ಮಕ್ಕಳಗಾಗಿ ಚಂದನ ಶಾಲೆಯ ವಿಭಿನ್ನ ಪ್ರಯೋಗ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ. ಆ. 5
ಪ್ರತಿ ಮಗುವಿನಲ್ಲಿರುವ ವಿಶಿಷ್ಟ ವ್ಯಕ್ತಿತ್ವ ಬೆಳೆಸುವ ಕಾರ್ಯ ಮಾಡಬೇಕಾಗಿದೆ. ಮಕ್ಕಳನ್ನು ಪಠ್ಯಕ್ಕೆ ಸೀಮಿತರನ್ನಾಗಿ ಮಾಡದೆ ಅವರಲ್ಲಿ ಬೇರೆ ಬೇರೆ ಚಟುವಟಿಕೆ ಬಗ್ಗೆ ಆಸಕ್ತಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಅಡುಗೆ ತಯಾರಿಸುವ ಕಲೆ ತಿಳಿಸಿಕೊಟ್ಟು, ಮಕ್ಕಳಿಂದ ವಿವಿಧ ರೀತಿಯ ಅಡುಗೆ ತಯಾರಿಸಿ, ಅವುಗಳನ್ನು ಶಾಲಾ ಆವರಣದಲ್ಲಿ ಪ್ರಸ್ತುತ ಪಡಿಸುವಂತ ವಿಭಿನ್ನ ಪ್ರಯೋಗವನ್ನು ಪಟ್ಟಣದ ಚಂದನ ಶಾಲೆ ವಿದ್ಯಾರ್ಥಿಗಳು ಮಾಡಿದ್ದು ವಿಶೇಷವಾಗಿತ್ತು.
ಪಟ್ಟಣದ ಚಂದನ ಶಾಲೆಯ ವಿದ್ಯಾರ್ಥಿಗಳು ಶನಿವಾರ ವಿವಿಧ ರೀತಿಯ ಅಡುಗೆ ಪದಾರ್ಥಗಳನ್ನು ತಮ್ಮ ಮನೆಯಲ್ಲಿ ತಯಾರಿಸಿಕೊಂಡು ಬಂದು, ಶಾಲೆಯಲ್ಲಿ ಅವುಗಳನ್ನು ಪ್ರಸ್ತುತಪಡಿಸುವ ವಿಶಿಷ್ಟ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಈ ಪಠ್ಯೇತರ ಚಟುವಟಿಕೆ ಕಾರ್ಯಕ್ರಮದ ಅಂಗವಾಗಿ ಮಕ್ಕಳು ತಮ್ಮ ಮನೆಯಲ್ಲಿ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರು ಮಾಡಿಕೊಂಡು ಬಂದಿದ್ದು ಆಕರ್ಷಣಿಯವಾಗಿತ್ತು.
ವಿಟಾಮಿನ್‌ಗಳ ಮಾಹಿತಿ: ಮಕ್ಕಳಿಗೆ ಆಹಾರವನ್ನು ಹೇಗೆ ತಯಾರು ಮಾಡಬೇಕು. ಅವುಗಳಲ್ಲಿ ಯಾವ ಯಾವ ಪದಾರ್ಥಗಳನ್ನು ಬೆರಸುತ್ತಾರೆ. ರುಚಿಗಾಗಿ, ಖಾರಕ್ಕಾಗಿ ಏನು ಮಾಡಬೇಕು. ಅಡುಗೆಯನ್ನು ಯಾವ ರೀತಿಯಲ್ಲಿ ಬೇಯಿಸಬೇಕು. ಯಾವ ಅಡುಗೆ ಪದಾರ್ಥದಲ್ಲಿ ಯಾವ ಯಾವ ಪೋಷಕಾಂಶಗಳು, ಪ್ರೋಟಿನ್‌ಗಳು ಹಾಗೂ ವಿಟಾಮಿನ್‌ಗಳು ಎಷ್ಟು ಪ್ರಮಾಣದಲ್ಲಿ ಸಿಗುತ್ತವೆ ಎಂಬ ಮಾಹಿತಿಯು ವಿದ್ಯಾರ್ಥಿಗಳಿಗೆ ತಿಳಿಯುವುದಲ್ಲದೆ ಬೇರೆ ವಿದ್ಯಾರ್ಥಿಗಳಿಗೆ ಆ ಮಾಹಿತಿಯನ್ನು ತಿಳಿಸಿಕೊಡುವ ಮೂಲಕ ಪಠ್ಯೇತರ ಚಟುವಟಿಕೆಯ ಪಾಠದಲ್ಲಿ ಮಕ್ಕಳಿಗೆ ಕಲಿಸಿ ಕೊಡುವ ವಿನೂತನ ಪ್ರಯೋಗವನ್ನು ಚಂದನ ಶಾಲೆಯ ಮಕ್ಕಳಿಂದ ಮಾಡಿಸಲಾಗಿತ್ತು.
ಪದಾರ್ಥಗಳು: ಮಕ್ಕಳು ಜಾಮೂನು, ಶಂಕರ ಪಾಳೆ, ಹೆಸರು ಬೇಳೆ ಪಾಯಸ, ಉತ್ತಮ ಆರೋಗ್ಯಕ್ಕೆ ಅವಶ್ಯವಾಗಿರುವ ಬೀಟ್‌ರೂಟ್ ಜ್ಯೂಸ್, ಕೊಬ್ಬರಿ ಮಿಠಾಯಿ, ಉದ್ದಿನ ವಡಾ, ಪಾಲಕ್ ಚೆಕ್ಕುಲಿ, ಮೈಸೂರು ಬಜಿ, ಉತ್ತರ ಕರ್ನಾಟಕದ ಸ್ಪೇಷಲ್ ಗಿರಮಿಟ್ ಮಂಡಕ್ಕಿ, ಮೆಂತೆ ಪಲಾವ್, ಗಜ್ಜರಿ ಹಲ್ವಾ, ಪುದೀನಾ ಪಲಾವ್ ಅಷ್ಟೇ ಅಲ್ಲದೆ ಉತ್ತರ ಕರ್ನಾಟಕದ ಗ್ರಾಮೀಣ ಅಡುಗೆಯಾದ ಸಂಪೂರ್ಣ ಊಟವನ್ನು ಮಕ್ಕಳು ಮನೆಯಲ್ಲಿ ತಯಾರಿಸಿಕೊಂಡು ಬಂದು ಆ ಅಡುಗೆಯಲ್ಲಿನ ಮಹತ್ವವನ್ನು ಸಹಪಾಠಿಗಳಿಗೆ ವಿವರಿಸಿ ಹೇಳುವ ಪ್ರಯೋಗವನ್ನು ಚಂದನ ಶಾಲೆ 9ನೇ ತರಗತಿಯ ಮಕ್ಕಳು ಮಾಡಿದ್ದು ಮುದ ನೀಡುವಂತಿತ್ತು. ಮುಖ್ಯೋಪಾಧ್ಯಾಯ ಚಂದ್ರಹಾಸ ಪಟಗಾರ ಹಾಗೂ ಸಂಸ್ಥೆಯ ಅಧ್ಯಕ್ಷ ಟಿ. ಈಶ್ವರ ಮಕ್ಕಳ ಈ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದ್ದು ಮೆಚ್ಚುವ ಸಂಗತಿಯಾಗಿತ್ತು.