ವೀರಾಗ್ರಣಿ ಪ್ರಶಸ್ತಿ
ಗದಗ: ತಾಲೂಕಿನ ಮಲ್ಲಸಮುದ್ರದಲ್ಲಿ ಈಚೆಗೆ ಜರುಗಿದ ಹರ್ತಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಕಣವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ತರಬೇತಿ ನೀಡಿದ ಶಿಕ್ಷಕರಿಗೆ ಹಾಗೂ ಪ್ರಶಸ್ತಿ ಪಡೆದ ಮಕ್ಕಳಿಗೆ ಶಾಲೆಯ ಪ್ರಧಾನ ಗುರುಗಳು, ಶಾಲಾ ಸಹ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಕೋಡಿಮಠ ಶ್ರೀಗಳಿಂದ ಪುಣ್ಯಾಶ್ರಮಕ್ಕೆ ದೇಣಿಗೆ
ಗದಗ: ಕೋಡಿಮಠ ಸುಕ್ಷೇತ್ರದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಈಚೆಗೆ ವಾಗ್ದಾನ ಮಾಡಿದಂತೆ ಗದಗ ವೀರೇಶ್ವರ ಪುಣ್ಯಾಶ್ರಮಕ್ಕೆ ರು. 1 ಲಕ್ಷ ದೇಣಿಗೆ ನೀಡಿದ್ದಾರೆ. ವೀರೇಶ್ವರ ಪುಣ್ಯಾಶ್ರಮದಲ್ಲಿ ಅಧ್ಯಯನ ಮಾಡುವ ಅಂಧ, ಅನಾಥ ಮಕ್ಕಳ ದಾಸೋಹ, ಪಂ. ಪಂಚಾಕ್ಷರ ಗವಾಯಿಗಳು ಹಾಗೂ ಡಾ ಪಂ. ಪುಟ್ಟರಾಜ ಕವಿಗವಾಯಿಗಳ ಪುಣ್ಯಾರಾಧನೆ ದಿನ ದಾಸೋಹ ನಡೆಸಲು ಈ ಹಣ ಸದ್ಭಳಕೆಯಾಗಲಿ ಎಂದು ಶ್ರೀಗಳು ತಿಳಿಸಿದ್ದಾರೆ. ಕೋಡಿಮಠ ಶ್ರೀಗಳ ಅಪ್ಪಣೆಯಂತೆ ಸಿಂಡಿಕೇಟ್ ಬ್ಯಾಂಕ್ನಲ್ಲಿ ರು. 1 ಲಕ್ಷ ಇರಿಸಿದ ಠೇವಣಿ ಪತ್ರವನ್ನು ಕಲ್ಲಿನಾಥ ಶಾಸ್ತ್ರಿಗಳು, ಮೃತ್ಯುಂಜಯ ಸಂಕೇಶ್ವರ, ಮಂಜುನಾಥ ಹಳ್ಳಿಕೇರಿ ಅವರು ಪೀಠಾಧಿಕಾರಿ ಕಲ್ಲಯ್ಯಜ್ಜನವರಿಗೆ ಮಂಗಳವಾರ ಹಸ್ತಾಂತರಿಸಿದರು. ಈ ಸಂದರ್ಭ ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ ಬಸವರಾಜಸ್ವಾಮಿ ಹಿಡ್ಕಿಮಠ, ಇತರ ಗಣ್ಯರು ಉಪಸ್ಥಿತರಿದ್ದರು.