ತಾಯಿ ಹಾಲಿಗಿಂತ ಅತ್ಯುತ್ತಮ ಆಹಾರ ಮತ್ತೊಂದಿಲ್ಲ: ವರವಿ
ಗದಗ: ತಾಯಿ ಹಾಗೂ ಮಗುವಿನ ಆರೋಗ್ಯವು ಸಮೃದ್ಧವಾಗಿರಲು ತಾಯಿಯು ಮಗುವಿಗೆ ತನ್ನ ಎದೆ ಹಾಲನ್ನೇ ಪ್ರೀತಿ ಪೂರ್ವಕವಾಗಿ ಉಣಬಡಿಸಬೇಕು, ಮಗುವಿಗೆ ತಾಯಿಯ ಎದೆ ಹಾಲಿಗಿಂತ ಅತ್ಯುತ್ತಮ ಆಹಾರ ಮತ್ತೊಂದಿಲ್ಲ ಎಂದು ಗದಗ ಬೆಟಗೇರಿ ಇನ್ನರವ್ಹೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣ ವರವಿ ಹೇಳಿದರು.
ತಾಲೂಕಿನ ಚಿಕ್ಕಹಂದಿಗೋಳ ಗ್ರಾಮದಲ್ಲಿ ಗದಗ-ಬೆಟಗೇರಿ ಇನ್ನರವ್ಹೀಲ್ ಕ್ಲಬ್ ನೇತೃತ್ವದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಯಿಯ ಹಾಲು ಅಮೃತಕ್ಕೆ ಸಮಾನ, ಎದೆ ಹಾಲು ಕುಡಿದ ಮಗು ಸರ್ವಾಂಗೀಣ ಅಭಿವೃದ್ಧಿ ಹೊಂದಬಲ್ಲದು. ಅದಕ್ಕಾಗಿ ತಾಯಿಯನ್ನು ನಾವು ದೇವತೆ ಎನ್ನುತ್ತೇವೆ ಎಂದರು. ಚಿಕ್ಕಹಂದಿಗೋಳದ ಆಯುಷ್ಯ ವೈದ್ಯಾಧಿಕಾರಿ ಡಾ. ಅಶೋಕ ಮತ್ತಿಗಟ್ಟಿ ಉಪನ್ಯಾಸ ನೀಡಿ, ಮಗು ಜನಿಸಿದ ತಕ್ಷಣ ತಾಯಂದಿರು ಮೂಢನಂಬಿಕೆ, ಅಂಧಶ್ರದ್ಧೆಗಳಿಗೆ ಬಲಿಯಾಗದೆ ತಾಯಿಯ ಹಾಲು ಉಣಿಸಬೇಕು, ಇದು ರೋಗ ನಿರೋಧಕವಾಗಿದ್ದು, ಮಗುವಿನ ಬೆಳವಣಿಗೆಗೆ ಬೇಕಾದ ಕೋಲೆಸ್ಟ್ರಾಲ್ ಪ್ರಮಾಣ ಇದರಲ್ಲಿ ಹೆಚ್ಚಾಗಿರುತ್ತದೆ ಎಂದರು. ಬಾಣಂತಿ ಹಾಗೂ ಆರೈಕೆ ಕುರಿತು ಗದುಗಿನ ಚಿಕಿತ್ಸಾಲಯದ ಡಾ. ಮೀನಾಕ್ಷಿ ಮತ್ತಿಗಟ್ಟಿ ಮಾತನಾಡಿದರು.
ಶಿಕ್ಷಕಿ ಶಿವಲೀಲಾ ಹಿರೇಮಠ, ನಜಮಾ ಕಿತ್ತೂರ, ಆಶಾ ಕಾರ್ಯಕರ್ತೆ ಮಂಜುಳಾ ಬಾಣಿಕಟ್ಟಿ, ಗ್ರಾಪಂ ಅಧ್ಯಕ್ಷೆ ಶಿವಮ್ಮ ಜಂತ್ಲಿ, ನಾಗರತ್ನ ಹಿರೇಮಠ, ಫಾತಿಮಾ ನದಾಫ ಇತರರಿದ್ದರು.