ದು ಬೆಳೆಗಳು ಮತ್ತಷ್ಟು ಬೇಗನೇ ಒಣಗುತ್ತವೆ.
ಉಳಿಸಿಕೊಳ್ಳುವ ಪ್ರಯತ್ನ: ಮಳೆ ಆಶ್ರಿತ ಕೃಷಿ ಭೂಮಿಯಲ್ಲಿ ಬಿತ್ತಿರುವ ಬೆಳೆಗಳು ತೇವಾಂಶ ಕೊರತೆಯಿಂದ ಮುದುಡಿಕೊಂಡಿವೆ. ಅದಕ್ಕಾಗಿ ಇಂದಲ್ಲ ನಾಳೆ ಮತ್ತೆ ಮಳೆಯಾದಲ್ಲಿ ಅನುಕೂಲವಾಗುತ್ತದೆ. ಅಲ್ಲಿಯವರೆಗೂ ಭೂಮಿಯಲ್ಲಿರುವ ಅಲ್ಪ ತೇವಾಂಶವಾದರೂ ಉಳಿಯಲಿ ಎನ್ನುವ ಮಹಾದಾಸೆಯಿಂದ ರೈತರು ಯಡಿ ಹೊಡೆಯುವ (ಬೆಳೆಗೆ ಬೇರಿಗೆ ಮಣ್ಣು ಬೀಳುವಂತೆ ಮಾಡುವುದು) ಕಾರ್ಯದಲ್ಲಿ ರೈತರು ಮಗ್ನರಾಗಿದ್ದಾರೆ. ಇನ್ನೂ ಕೆಲ ಕೃಷಿಕರು ಇಂದಿಗೂ ಬಿತ್ತನೆ ಮಾಡದೇ ವರುಣನ ಆಗಮನ ನಿರೀಕ್ಷೆಯಲ್ಲಿದ್ದಾರೆ. ಯರಿಭೂಮಿ(ಕಪ್ಪು) ಬೆಳೆಗಳು ಅಲ್ಪ ಜೀವ ಹಿಡಿದುಕೊಂಡು ವರುಣನ ಆಗಮನಕ್ಕೆ ಹಾತೊರೆಯುತ್ತಿವೆ. ಇನ್ನಾದರೂ ಪ್ರಕೃತಿ ಮಾತೆ ಕರುಣೆ ತೋರಿಸಲಿ ಎಂದು ವರುಣನಲ್ಲಿ ರೈತರು ಮೊರೆ ಇಡುವುದನ್ನು ಮಾತ್ರ ನಿಲ್ಲಿಸಿಲ್ಲ.

ಈರುಳ್ಳಿಗೆ ಹೆಚ್ಚಿನ ಸಮಸ್ಯೆ
ಅತಿಯಾದ ಗಾಳಿ ಈರುಳ್ಳಿ ಬೆಳೆದ ರೈತರಿಗಂತೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈರುಳ್ಳಿ ಬೆಳೆ ಹುಟ್ಟಿದ ಸಂದರ್ಭದಲ್ಲಿ ಅತ್ಯಂತ ತೆಳುವಾಗಿ ದಾರದಂತೆ ಇರುತ್ತದೆ. ಇಂಥ ಸಂದರ್ಭದಲ್ಲಿ ಅತಿಯಾದ ಗಾಳಿ ಬಿಸಿ ಹುಟ್ಟಿದ ಬೆಳೆಯೇ ಕಿತ್ತಿದೆ. ಈ ರೈತರು ಬೆಳೆಯನ್ನು ಉಳಿಸಿಕೊಳ್ಳಬೇಕಾದಲ್ಲಿ ಉತ್ತಮ ಮಳೆಯಾಗಬೇಕು. ಇಲ್ಲವೇ ಸದ್ಯ ಅತಿಯಾದ ಪ್ರಮಾಣದಲ್ಲಿ ಬೀಸುತ್ತಿರುವ ಗಾಳಿ ಕಡಿಮೆಯಾಗಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement