ಗದಗ ಜಿಲ್ಲೆ ಬರಪೀಡಿತ: ಘೋಷಿಸಿ
ಕನ್ನಡಪ್ರಭ ವಾರ್ತೆ, ಗದಗ, ಆ. 5
ಗದಗ ಜಿಲ್ಲೆಯು ಸತತ 3 ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದ್ದು, ಈ ವರ್ಷವೂ ಜಿಲ್ಲೆ ಬರಗಾಲದ ಬವಣೆಗೀಡಾಗಿದೆ. ಹೀಗಾಗಿ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿ, ಬರಗಾಲ ಪೀಡಿತ ಪ್ರದೇಶ ನೀಡುವ ಎಲ್ಲ ಸವಲತ್ತುಗಳು ಮತ್ತು ಪರಿಹಾರವನ್ನು ಅಳವಡಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಜಿ. ಶಾಂತಸ್ವಾಮಿಮಠ, 3 ವರ್ಷಗಳಿಂದ ಜಿಲ್ಲೆಯಲ್ಲಿ ಬರಗಾಲ ಉಂಟಾಗಿ ರೈತರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳು ಗಮನಹರಿಸಿ ಜಿಲ್ಲೆಯ ರೈತರ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ. ಅಲ್ಲದೇ ಪೊಸ್ಕೋ ಸಂಬಂಧಿತವಾಗಿ ಕೆಐಡಿಬಿ ವಶಪಡಿಸಿಕೊಂಡ ಭೂಮಿಯ ವಿಚಾರದಲ್ಲಿ ಪೊಸ್ಕೋ ರಾಜ್ಯದಿಂದ ಹೊರಹೋದರೂ ಈ ಭೂಮಿಯು ಇನ್ನೂ ಕೆಐಡಿಬಿ ವಶದಲ್ಲಿದೆ. ಈಗ ರೈತರಿಗೆ ತಮ್ಮ ದೈನಂದಿನ ವ್ಯವಹಾರಗಳಿಗೆ ಅತಿಯಾದ ತೊಂದರೆಯಾಗುತ್ತದೆ. ಕಾರಣ ಕೆಐಡಿಬಿ ವಶದಲ್ಲಿರುವ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿ ಅದನ್ನು ರಾಜ್ಯ ಸರ್ಕಾರ ರಾಜ್ಯಪತ್ರದಲ್ಲಿ ಪ್ರಕಟಿಸಬೇಕು.
ಗಣಿಗಾರಿಕೆ ನಿಷೇಧಿಸಿ: ಕಪ್ಪತಗುಡ್ಡ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದ್ದು, ಅದನ್ನು ತತ್ಕ್ಷಣ ನಿಲ್ಲಿಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿ ಕಪ್ಪತಗುಡ್ಡ ಸಂರಕ್ಷಣೆ ಮಾಡಬೇಕು. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ ಮತ್ತು ಕಪ್ಪತಗುಡ್ಡ ವ್ಯಾಪ್ತಿಯಲ್ಲಿ ಬರುವ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಮತ್ತು ಮಹಾಲಿಂಗಪುರದಲ್ಲಿ ಬಂಗಾರದ ಗಣಿಗಾರಿಕೆ ನಡೆಯುತ್ತಿದ್ದು, ಈ ಗಣಿಗಾರಿಕೆಗೆ ಉಪಯೋಗಿಸುತ್ತಿರುವ ರಾಸಾಯನಿಕಗಳಲ್ಲಿ ಆರ್ಸೆನಿಕ್ ಸೈನೆಡ್, ಇದು ಪ್ರಪಂಚದ ಘೋರ ವಿಷಕಾರಿಯಾಗಿದ್ದು, ಪ್ರಪಂಚದ 176 ದೇಶದಲ್ಲಿ ಇದನ್ನು ನಿಷೇಧಿಸಿದ್ದಾರೆ. ಆದರೆ, ಇಲ್ಲಿ ಇದೇ ಆರ್ಸೆನಿಕ್ ಸೈನೆಡ್ ಉಪಯೋಗಿಸುವುದರಿಂದ ನೆಲ, ಜಲ, ವಾಯು ಮತ್ತು ಆಹಾರ ಎಲ್ಲವೂ ವಿಷಪೂರತವಾಗುವುದರಿಂದ ಮನುಷ್ಯರ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ತೀವ್ರ ಹಾನಿಯನ್ನುಂಟ ಮಾಡುತ್ತದೆ. ಇದನ್ನು ತತಕ್ಷಣ ನಿಲ್ಲಿಸಬೇಕು.
ಜಿಂಕೆ ವನ ಮಾಡಿ: ಈಚೆಗೆ ಸರ್ಕಾರ ರೂಪಿಸಿರುವ ಅನ್ನಭಾಗ್ಯ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳುವಲ್ಲಿ ವಿಫಲವಾಗುತ್ತಿದ್ದು, ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ರೈತರ ಹೊಲದಲ್ಲಿ ಜಿಂಕೆಗಳ ಹಾವಳಿ ಅತಿಯಾಗಿದ್ದು, ಇದನ್ನು ನಿಯಂತ್ರಿಸಲು ಅರಣ್ಯ ಇಲಾಖೆಯವರಿಗೆ ಹಲವು ಬಾರಿ ವಿನಂತಿಸಿದರೂ ಪ್ರಯೋಜನವಾಗಿಲ್ಲ. ಕಾರಣ ಜಿಲ್ಲೆಯಲ್ಲಿ ಬಂಕಾಪುರ ಮಾದರಿಯಲ್ಲಿ ಜಿಂಕೆಯ ವನಮಾಡಿ ಜಿಂಕೆಯಿಂದಾಗುತ್ತಿರುವ ತೊಂದರೆ ತಪ್ಪಿಸಬೇಕು. ಜಿಂಕೆಯ ಹಾವಳಿಯಿಂದ ತತ್ತರಿಸಿದ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು.
ಗಾಂಧೀಜಿ ಮೂರ್ತಿ ಪ್ರತಿಷ್ಠಾಪಿಸಿ: ರಾಜ್ಯದ ಎಲ್ಲ ಅಣೆಕಟ್ಟೆಗಳು ಭರ್ತಿಯಾಗಿದ್ದು, ವಿದ್ಯುತ್ ಉತ್ಪಾದನೆ ಸಮರ್ಪಕವಾಗಿದ್ದು, ಹಾಗಾಗಿ ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶದ ರೈತರ ಪಂಪ್ಸೆಟ್ಗಳಿಗೆ ದಿನದ 24 ಗಂಟೆ ನಿರಂತರ ವಿದ್ಯುತ್ ನೀಡಬೇಕು. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಬಸ್ ನಿಲ್ದಾಣದಲ್ಲಿರುವ ಮಹಾತ್ಮ ಗಾಂಧೀಜಿಯವರ ಮೂರ್ತಿ ಭಗ್ನಗೊಂಡು 2-3 ವರ್ಷ ಗತಿಸಿದರೂ ಕ್ರಮ ಕೈಗೊಂಡಿಲ್ಲ. ಗದಗ ತಾಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿ ದುಷ್ಕರ್ಮಿಗಳಿಂದಾಗಿ ಮಹಾತ್ಮ ಗಾಂಧೀಜಿ ಮೂರ್ತಿ ಭಗ್ನಗೊಂಡಿದ್ದು, ಅದನ್ನು ಶೀಘ್ರವೇ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಮನವಿ ಸಲ್ಲಿಸಿದರು.
ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ, ಗಿರಿಜಾ ರಾಠೋಡ, ಎಸ್.ಡಿ. ಕಂಬಳಿ, ಬೀರಪ್ಪ, ಸೋಮಪ್ಪ ಹೈತಾಪುರ, ಎಂ.ಎ. ವಡ್ಡಟ್ಟಿ, ಚಂದ್ರಕಾಂತ ಉಳ್ಳಾಗಡ್ಡಿ, ಮಲ್ಲಪ್ಪ, ನಿಂಗಪ್ಪ, ಮಹದೇವಪ್ಪ, ಮಂಜಪ್ಪ ಕುರಿ ಮುಂತಾದವರು ಇದ್ದರು.