ರೋಜಾ ಆಚರಿಸಿದ ಮಹಾಂತೇಶ ಬನ್ನಿಗೋಳಗೆ ಸನ್ಮಾನ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಆ. 5
ರಂಜಾನ್ ಉಪವಾಸ ಆಚರಣೆ ಮಾಡುವುದರ ಜತೆ (ರೋಜಾ) ಉಪವಾಸ ನಿರತ ಮುಸ್ಲಿಂ ಬಾಂಧವರಿಗೆ ಸಾಮೂಹಿಕ ಇಪ್ತಿಯಾರ್ ಕೂಟ (ಸಸ್ಯಹಾರಿ) ಆಯೋಜಿಸುವ ಮೂಲಕ ಸೌಹಾರ್ದ ಮೆರೆದಿರುವ ಸ್ಥಳೀಯ ಹಿಂದೂ ಸಮಾಜದ ಮಹಾಂತೇಶ ಬನ್ನಿಗೋಳ ಅವರನ್ನು ಈಚೆಗೆ ಮುಸ್ಲಿಂ ಬಾಂಧವರು ಸನ್ಮಾನಿಸಿದರು.
ಪಟ್ಟಣದ ಬೂದಿಹಾಳ ಓಣಿ ನಿವಾಸಿ ಮಹಾಂತೇಶ ಬನ್ನಿಗೋಳ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು 5 ವರ್ಷದಿಂದ ಪ್ರತಿ ರಂಜಾನ್ ತಿಂಗಳಲ್ಲಿ ಕೆಲ ದಿವಸ ತಾವೂ ಕಠೋರ ಉಪವಾಸ ವ್ರತ ಆಚರಿಸುತ್ತಾರೆ. ಈ ಬಾರಿಯೂ ಮುಸ್ಲಿಂ-ಹಿಂದೂ ಬಾಂಧವರಿಗೆ ಸಾಮೂಹಿಕ ಔತಣಕೂಟ (ಇಫ್ತಿಯಾರ್) ಏರ್ಪಡಿಸಿ ಮನಸ್ಸುಗಳನ್ನು ಬೆಸೆಯುವ ಕಾರ್ಯ ನಡೆಸಿರುವುದು ಜನರ ಪ್ರಶಂಸೆಗೆ ಪಾತ್ರವಾಗಿದೆ.
ಪವಿತ್ರ ಕುರಾನ್ ಗ್ರಂಥದಲ್ಲಿ ಉಲ್ಲೇಖಿಸಿದನ್ವಯ ರಂಜಾನ್ ಉಪವಾಸದಿಂದ ಮಾನವನ ಮಾನವೀಯತೆ ಜಾಗೃತಿಗೊಳ್ಳುವುದನ್ನು ನೆನಪಿಸುವ ಸುದಿನ ಎಂದು ಭಾವಿಸಲಾಗಿದೆ. ಮಾನವತೆಗೆ ಎಲ್ಲವನ್ನು ಸಮರ್ಪಿಸಿದ ದೈವಿಶಕ್ತಿಗೆ ಕೃತಜ್ಞತೆ ಅರ್ಪಿಸುವ ಸುವರ್ಣ ಅವಕಾಶವಿದು. ಕ್ಷಮೆ, ಸಹಬಾಳ್ವೆ, ಕೃತಜ್ಞತಾ ಸಮರ್ಪಣೆ ಹಾಗೂ ನೈತಿಕ ದಿಗ್ವಿಜಯದ ಸಂಕೇತವಾದ ಈ ರಂಜಾನ್ ಮಾಸದಲ್ಲಿ ಅಸಹಾಯಕರಿಗೆ ನೆರವಾಗುವ ಕಾಯಕದಲ್ಲಿ ತೊಡಗಿಸಿಕೊಂಡಾಗ ಮಾತ್ರ ಕುಟುಂಬದಲ್ಲಿ ಶಾಂತಿ, ಸಂತಸ, ನೆಮ್ಮದಿ ವೃದ್ಧಿಸುತ್ತದೆ ಎಂಬುದರಿತು ಈ ವ್ರತಾಚರಣೆ ನಡೆಸಿದ್ದೇನೆ ಎಂದು ಮಹಾಂತೇಶ ತಿಳಿಸಿದರು.
ಔತಣಕೂಟದಲ್ಲಿ ಉಪಸ್ಥಿತರಿದ್ದ ಹಾಜಿ ಎಂ.ಕೆ. ಹಿರೇಹಾಳ ಮಾತನಾಡಿದರು. ಉಪವಾಸ ನಿರತರು ಬದಾಮ ಪುರಿ, ಮೈಸೂರ ಪಾಕ್, ಚಪಾತಿ, ರೊಟ್ಟಿ, ಚಟ್ನಿ, ಮೊಸರು, ಎಣ್ಣಿಗಾಯಿ ಪಲ್ಲೇ, ಹೆಸರು ಕಾಳು ಪಲ್ಲೇ ಸೇರಿದಂತೆ ಔತಣದ ವಿಶೇಷ ರುಚಿ ಸವಿದರು. ಇದೇ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಮಹಾಂತೇಶ ಬನ್ನಿಗೋಳ ಅವರನ್ನು ಸನ್ಮಾನಿಸಿದರು. ಸುಭಾನಸಾಬ ಆರಗಿದ್ದಿ, ಉಸ್ಮಾನ ಗೋಡೆಕಾರ, ಎಂ.ಎಸ್. ಮಕಾನದರ, ಮುನ್ನಾ ಹಣಗಿ, ನಾಶಿರ ಸುರಪುರ, ಎಸ್.ಎಸ್. ಖಾದರಿ, ಬಾಬು ನದಾಫ, ಎ.ಬಿ. ತಹಶೀಲ್ದಾರ, ಎಂ.ಕೆ. ಘೋರ್ಪಡೆ ಮುಂತಾದವರು ಇದ್ದರು.