ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಾಗರ ಪಂಚಮಿ-ಗ್ರಾಮೀಣ ಕ್ರೀಡೆ ನಂಟು

Vishwanath S
Updated On : 7 Aug 2013, 11:00 am

ಲಕ್ಷ್ಮೇಶ್ವರ: ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ಹಬ್ಬ ಬಹಳ ಪ್ರಸಿದ್ದಿ ಪಡೆದ ಹಬ್ಬ. ಅದರಲ್ಲೂ ಹೆಣ್ಣು ಮಕ್ಕಳಿಗೆ ನಾಗರ ಪಂಚಮಿ ಹಬ್ಬವೆಂದರೆ ಎಲ್ಲಿಲ್ಲದ ಪ್ರೀತಿ. ಏಕೆಂದರೆ ಹೊಸದಾಗಿ ಗಂಡನ ಮನೆಗೆ ಹೋದ ಹೆಣ್ಣು ಮಗಳು ಪ್ರಥಮ ಬಾರಿಗೆ ತನ್ನ ತವರು ಮನೆಗೆ ಕೆರೆದುಕೊಂಡು ಬರುವ ಸಂಪ್ರದಾಯ ಹಿಂದೆ ಇತ್ತು. ಅದಕ್ಕಾಗಿ ತನ್ನ ತವರು ಮನೆಯವರನ್ನು ನೋಡುವ ಸೌಭಾಗ್ಯ ಹಾಗೂ ಪುಳಕದಲ್ಲಿ ಆಕೆ ಇರುತ್ತಾಳೆ. ಹೀಗಾಗಿ ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ಹಬ್ಬ ವಿಶೇಷತೆ ಹೊಂದಿದೆ.
ನಾಗರ ಪಂಚಮಿ ಹಬ್ಬವನ್ನು ಮೂರು ದಿನಗಳವರೆಗೆ ಆಚರಿಸುವ ಪದ್ಧತಿ ಇಂದಿಗೂ ಆಚರಣೆಯಲ್ಲಿದೆ. ಆದರೆ, ಈಗ ಹಬ್ಬವು ತನ್ನ ವಿಶೇಷತೆ ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿಯಾಗಿದೆ. ಶ್ರಾವಣ ಮಾಸದ ಪ್ರಾರಂಭದ 5 ದಿನಗಳವರೆಗೆ ನಾಗರ ಪಂಚಮಿಯನ್ನು ಆಚರಿಸುತ್ತಾರೆ.
ಹಬ್ಬಕ್ಕೂ ಆಟಕ್ಕೂ ನಂಟು: ನಾಗರ ಪಂಚಮಿ ಹಬ್ಬವನ್ನು ಕೇವಲ ಸಿಹಿ ಭಕ್ಷ್ಯ-ಭೋಜನೆಗಳನ್ನು ಸವಿಯಲು ಮಾತ್ರ ಆಚರಿಸದೆ ಗ್ರಾಮೀಣ ಮೋಜಿನ ಕ್ರೀಡೆಗಳನ್ನು ಆಡುತ್ತ ಮನರಂಜನಾತ್ಮಕವಾಗಿ ಆಚರಿಸುವುದು ಹೆಚ್ಚಿನ ವೈಶಿಷ್ಟತೆಯಿಂದ ಕೂಡಿದಂತಾಗಿದೆ ಎನ್ನಬಹುದು. ನಾಗರ ಪಂಚಮಿಯಲ್ಲಿ ಆಡುವ ಕ್ರೀಡೆಗಳೆಂದರೆ ಜೋಕಾಲಿ ಜೀಕುವುದು, ಮಂಡಿ ಜೋಕಾಲಿ, ಏಣಿ ಜೋಕಾಲಿ ಹೀಗೆ ನಾನಾ ತರಹದ ಆಟಗಳನ್ನು ಆಡುತ್ತಾರೆ.
ಮಂಡಿ ಜೋಕಾಲಿ: ಈ ಜೋಕಾಲಿ ವಿಶಿಷ್ಟತೆ ಎಂದರೆ ಈ ಜೋಕಾಲಿ ನಿರ್ಮಾಣ ಮಾಡಲು 4 ಅಡಿ ಎತ್ತರದ ಎರಡು ಕಂಬಗಳನ್ನು 5 ಅಡಿ ಪರಸ್ಪರ ಅಂತರ ಇರುವಂತೆ ಕಂಬಗಳನ್ನು ಭೂಮಿಯಲ್ಲಿ ನೆಡಲಾಗುತ್ತದೆ. ಈ ಕಂಬಗಳ ಮೇಲೆ ಅಡ್ಡಲಾಗಿ ಒನಕೆ ಕಟ್ಟಲಾಗುತ್ತದೆ. ಹೀಗೆ ನಿರ್ಮಾಣ ಮಾಡಿದ ಮಂಡಿ ಜೋಕಾಲಿ ಮೇಲೆ 3-4 ಅಡಿ ಉದ್ದದ ಹಗ್ಗವೊಂದರ ತುದಿಯನ್ನು 2-3 ಅಡಿ ಉದ್ದದ ಕೋಲಿಗೆ ಆ ಹಗ್ಗವನ್ನು ಕಟ್ಟಿರುತ್ತಾರೆ. ಒಣಕೆಯ ಮೇಲೆ ಆ ಹಗ್ಗ ಇಳಿ ಬಿಟ್ಟು, ಇನ್ನೊಂದು ತುದಿ ಮೇಲೆ ಕಟ್ಟಿರುವ ಕೋಲಿನ ಮೇಲೆ ವ್ಯಕ್ತಿಯೊಬ್ಬ ಕುಳಿತುಕೊಂಡು ನೆಲದ ಮೇಲಿಂದ ಮೇಲ್ಗಡೆ ಹಗ್ಗ ಎಳೆಯುತ್ತಾ ಮೇಲೆ ಕಟ್ಟಿರುವ ಒನಕೆಗೆ ಆ ವ್ಯಕ್ತಿಯು ತನ್ನ ಮೂಗನ್ನು ಮುಟ್ಟಿಸಬೇಕು. ಹೀಗೆ ಮೂಗು ಮುಟ್ಟಿಸಿದರೆ ಈ ಆಟದಲ್ಲಿ ಗೆದ್ದಂತೆ.
ವಿಶೇಷತೆಯುಳ್ಳ ಏಣಿ ಜೋಕಾಲಿ: ಈ ಜೋಕಾಲಿ ನಿರ್ಮಾಣ ಮಾಡುವುದು ಕುಶಲತೆಯಿಂದ ಕೂಡಿದೆ. ಏಣಿ ಜೋಕಾಲಿ ನಿರ್ಮಾಣ ಮಾಡಲು ಸುಮಾರು 8 ಅಡಿ ಉದ್ದನೆಯ ಸ್ವಲ್ಪ ದಪ್ಪನೆ ಕಂಬ ನೆಟ್ಟು, 7-8 ಅಡಿ ದೂರದಲ್ಲಿ ಇನ್ನೊಂದು ಬದಿಯಲ್ಲಿ 3 ಅಡಿ ಉದ್ದದ ಕಂಬವೊಂದನ್ನು ನೆಡಲಾಗಿರುತ್ತದೆ. ಈ ಎರಡು ಕಂಬಗಳನ್ನು ಜೋಡಿಸುವಂತೆ ಏಣಿಯ ಆಕಾರದಲ್ಲಿ ಜೋಕಾಲಿ ನಿರ್ಮಾಣ ಮಾಡಲಾಗಿರುತ್ತದೆ. ದೊಡ್ಡ ಹಾಗೂ ಸಣ್ಣ ಕಂಬಗಳನ್ನು ಜೋಡಿಸುವಂತೆ ನಿರ್ಮಾಣ ಮಾಡಿರುವ ಜೋಕಾಲಿಯ ಎರಡು ಕಡೆಗಳಲ್ಲಿ ಬೋರ್‌ಗಡೆ (ಬೇರಿಂಗ್)ಯನ್ನು ಜೋಡಿಸಲಾಗಿರುತ್ತದೆ. ಹೀಗೆ ಬೇರಿಂಗ್‌ಗಳನ್ನು ಜೋಡಿಸುವುದರಿಂದ ವ್ಯಕ್ತಿಯು ಏಣಿಯನ್ನು ಹತ್ತುವುದು ಸಾಧ್ಯವಾಗುವುದಿಲ್ಲ.
ಜೋಕಾಲಿ ಹತ್ತುವುದೇ ಮಜಾ: ವ್ಯಕ್ತಿಯು ಎರಡು ಕಾಲುಗಳನ್ನು ಹಗ್ಗದ ಮೇಲಿಟ್ಟು ಮತ್ತು ಎರಡು ಕೈಗಳಿಂದ ಹಗ್ಗ ಹಿಡಿದುಕೊಂಡು ಏಣಿ ಹತ್ತುವ ರೀತಿ ಈ ಜೋಕಾಲಿ ಹತ್ತಬೇಕು. ಆದರೆ, ಏಣಿಯ ಎರಡು ತುದಿಗಳಲ್ಲಿ ಬೇರಿಂಗ್ ಜೋಡಿಸಿರುವುದರಿಂದ ವ್ಯಕ್ತಿ ಏಣಿ ಹತ್ತಲು ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲಿ ಬೇರಿಂಗ್‌ಗಳು ತಿರುಗತೊಡಗುತ್ತವೆ. ಹೀಗಾದ ಕೂಡಲೆ ವ್ಯಕ್ತಿಯು ಏಣಿಯಿಂದ ಕೆಳಗೆ ಜಾರಿ ಬೀಳುತ್ತಾನೆ.
ಏಣಿ ಜೋಕಾಲಿಯನ್ನು ಹತ್ತಲು ಬಹಳಷ್ಟು ಕೌಶಲ್ಯ ಅವಶ್ಯವಾಗಿದೆ. ಬಲಗಡೆಯ ಕೈಯಿಂದ ಹಿಡಿದ ಹಗ್ಗ ಮತ್ತು ಎಡಗಡೆಯ ಕಾಲನಿಟ್ಟ ಹಗ್ಗದ ಮೇಲೆ ನಮ್ಮ ಒಟ್ಟು ದೇಹದ ತೂಕವು ಒಂದೇ ಪ್ರಮಾಣದಲ್ಲಿ ಇರಬೇಕು. ಹೀಗೆ ಮಾಡುತ್ತ ಎಡಗೈ ಮತ್ತು ಬಲಗಾಲನ್ನು ಎತ್ತಿ ಇಡುತ್ತಾ ಏಣಿ ಹತ್ತುವಂತೆ ಮೇಲೆ ಹತ್ತಬೇಕು. ಇದೆ ತೆರನಾಗಿ ಮಾಡುತ್ತ ಒಟ್ಟು ಏಣಿಯನ್ನು ಏರಬೇಕು. ಹೀಗೆ ಮೇಲೆ ಹತ್ತಿದವರು ಗೆದ್ದ ಹಾಗೆ. ಇದೇ ರೀತಿ ನಾಗರ ಪಂಚಮಿ ಹಬ್ಬದಲ್ಲಿ ಗ್ರಾಮೀಣ ಭಾಗದ ಜನರು ಇಂದಿಗೂ ಗ್ರಾಮೀಣ ಕ್ರೀಡೆಗಳನ್ನು ಉಳಿಸಿಕೊಂಡು ಬಂದಿರುವುದು ವಿಶೇಷ.

-ಅಶೋಕ ಸೊರಟೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement