ಸಂಘಟನೆ: ಸ್ಲಂ ಯುವಕರಿಗೆ ಕರೆ
ಗದಗ: ನಗರದ ಸ್ಲಂಗಳಲ್ಲಿ ಸಾಕಷ್ಟು ಯುವ ಪ್ರತಿಭೆಗಳಿದ್ದು, ಅಂಥವರನ್ನು ಗುರುತಿಸಿ ಮಾಹಿತಿ ನೀಡುವುದರ ಜೊತೆಗೆ ಸಂಘಟಿತರನ್ನಾಗಿಸಲು ಸ್ಲಂ ಯುವಸಮಿತಿ ಹೆಚ್ಚಿನ ಕೆಲಸ ಮಾಡುವಂತೆ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿಯ ಉಪಾಧ್ಯಕ್ಷ ರವಿ ಬೆಳಮಕರ ಕರೆ ನೀಡಿದರು.
ಅವರು ಈಚೆಗೆ ನಗರದ ಸ್ಲಂ ಯುವ ಘಟಕದ ಕಾರ್ಯಾಲಯದಲ್ಲಿ ಸ್ಥಳೀಯ ಅಂಬೇಡ್ಕರ್ ನಗರ ಹಾಗೂ ಜಿಲ್ಲಾ ಸ್ಲಂ ಸಮಿತಿಯ ಶಾಖಾ ಘಟಕದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಲಂ ಯುವಕರು ದುಶ್ಚಟಗಳಿಂದ ದೂರವಿದ್ದು, ತಮ್ಮ ಮೂಲಭೂತ ಹಕ್ಕುಗಳ ಹೋರಾಟಕ್ಕೆ ಮುಂದೆ ಬರಬೇಕಾಗಿದೆ. ಇಂದು ದೇಶದ ಮೂಲ ಆಸ್ತಿ ಯುವಕರಾಗಿರುವುದರಿಂದ ಯುವಕರು ಹೆಚ್ಚಿನ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿ ಸ್ಲಂ ಪ್ರದೇಶದಲ್ಲಿರುವ ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದರು.
ಅಂಬೇಡ್ಕರ್ ನಗರದ ಅಧ್ಯಕ್ಷ ಪರಮೇಶ ಕಾಳೆ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ವೇಳೆ ಅಂಬೇಡ್ಕರ್ ನಗರ, ಜನತಾ ಪ್ಲಾಟ್ ಶಾಖಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಯಲ್ಲಪ್ಪ ರಾಮಗಿರಿ, ಶರೀಫ ಬಿಳೆಯಲಿ, ರಾಜು ಕಣಗಿನಹಾಳ, ಹೊನ್ನಪ್ಪ ಸಾಕಿ, ಪೋತರಾಜ ಸಾಕಿ, ಅನಿಲ ಕಾಳೆ ಮುಂತಾದವರು ಇದ್ದರು.