ಪ್ರವಚನ ಮಂಗಲೋತ್ಸವ: ಬಸವೇಶ್ವರ ಪುತ್ಥಳಿ ಮೆರವಣಿಗೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ಆ. 5
ಒಂದು ತಿಂಗಳಿನಿಂದ ಮುಂಡರಗಿಯಲ್ಲಿಯು ತೋಂಟದಾರ್ಯ ಮಠದಲ್ಲಿ ಜರುಗಿದ ವಚನ ಸಂಸ್ಕೃತಿ ದರ್ಶನ ಮಂಗಲೋತ್ಸವ ಕಾರ್ಯಕ್ರಮ ನಿಮಿತ್ತ ಮಹಾದ್ವಾರದ ಮೇಲೆ ಪ್ರತಿಷ್ಠಾನೆಗೊಳ್ಳಲಿರುವ ಮಹಾತ್ಮ ಬಸವೇಶ್ವರ ಕಂಚಿನ ಪುತ್ಥಳಿ, ಪಲ್ಲಕ್ಕಿಯಲ್ಲಿ ಬಸವೇಶ್ವರ ಭಾವಚಿತ್ರ ಹಾಗೂ ಯಡಿಯೂರ ಸಿದ್ಧಲಿಂಗೇಶ್ವರ ಭಾವಚಿತ್ರ ಮತ್ತು ಬಸವಾದಿ ಪ್ರಮಥರ ವಚನದ ಕಟ್ಟುಗಳ ಮೆರವಣಿಗೆ ಸೋಮವಾರ ವಿವಿಧ ವಾದ್ಯ ಮೇಳಗಳೊಂದಿಗೆ ಸೋಮವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅದ್ದೂರಿಯಿಂದ ಜರುಗಿತು.
ತೋಂಟದಾರ್ಯ ಮಠದಿಂದ ಪ್ರಾರಂಭವಾದ ಮೆರವಣಿಗೆಗೆ ಪುರಸಭೆ ಮಾಜಿ ಅಧ್ಯಕ್ಷ ರವೀಂದ್ರ ಉಪ್ಪಿನಬೆಟಗೇರಿ ಚಾಲನೆ ನೀಡಿದರು. ಚಿಕ್ಕಮಂಗಳೂರು ಜಿಲ್ಲೆ ಲಿಂಗದಹಳ್ಳಿಯ ಸಹ್ಯಾದ್ರಿ ಮಹಿಳಾ ವೀರಗಾಸೆ ನೃತ್ಯತಂಡ, ರಾಮಸಾಗರದ ಕಹಳೆವಾದನ, ಅಂತಾರವಳ್ಳಿ ಹಲಗೆ ಮೇಳ, ಯಳವತ್ತಿಯ ಆರ್ಕೆಸ್ಟ್ರಾಮೇಳ ಹಾಗೂ ಸ್ಥಳೀಯ ಕರಡಿಮಜಲು ಸೇರಿದಂತೆ ಅನೇಕ ಕಲಾಪ್ರತಿಭೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಮಕ್ಕಳಿಂದ ಬಸವೇಶ್ವರ ಹಾಗೂ ಅಕ್ಕಮಹಾದೇವಿ ವೇಷ ಪ್ರದರ್ಶನಗೊಂಡಿತು.
ಪ್ರವಚನಕಾರ ಕುಮಾರದೇವರು, ಪ್ರವಚನ ಸಮಿತಿ ಅಧ್ಯಕ್ಷ ಧ್ರುವಕುಮಾರ ಹೊಸಮನಿ, ಉಪಾಧ್ಯಕ್ಷರಾದ ಪಾಲಾಕ್ಷಿ ಗಣದಿನ್ನಿ, ಡಿ.ಡಿ. ಮೋರನಾಳ, ಕಾರ್ಯದರ್ಶಿ ಸೊಲಬಪ್ಪ ಜೋಬಾಳಿ, ಖಜಾಂಚಿ ಕೊಟ್ರಯ್ಯ ಅಮರಗೋಳ ಹಿರೇಮಠ, ಸೇವಾ ಸಮಿತಿ ಅಧ್ಯಕ್ಷ ಈಶಣ್ಣ ಬೆಟಗೇರಿ, ವರ್ತಕರಾದ ಕೊಟ್ರೇಶ ಅಂಗಡಿ, ಸಂಗಣ್ಣ ಲಿಂಬಿಕಾಯಿ, ಗೌತಮ್ಚಂದ್ ಚೋಪ್ರಾ, ಎ.ಪಿ. ದಂಡಿನ, ಸುರೇಶ ಬಣಕಾರ, ನಾಗೇಶ ಹುಬ್ಬಳ್ಳಿ, ಎ.ಕೆ. ಮುಲ್ಲಾನವರ, ಸಿಬಿಎಸ್ ಶಾಲೆಯ ಪ್ರಾಚಾರ್ಯ ಕ್ಯಾ. ಮಹೇಶ ಮಾಲಗತ್ತಿ, ಸಿಬ್ಬಂದಿ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.