ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

12ರಂದು ರೈತರ, ಕೂಲಿಕಾರರ ಬೃಹತ್ ಪ್ರತಿಭಟನೆ

Vishwanath S
Updated On : 7 Aug 2013, 11:01 am

ಮುಂಡರಗಿ: ಮುಂಡರಗಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ಆ. 12ರಂದು ರೈತರು, ಕೂಲಿಕಾರ್ಮಿಕರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕುರಿ ಹಾಗೂ ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಹೇಳಿದರು.
ಸೋಮವಾರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕಿನ ಗಂಗಾಪುರ, ಕೊರ್ಲಹಳ್ಳಿ, ಶೀನಹಳ್ಳಿ, ಕಕ್ಕೂರ ಮತ್ತು ವಿಠ್ಠಲಾಪುರ ಗ್ರಾಮಗಳ ರೈತರ ಹೊಲಗಳಲ್ಲಿ ತುಂಗಭದ್ರಾ ನದಿಯ ನೆರೆಯ ನೀರು ನುಗ್ಗಿದ್ದರಿಂದ ನೂರಾರು ಎಕರೆ ಪ್ರದೇಶದಲ್ಲಿ ಬಿತ್ತಿದ ಬತ್ತ, ಸೂರ್ಯಕಾಂತಿ, ಗೋವಿನಜೋಳ ಬೆಳೆ ಹಾಳಾಗುವ ಪರಿಸ್ಥಿತಿಯಿದೆ. 2 ವರ್ಷದಿಂದ ಬರಗಾಲ ಎದುರಿಸುತ್ತಿರುವ ಮುಂಡರಗಿ ತಾಲೂಕು ಮತ್ತೆ ಮುಂಗಾರು ಮಳೆಯ ಕೊರತೆಯಿಂದ 3ನೇ ವರ್ಷವೂ ಬರಗಾಲದ ಕರಿನೆರಳು ಎದುರಿಸುತ್ತಿದೆ.
ಸಂಕಷ್ಟದಲ್ಲಿ ರೈತರು: ರೋಹಿಣಿ ಮಳೆಯು ಅಲ್ಪ ಪ್ರಮಾಣದಲ್ಲಿ ಬಂದ ಹಿನ್ನೆಲೆಯಲ್ಲಿ ಈ ಭಾಗದ ರೈತರು ಹೆಸರು ಬಿತ್ತನೆ ಮಾಡಿದ್ದರು. ಅಲ್ಲಲ್ಲಿ ಹುಟ್ಟಿದ್ದ ಹೆಸರನ್ನೂ ಸಹ ಚಿಗರೆ, ಕಾಡುಹಂದಿಗಳ ಪಾಲಾಗಿದೆ ಎಂದರು.
ಈ ಭಾಗದ ರೈತರನ್ನು ಗಮನಿಸದೆ, ಸರ್ಕಾರ ಗದಗ ಜಿಲ್ಲೆ ರೋಣ, ನರಗುಂದ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿರುವುದು ಆಶ್ಚರ್ಯ ತಂದಿದೆ. ಸಂಕಷ್ಟಗಳ ಮಧ್ಯೆ ಬದುಕುತ್ತಿರುವ ಮುಂಡರಗಿ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಪಟ್ಟಿಗೆ ಸೇರಿಸದಿರುವುದು ದುರದೃಷ್ಟಕರ. ಮುಂಡರಗಿ ತಾಲೂಕನ್ನು ಕೂಡಲೇ ಬರಗಾಲ ಪ್ರದೇಶವೆಂದು ಘೋಷಣೆ ಮಾಡಬೇಕು. ಇಲ್ಲದೇ ಹೋದಲ್ಲಿ ಆ. 12ರಿಂದ ರೈತರು ಮತ್ತು ಕೂಲಿಕಾರರ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ಬರಗಾಲ ಪ್ರದೇಶವೆಂದು ಘೋಷಣೆಯಾಗುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಶಾಸಕ ರಾಮಕೃಷ್ಣ ದೊಡ್ಡಮನಿ, ಜಿ.ಎಸ್. ಪಾಟೀಲ ಮತ್ತು ಬಿ.ಆರ್. ಯಾವಗಲ್ಲ ಈ ಕುರಿತು ಚಿಂತನೆ ಮಾಡಿ ಮುಂಡರಗಿ ತಾಲೂಕಿಗೆ ನ್ಯಾಯ ಒದಗಿಸಬೇಕೆಂದರು. ಸುದ್ದಿಗೋಷ್ಠಿಯಲ್ಲಿ ಕೊಟ್ರಪ್ಪ ಹಳ್ಳಿ, ಬೀರಪ್ಪ ಕಾವಲಿ, ಹನಮಂತಪ್ಪ ಕಾಗನೂರ, ಹನುಮರಡ್ಡಿ, ನಿಂಗಪ್ಪ ಕೊಂಚಿಗೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement