ಬಿಜೆಪಿ ಭಿನ್ನಮತ ಕೆಜೆಪಿಗೆ ಲಾಭ?
ಕನ್ನಡಪ್ರಭ ವಾರ್ತೆ, ಗದಗ, ಆ. 6
ವಿಧಾನ ಪರಿಷತ್ಗೆ ನಡೆಯುತ್ತಿರುವ ಉಪ ಚುನಾವಣೆಯ ರಂಗು ಬಲು ಜೋರಾಗುತ್ತಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಕೆಜೆಪಿ ಮೂರು ಪಕ್ಷಗಳಿಂದ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಸಿರುವ ಹಿನ್ನೆಲೆಯಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಂಡು ಬರುತ್ತಿದೆಯಾದರೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಈ ಬಾರಿ ಕೆಜೆಪಿ ದೊಡ್ಡ ಮಟ್ಟದ ಟಾಂಗ್ ಕೊಡಲಿದೆ. ಇದು ಬಿಜೆಪಿಗೆ ಹೆಚ್ಚಿನ ಸಮಸ್ಯೆಯನ್ನುಂಟು ಮಾಡಲಿದೆ ಎನ್ನುವ ರಾಜಕೀಯ ಲೆಕ್ಕಾಚಾರ ಜಿಲ್ಲಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
ಕೊನೆ ಕ್ಷಣದಲ್ಲಿ ಕಣಕ್ಕೆ: ಬಿಜೆಪಿಯಿಂದ ಮಾಜಿ ಸಿಎಂ ಜಗದೀಶ ಶೆಟ್ಟರ್ ಸಹೋದರ ಪ್ರದೀಪ ಶೆಟ್ಟರ್ ಕಣಕ್ಕಿಳಿಯುತ್ತಿದ್ದಂತೆ ಕೆಜೆಪಿ ರಾಜ್ಯಾಧ್ಯಕ್ಷ ಬಿಎಸ್ವೈ ಈ ಹಿಂದೆ ಬಿಜೆಪಿಯಿಂದ ಇದೇ ಕ್ಷೇತ್ರದಿಂದಲೇ ಆಯ್ಕೆಯಾಗಿ ರಾಜಿನಾಮೆ ನೀಡಿರುವ ಶಿವರಾಜ ಸಜ್ಜನ ಅವರನ್ನು ಕಣಕ್ಕಿಳಿಸುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಹಲವಾರು ರಾಜಕೀಯ ಲೆಕ್ಕಾಚಾರಗಳು ಗರಿಗೆದರಿವೆ. ಇನ್ನು ಕಾಂಗ್ರೆಸ್ ಮಾತ್ರ ವಿಧಾನಸಭೆ ಚುನಾವಣೆ ನಂತರ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದು. ಅದು ಎಷ್ಟರ ಮಟ್ಟಿಗೆ ಕೆಲಸ ಮಾಡಿದೆ ಎನ್ನುವುದು ಕೂಡಾ ಈ ಉಪಚುನಾವಣೆ ನಂತರ ಸ್ಪಷ್ಟವಾಗಲಿದೆ.
ಬಿಜೆಪಿ ಭಿನ್ನಮತ: ಜಿಲ್ಲಾ ಬಿಜೆಪಿಯಲ್ಲಿ ವಿಧಾನಸಭಾ ಚುನಾವಣೆ ಪೂರ್ವದಿಂದಲೇ ಸಾಕಷ್ಟು ಭಿನ್ನಮತವಿತ್ತು. ಅದು ನಂತರ ನಡೆದ ಪಕ್ಷದ ಸಭೆಯಲ್ಲಿ ಶಿರಹಟ್ಟಿ ಮಾಜಿ ಶಾಸಕ ರಾಮಣ್ಣ ಲಮಾಣಿ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಳಕಪ್ಪ ಬಂಡಿ ಅವರು ನೇರವಾಗಿ ಕಾರ್ಯಕರ್ತರ ಸಮ್ಮುಖದಲ್ಲಿಯೇ ಪರಸ್ಪರ ಸೋಲಿನ ಕುರಿತು ದೋಷಾರೋಪಣೆಗಳನ್ನು ಮಾಡಿಕೊಂಡಿದ್ದರು. ಬಳಿಕ ನೂತನ ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆಯಲ್ಲಿಯೂ ಪಕ್ಷದ ವರಿಷ್ಠರು ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕುಗಳನ್ನು ಕಡೆಗಣಿಸಿದ್ದಾರೆ ಎನ್ನುವ ಆರೋಪಗಳು ಬಹಿರಂಗವಾಗಿಯೇ ಕೇಳಿ ಬಂದವು.
ಪರಿಣಾಮ ಬೀರಬಹುದೇ: ನೂತನ ಜಿಲ್ಲಾ ಬಿಜೆಪಿ ಅಧ್ಯಕ್ಷರ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿ ಹಾಜರಿದ್ದರು. ಅವರ ಹೆಸರನ್ನು ಯಾರೂ ಪ್ರಸ್ತಾಪಿಸಲಿಲ್ಲ. ಮುಖ್ಯವಾಗಿ ಲಮಾಣಿ ಅವರಿಗೆ ವೇದಿಕೆಯಲ್ಲಿ ಭಾಷಣ ಮಾಡಲು ಅವಕಾಶವನ್ನೇ ನೀಡಲಿಲ್ಲ. ಅಂದು ರಾಮಣ್ಣ ಒಳಗೊಳಗೆ ಅಸಮಾಧಾನಗೊಂಡಿದ್ದರು. ಇದು ನಾಯಕರ ಮಧ್ಯೆ ದೊಡ್ಡ ಕಂದಕವಿದೆ ಎನ್ನುವುದನ್ನು ಸ್ಪಷ್ಟವಾಗಿಸಿದ್ದರೂ ಯಾವೊಬ್ಬ ನಾಯಕರೂ ಅದನ್ನು ಸರಿಪಡಿಸುವ ಕೆಲಸಕ್ಕೆ ಕೈ ಹಾಕದಿರುವುದು ಇಂದು ನೇರವಾಗಿ ವಿಪ ಉಪ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ನಿಚ್ಚಳವಾಗಿದೆ.
ಕೆಜೆಪಿಗೆ ಲಾಭವಾಗಲಿದೆಯೆ?: ಕಳೆದ ವಿಧಾನಸಭೆ ಚುನಾವಣೆಯಂತೆ ಈ ಬಾರಿಯ ಉಪ ಚುನಾವಣೆಯಲ್ಲಿಯೂ ಗದಗ ಜಿಲ್ಲೆಯ ಯಾವೊಬ್ಬ ಅಭ್ಯರ್ಥಿಗಳು ಸ್ಪರ್ಧಿಸಿಲ್ಲ. ಇನ್ನು ಕಾಂಗ್ರೆಸ್ನಿಂದ ಸ್ಪರ್ಧಿಸಿರುವ ನಾಗರಾಜ ಛಬ್ಬಿ ಹಾಗೂ ಪ್ರದೀಪ ಶೆಟ್ಟರ್ ಧಾರವಾಡ ಜಿಲ್ಲೆಯವರು. ಕೆಜೆಪಿಯಿಂದ ಸ್ಪರ್ಧಿಸಿರುವ ಶಿವರಾಜ ಸಜ್ಜನ ಒಬ್ಬರೇ ಹಾವೇರಿ ಜಿಲ್ಲೆಯವರು. ಒಟ್ಟು ಮತದಾರರಲ್ಲಿ ಹಾವೇರಿ ಜಿಲ್ಲೆಯಲ್ಲಿಯೇ ಶೇ. 48ರಷ್ಟು ಮತಗಳಿವೆ ಎನ್ನುವುದು ಪ್ರಮುಖ ಅಂಶವಾಗಿದೆ. ಇನ್ನು ಗದಗ ಜಿಲ್ಲೆಯಲ್ಲಿ ಸಿ.ಎಂ. ಉದಾಸಿ ಹಾಗೂ ಸಂಸದ ಶಿವಕುಮಾರ ಉದಾಸಿ ಜಿಲ್ಲೆಯ ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕಿನಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದಾರೆ. ಇದರೊಟ್ಟಿಗೆ ಶಿರಹಟ್ಟಿ ಮಾಜಿ ಶಾಸಕ ರಾಮಣ್ಣ ಲಮಾಣಿ ಆ ಭಾಗದಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದು, ಇದು ಕೆಜೆಪಿಗೆ ಲಾಭವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.
-ಶಿವಕುಮಾರ ಕುಷ್ಟಗಿ