ಅವ್ವ ಟ್ರಸ್ಟ್ನಿಂದ ಮಾನಸಿಕ ಅಸ್ವಸ್ಥರಿಗೆ ನೆರವು
ಗದಗ: ಸಮಾಜದಲ್ಲಿನ ಶಾರೀರಿಕ, ಮಾನಸಿಕ ಅಸ್ವಸ್ಥರನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯಕ್ಕೆ ಅವ್ವ ಸೇವಾ ಟ್ರಸ್ಟ್ ಪ್ರಾಮುಖ್ಯ ನೀಡಲಿದೆ ಎಂದು ವಿಧಾನ ಪರಿಷತ್ ಸದಸ್ಯ, ಟ್ರಸ್ಟ್ನ ಅಧ್ಯಕ್ಷ ಬಸವರಾಜ ಹೊರಟ್ಟಿ ಹೇಳಿದರು.
ಅವರು ಮಂಗಳವಾರ ನಗರದ ಖಾಸಗಿ ಹೋಟೆಲ್ನಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
3 ವರ್ಷಗಳಿಂದ ಸಮಾಜಮುಖಿ ಕಾರ್ಯ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಾರಂಭಿಸಲಾದ ಟ್ರಸ್ಟ್ ಈ ಬಾರಿ ಗದಗ ನಗರದಲ್ಲಿ ಬೆಳಗಾವಿ ವಿಭಾಗ ಮಟ್ಟದ ಪ್ರತಿಭಾವಂತ ಅಂಧ, ವಿಕಲಚೇತನ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವನ್ನು ಆಗಸ್ಟ್ 10ರಂದು ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಬೆಳಗ್ಗೆ 11.30ಕ್ಕೆ ಆಯೋಜಿಸಲಾಗಿದೆ. ಸಮಾರಂಭದಲ್ಲಿ ಒಟ್ಟು 45 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಗದು ಬಹುಮಾನ ನೀಡಲಾಗುವುದು. ಕಾರ್ಯಕ್ರಮದ ಸಾನ್ನಿಧ್ಯ ವಹಿಸುವ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು, ಅವ್ವ ಹಾಗೂ ಅಶ್ವಿನಿ ನಕ್ಷತ್ರ ಪುಸ್ತಕಗಳ ಬಿಡುಗಡೆಗೊಳಿಸುವರು. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು. ವಿಶ್ವಸಂಸ್ಥೆಯ ಯುವ ಶೌರ್ಯ ಪ್ರಶಸ್ತಿ ಪುರಸ್ಕೃತೆ ಅಶ್ವಿನಿ ಅಂಗಡಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಬಿ.ಆರ್. ಯಾವಗಲ್ಲ, ಜಿ.ಎಸ್. ಪಾಟೀಲ, ರಾಮಕೃಷ್ಣ ದೊಡ್ಡಮನಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಪ್ರಾಧ್ಯಾಪಕ ಡಾ. ಕಬ್ಬಿನಾಲೆ, ವಸಂತ ಭಾರದ್ವಾಜ ವಿಶೇಷ ಉಪನ್ಯಾಸ ನೀಡುವರು. ರಾಜಣ್ಣ ಕೊರವಿ, ಶಶಿ ಸಾಲಿ, ಧೀರೇಂದ್ರ ಹುಯಿಲಗೋಳ, ವಸಂತ ಹೊರಟ್ಟಿ ಇತರರಿದ್ದರು.
ಜೆಡಿಎಸ್ಗೆ ಗೆಲವು ಖಚಿತ: ಬಸವರಾಜ ಹೊರಟ್ಟಿ
ಗದಗ: ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಗೆಲವು ಖಚಿತವಾಗಿದೆ ಎಂದು ವಿಪ ಸದಸ್ಯ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಉಪ ಚುನಾವಣೆಯನ್ನು ನಮ್ಮ ಪಕ್ಷ ಅತ್ಯಂತ ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ ಜರುಗುತ್ತಿರುವ ಚುನಾವಣೆಗಳಿಂದ ಪಕ್ಷ ದೂರ ಉಳಿದಿದ್ದು, ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ ಎಂದರು. ನೀವು ಯಾವುದಾದರೂ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಇನ್ನು ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಮುಂದಿನ ಬೆಳವಣಿಗೆಯನ್ನು ಗಮನಿಸಿ, ಕುಮಾರಸ್ವಾಮಿ ನಿರ್ಧಾರ ತೆಗೆದುಕೊಂಡು ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಿದ್ದಾರೆ ಎಂದರು.