ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜೀವದಾನದಷ್ಟೇ ರಕ್ತದಾನ ಶ್ರೇಷ್ಠ

Vishwanath S
Updated On : 7 Aug 2013, 11:02 am

ಕನ್ನಡಪ್ರಭ ವಾರ್ತೆ, ಗದಗ, ಆ. 6
ಅನ್ನದಾನ, ವಿದ್ಯಾದಾನ, ವಸ್ತ್ರದಾನಗಳಿಂತಲೂ ಇಂದಿನ ದಿನದ ಪರಿಸ್ಥಿತಿಗೆ ತಕ್ಕಂತೆ ರಕ್ತದಾನ ಜೀವದಾನದಷ್ಟೇ ಶ್ರೇಷ್ಠವಾದುದು ಎಂದು ಕನಕದಾಸ ಶಿಕ್ಷಣ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ಹೇಳಿದರು.
ಈಚೆಗೆ ಸ್ಥಳೀಯ ಕನಕದಾಸ ಶಿಕ್ಷಣ ಸಮಿತಿ ಆಶ್ರಯದಲ್ಲಿ ಕೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಕನಕದಾಸ ಶಿಕ್ಷಣ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಫ್.ದಂಡಿನ ಅವರ 78ನೇ ವರ್ಷದ ಹುಟ್ಟುಹಬ್ಬದ ನಿಮಿತ್ತ ರಕ್ತದಾನ ಶಿಬಿರ ಹಾಗೂ ಯುವ ರೆಡ್‌ಕ್ರಾಸ್ ಘಟಕದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
1859ರಲ್ಲಿ ಹೆನ್ರಿ ಅವರಿಂದ ಪ್ರಾರಂಭವಾದ ರೆಡ್‌ಕ್ರಾಸ್ ಸಂಸ್ಥೆಯು 1820ರಲ್ಲಿ ಭಾರತಕ್ಕೆ ಪ್ರವೇಶ ಪಡೆಯಿತು. ಜೀವಿಯ ಪ್ರತಿಯೊಂದು ಶಕ್ತಿ ಉತ್ಪಾದನೆಗೆ ರಕ್ತವೇ ಮೂಲದ್ರವ್ಯವಾಗಿದ್ದು, ಅದರ ಅವಶ್ಯಕತೆ ಬಹು ಪ್ರಮುಖವಾದುದು. ಆದ್ದರಿಂದ ಪ್ರತಿಯೊಂದು ಜೀವಿಯ ಅಸಹಾಯಕತೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆಯಿರುವ ವ್ಯಕ್ತಿಗೆ ರಕ್ತದಾನ ಮಾಡುವುದರಿಂದ ಜೀವಿಗೆ ಪುನರ್ಜನ್ಮ ನೀಡಿದಂತಾಗುವುದು. ಇಂದಿನ ಯುವಕರು ಇಂತಹ ಸಮಾಜಮುಖಿ ಸೇವೆಯಲ್ಲಿ ತೊಡಗಬೇಕು ಎಂದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ದೇಶವನ್ನು ಕಟ್ಟುವಲ್ಲಿ ಯುವಕರು ಸದಾ ಕ್ರಿಯಾಶೀಲರಾಗಬೇಕು. ದುಶ್ಚಟಗಳಿಂದ ಮುಕ್ತರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ರಕ್ತಸೃಷ್ಟಿ ದೇವಸೃಷ್ಟಿಯಾಗಿದ್ದು, ಇದನ್ನು ಕೃತಕವಾಗಿ ನಿರ್ಮಿಸಲು ಸಾಧ್ಯವಿಲ್ಲ. ರಕ್ತದಾನ ಉದಾತ್ತವಾದ ತ್ಯಾಗ ಹಾಗೂ ಸೇವೆಯ ಸಂಕೇತವಾಗಿದೆ. ರಕ್ತದಾನದ ಮೂಲಕವಾಗಿ ವಿದ್ಯಾರ್ಥಿಗಳು ಮನುಕುಲದ ಸೇವೆಗೆ ಕಂಕಣ ಬದ್ಧರಾಗುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಡಾ. ರಾಜೇಂದ್ರ ಗೋಡಬೋಲೆ, ಕಾಲೇಜಿನ ಪ್ರಾಚಾರ್ಯ ಎಂ.ಎನ್. ಕಾಮನಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭ ರಕ್ತದಾನ ಮಾಡಿದ 15 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಯುವ ರೆಡ್‌ಕ್ರಾಸ್ ಘಟಕದ ಅಧಿಕಾರಿ ಪ್ರೊ. ಬಿ.ಜಿ. ತಳ್ಳಳ್ಳಿ ಸ್ವಾಗತಿಸಿದರು. ಜಿ.ಸಿ. ಹಂಪಣ್ಣವರ ನಿರೂಪಿಸಿದರು. ಎಂ.ಬಿ. ಗೌಡರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement