ಸಂತ ತುಕಾರಾಮರ ಗುಲಾಲ ಕೀರ್ತನೆ
ಗದಗ: ಮಾನವರ ಏಳ್ಗೆಗಾಗಿ ತಮ್ಮ ಬದುಕನ್ನೇ ಸಮಾಜಕ್ಕೆ ಅರ್ಪಿಸಿದ ಸಂತ ತುಕಾರಾಮ ಮಹಾರಾಜರಂತಹ ಸಂತರು, ಶರಣರು, ಮಹಾತ್ಮರ ಜೀವನ ತತ್ವಸಾರ, ಸಂದೇಶಗಳು ಇಂದಿನ ಸಮಾಜಕ್ಕೆ ಬೆಳಕಾಗಿವೆ ಎಂದು ಲಕ್ಷ್ಮೇಶ್ವರದ ಕೀರ್ತನಕಾರ ನಾರಾಯಣ ಭಿಸೆ ಹೇಳಿದರು. ಈಚೆಗೆ ಸಮೀಪದ ಸವಡಿ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ನಾಮದೇವ ಮಹಾರಾಜರ ಪುಣ್ಯಸ್ಮರಣೆ ಪ್ರಯುಕ್ತ ಸಂತ ತುಕಾರಾಮ ಮಹಾರಾಜರ ಗುಲಾಲ ಕೀರ್ತನೆ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಪರರ ಹಿತವೇ ಸಂತರ ಉಸಿರಾಗಿದೆ. ಇವರ ಮಹಿಮೆ, ವ್ಯಕ್ತಿತ್ವ ಅಪಾರ. ಲೋಕಹಿತ ಬಯಸುವದು ಮಹಾತ್ಮರ ಗುರಿಯಾಗಿದೆ. ಇಂಥ ಸದ್ಗುರುಗಳ ಸಂಘದಿಂದ ಮಾನವನಿಗೆ ಶಾಂತಿ, ನೆಮ್ಮದಿ ಲಭಿಸಲಿದೆ ಎಂದರು. ಬಸವರಾಜ ಗಾಯಕವಾಡ, ಗೋಪಾಲ ಭಿಸೆ. ಶಿವಾಜಿ ಭಿಸೆ, ಪಾಂಡುರಂಗ ಗಣಾಚಾರಿ, ನಾಮದೇವ ಗಣಾಚಾರಿ, ವಿಠಲ್ ಭಿಸೆ, ಯಮನಾಜಿ ಉಗಡೆ, ಫಕೀರಪ್ಪ ಗಾಯಕವಾಡ, ನಾಗಪ್ಪ ಗಾಯಕವಾಡ, ಚಂದ್ರಶೇಖರ ಗಾಯಕವಾಡ, ಜ್ಞಾನೋಬ ಗಾಯಕವಾಡ ಇದ್ದರು. ನಂತರ ಅನ್ನದಾಸೋಹ ನಡೆಯಿತು.
ನಾಳೆಯಿಂದ ರುದ್ರಾಭಿಷೇಕ
ಬೆಟಗೇರಿ: ಸಮೀಪದ ನರಸಾಪುರದ ರಂಗಾವದೂತರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಆ. 7ರಿಂದ ಸೆಪ್ಟೆಂಬರ್ 5ರ ವರೆಗೆ ಪ್ರತಿದಿನ ಬೆಳಗ್ಗೆ 7ಕ್ಕೆ ರುದ್ರಾಭಿಷೇಕ ಕಾರ್ಯಕ್ರಮ ಜರುಗಲಿದೆ ಎಂದು ಟ್ರಸ್ಟ್ನ ಕಾರ್ಯದರ್ಶಿ ಗಣೇಶಸಿಂಗ್ ಬ್ಯಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಸಹಕಾರಿ: ಕುಲಕರ್ಣಿ
ಗಜೇಂದ್ರಗಡ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗುವುದರಿಂದ ಆರೋಗ್ಯ ಸದೃಢಗೊಳ್ಳುವುದರ ಜತೆಗೆ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಶಾಲೆಯ ಮುಖ್ಯ ಗುರುಮಾತೆ ಎಂ.ಟಿ. ಕುಲಕರ್ಣಿ ಹೇಳಿದರು. ಸ್ಥಳೀಯ ಎಸ್.ಎಂ. ಭೂಮರಡ್ಡಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ಗಜೇಂದ್ರಗಡ ಉತ್ತರ ವಲಯ ಪ್ರಾಥಮಿಕ ಶಾಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆ ಮನುಷ್ಯನ ಬದುಕಿನ ಅವಿಭಾಜ್ಯ ಅಂಗ. ಕ್ರೀಡೆಯಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ಸದೃಢತೆ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಯುವಕರು ಕ್ರೀಡಾ ಸ್ಫೂರ್ತಿಯ ಸೆಲೆಯಾಗಿ ಹೊರಹೊಮ್ಮಬೇಕು. ಸಿಆರ್ಪಿ ಎಂ.ಕೆ ಚವ್ವಣ್ಣನವರ, ಕೆ.ಬಿ. ಚಾಗರಿ, ಜೆ.ಜಿ. ಭೋವಿ, ವಿ.ವೈ. ಸುಣಗಾರ, ಎಸ್.ಎಸ್. ನರೇಗಲ್, ವಿ.ಕೆ. ಕೊಪ್ಪರದ ಇದ್ದರು.
ಗ್ರಾಮೀಣ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಮುಖ್ಯ: ಬಡ್ನಿ
ಮುಳಗುಂದ: ಮನೆ ಅಭಿವೃದ್ಧಿಯಾದರೆ ಗ್ರಾಮ ಅಭಿವೃದ್ಧಿ, ಗ್ರಾಮ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿಯಾಗುವುದು. ಆದ್ದರಿಂದ ಮಹಿಳೆಯರು ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಮುಂದೆ ಬರಬೇಕು ಎಂದು ಅರ್ಬನ್ ಬ್ಯಾಂಕ್ ಚೇರ್ಮನ್ ಸಿ.ಬಿ. ಬಡ್ನಿ ಹೇಳಿದರು.
ಈಚೆಗೆ ಪಟ್ಟಣದ ಮಹಾಂತ ಶಿವಯೋಗಿಗಳ ಕಲಾಭವನದಲ್ಲಿ ಜರುಗಿದ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗದಗ ಇವರ ಆಶ್ರಯದಲ್ಲಿ ಒಕ್ಕೂಟ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯವಾಗಿದೆ. ಧರ್ಮಸ್ಥಳ ಸ್ವ-ಸಹಾಯ ಸಂಘಗಳ ಪ್ರತಿನಿಧಿಗಳು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕು ಎಂದರು. ನೂಲಿನ ಗಿರಣಿಯ ಅಧ್ಯಕ್ಷ ಆರ್.ಎನ್. ದೇಶಪಾಂಡೆ ಮಾತನಾಡಿ, ಆರ್ಥಿಕವಾಗಿ ಗ್ರಾಮೀಣ ಜನರ ಸಬಲೀಕರಣಕ್ಕೆ ಧರ್ಮಸ್ಥಳ ಸ್ವ-ಸಹಾಯ ಸಂಘಗಳು ಸಾಕಷ್ಟು ಉಪಯುಕ್ತಕಾರಿಯಾಗಿವೆ. ಮಹಿಳೆಯರು ಸಾಮಾಜಿಕವಾಗಿ ಮುಂದೆ ಬರಲು ಹಿಂಜರಿಯಬಾರದು. ಸಂಘಗಳಲ್ಲಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಲು ಹೆಚ್ಚು ಒತ್ತು ಕೊಡಬೇಕು ಎಂದರು. ಪಿಎಸ್ಐ ಪರಮೇಶ್ವರ ಕವಟಗಿ ಮಾತನಾಡಿ, ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಗತಿ ಹೊಂದುವುದು ಮುಖ್ಯ. ಮಹಿಳೆ ಸಮಾಜದ ಸ್ವಾಸ್ಥ್ಯ ಕಾಯ್ದುಕೊಳ್ಳಲು ಪ್ರಯತ್ನಿಸಬೇಕು. ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು. ಯೋಜನಾಧಿಕಾರಿ ಸಂಜೀವ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಶಿವಯೋಗೀಶ್ವರ ಶ್ರೀಗಳು ವಹಿಸಿದ್ದರು. ವಲಯದ ಮೇಲ್ವಿಚಾರಕ ಮಂಜುನಾಥ, ಸ್ಥಳೀಯ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.