ಸಾಧಕರ ಬದುಕು ವಿದ್ಯಾರ್ಥಿಗಳಿಗೆ ಸ್ಫೂರ್ತಿ: ಹಿರೇಮಠ
ಕನ್ನಡಪ್ರಭ ವಾರ್ತೆ, ಗದಗ, ಆ. 7
ವಿಶ್ವವಿಖ್ಯಾತ ಸಾಧಕರ ಬದುಕು ವಿದ್ಯಾರ್ಥಿಗಳ ಸ್ಫೂರ್ತಿಯ ಸೆಲೆಯಾಗಲು ಸಾಧ್ಯ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಎಂ.ಜಿ. ಹಿರೇಮಠ ಹೇಳಿದರು.
ಅವರು ಬುಧವಾರ ನಗರದ ಕೆಎಲ್‌ಇ ಸಂಸ್ಥೆಯ ಜ. ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಜರುಗಿದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸರಿಯಾದ ಸಕಾರಾತ್ಮಕ ದೃಢ ನಿರ್ಧಾರದಿಂದ ಹಾಗೂ ಸತತ ಪ್ರಯತ್ನ, ಕಠಿಣ ಪರಿಶ್ರಮದಿಂದ ಭಾರತದಲ್ಲಿ ಯಾವುದೇ ಹುದ್ದೆ ಪಡೆಯಲು ಸಾಧ್ಯ. ನಮ್ಮಲ್ಲಿ ಎಷ್ಟೇ ಧೈರ್ಯ, ಆತ್ಮವಿಶ್ವಾಸವಿದ್ದರೂ ಕೆಲವೊಮ್ಮೆ ಮಾನಸಿಕ ತುಮುಲಕ್ಕೆ ಸಿಲುಕಿ ದೃಢ ನಿರ್ಧಾರ ಕೊರತೆಯಿಂದ ಬಳಲುವುದು ಸಹಜ.
ಈ ಸಂದರ್ಭ ಒಳ್ಳೆಯ ಸಂಸ್ಕಾರವು ಪರಿಣಿತರಿಂದ ಲಭಿಸಿದರೆ ಅತ್ಯುತ್ತಮ ಸ್ಪೂರ್ತಿಯ ಸೆಲೆಯಾಗುತ್ತದೆ. ಇದರಿಂದ ಆತ್ಮವಿಶ್ವಾಸ ವರ್ಧಿಸಿಕೊಂಡು ಪ್ರತಿಯೊಬ್ಬರು ಸ್ವಪ್ರೇರಣೆಯಿಂದ ಧೈರ್ಯಶಾಲಿಗಳಾಗಿ ಸತತ ಅಧ್ಯಯನದಲ್ಲಿ ನಿರತರಾದರೆ ಯಶಸ್ಸು ಕಾಣಲು ಸಾಧ್ಯ ಎಂದರು.
ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ. ವಿ.ಐ.ಕುರಗೋಡ ಮಾತನಾಡಿದರು.
ಈ ಸಂದರ್ಭ ಪ್ರೊ. ವಿ.ಎಂ.ಕಿಣಗಿಯವರ, ಜಿ.ಪಿ. ಕುದರಿ, ಬಿ.ಬಿ.ಎ. ಪ್ರಾಚಾರ್ಯ ಪ್ರೊ. ಎಂ.ಬಿ.ಚನ್ನಪ್ಪಗೌಡರ, ಕಾರ್ಯದರ್ಶಿ ಗೌರಮ್ಮ ಅಕ್ಕಿ, ಈಶಣ್ಣ ಮುನವಳ್ಳಿ, ಅಶೋಕ ನಿಲುಗಲ್, ಎಸ್.ಎಸ್. ಮಾನ್ವಿ, ಮಾಟಲದಿನ್ನಿ ಇದ್ದರು.
ಪ್ರಾ. ಎಸ್.ಎಸ್.ಯಂಕಂಚಿ ಸ್ವಾಗತಿಸಿದರು. ಪ್ರಾಚಾರ್ಯ ಪ್ರೊ. ಎಂ.ಎಂ. ನರಗುಂದ ಪರಿಚಯಿಸಿದರು. ಕಾವ್ಯಾ ಪುರದ, ಡಾ. ವೀಣಾ ಹೂಗಾ ನಿರೂಪಿಸಿದರು. ಕಾರ್ಯದರ್ಶಿ ರಾಜು ಕೆಂಪರಾಮಣ್ಣವರ ವಂದಿಸಿದರು.