ಜಿಲ್ಲೆಗಳಲ್ಲಿ ಮಾನಸಿಕ ಪುನಶ್ಚೇತನ ಕೇಂದ್ರ
ಗದಗ: ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಮಧ್ಯವರ್ಜನ ಶಿಬಿರ ಹಾಗೂ ಮಾದಕ ದ್ರವ್ಯ ವ್ಯಸನಿಗಳ ಪುನಶ್ಚೇತನ ಕೇಂದ್ರಗಳ ಸ್ಥಾಪನೆಗೆ ಗುರಿ ಹೊಂದಲಾಗಿದೆ ಎಂದು ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆಯ ಅಧ್ಯಕ್ಷ ಡಾ. ಕೆ.ಎ. ಅಶೋಕ ಪೈ ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ಮಾನಸಿಕ ಕಾಯಿಲೆ, ಖಿನ್ನತೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ. ಇದನ್ನು ತಡೆಗಟ್ಟುವ ಸದುದ್ದೇಶದಿಂದ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದು, ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಮಾನಸಿಕ ರೋಗಿಗಳಿದ್ದಾರೆ. ಅವರಿಗೆ ಬೇಕಾದ ಚಿಕಿತ್ಸೆಯನ್ನು ನೀಡುವ ಉದ್ದೇಶದಿಂದ ಹಾಗೂ ಮಾನಸಿಕ ರೋಗಿಗಳ ಕುರಿತು ಸೂಕ್ತ ಮಾಹಿತಿ ಪಡೆದುಕೊಳ್ಳುವ ಮೂಲಕ ರೋಗಿಗಳನ್ನು ಕಡಿಮೆ ಮಾಡಲು ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆಯು 6 ತಿಂಗಳಿಂದ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ರಾಜ್ಯದ 28 ಜಿಲ್ಲೆಗಳಿಗೆ ತೆರಳಲು ಮಾಹಿತಿ ಸಂಗ್ರಹಿಸಲಾಗಿದೆ. ರಾಮನಗರ ಮತ್ತು ತುಮಕೂರು ಜಿಲ್ಲೆಗಳಿಗೆ ತೆರಳಿ ಅಲ್ಲಿನ ಮಾಹಿತಿಯನ್ನು ಸೆಪ್ಟೆಂಬರ್ ತಿಂಗಳೊಳಗಾಗಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
ಮಾನಸಿಕ ವೈದ್ಯರ ಕೊರತೆ: ಇಂದು ಅಗತ್ಯಕ್ಕೆ ತಕ್ಕಂತೆ ಮಾನಸಿಕ ವೈದ್ಯರು ಸಿಗದೇ ಇರುವುದರಿಂದ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಪ್ರತಿ 1,10,000 ಜನಸಂಖ್ಯೆಗೆ ಒಬ್ಬ ಮನೋವೈದ್ಯ, ಒಬ್ಬ ಮನೋವಿಜ್ಞಾನಿ, ಒಬ್ಬ ಮನೋ ಸಾಮಾಜಿಕ ಕಾರ್ಯಕರ್ತ, ಒಬ್ಬ ಮನೋ ರೋಗಿ ಶುಶ್ರೂಷಕಿಯ ಅವಶ್ಯಕತೆಯಿದೆ. ಭಾರತದಲ್ಲಿ ಈಗ ಲಭ್ಯವಿರುವ ಸಂಪನ್ಮೂಲ ಸಂಖ್ಯೆಯು ಸುಮಾರು 4 ಸಾವಿರ ಮನೋವೈದ್ಯರು, 2 ಸಾವಿರ ಮನೋ ಚಿಕಿತ್ಸಕರು, 2 ಸಾವಿರ ಮಾನಸಿಕ ಸಮಾಜದ ಕಾರ್ಯಕರ್ತರಿದ್ದಾರೆ.
ಪ್ರತಿವರ್ಷ ರಾಜ್ಯದಲ್ಲಿ ಸುಮಾರು 40 ಮನೋವೈದ್ಯರನ್ನು ತರಬೇತಿಗೊಳಿಸಿದರೆ ಅದರಲ್ಲಿ ಶೇ. 50ಕ್ಕೂ ಹೆಚ್ಚು ಮನೋವೈದ್ಯರು ವಿದೇಶಗಳಿಗೆ ವಲಸೆ ಹೋಗುತ್ತಾರೆ. ಈಗ ರಾಜ್ಯದಲ್ಲಿರುವ ಮನೋವೈದ್ಯರ ಸಂಖ್ಯೆಯು 180, ಹಾಗಾಗಿ ಇಂದು ಮಾನಸಿಕ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಮನೋವೈದ್ಯರಿಲ್ಲದೇ ತೊಂದರೆ ಅನುಭವಿಸುವಂತಾಗಿದೆ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಆತ್ಮಹತ್ಯೆಯಂತಹ ಕೃತ್ಯಗಳು ಹೆಚ್ಚಾಗಿ ಜರುಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಬೆಂಗಳೂರಿನಲ್ಲಿ ಪ್ರತಿ 3 ನಿಮಿಷಕ್ಕೆ ಒಬ್ಬ ಮಾನಸಿಕತೆಯಿಂದಾಗಿ ಆತ್ಯಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇದೇ ರೀತಿ ಮುಂದುವರಿದಲ್ಲಿ ಮುಂಬರುವ 2 ವರ್ಷಗಳಲ್ಲಿ ಬೆಂಗಳೂರು ಆತ್ಮಹತ್ಯೆಯ ರಾಜಧಾನಿಯಾಗುವುದರಲ್ಲಿ ಸಂದೇಹವಿಲ್ಲ. ಕಾರಣ ಈ ಆತ್ಮಹತ್ಯೆಯಂತಹ ಕೃತ್ಯಗಳನ್ನು ಕಡಿಮೆ ಮಾಡುವ ಸದುದ್ದೇಶದಿಂದ ಈಗ ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆಯನ್ನು ರಚಿಸಲಾಗಿದ್ದು, ಇದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಹಾಗೂ ಮಾನಸಿಕ ಆರೋಗ್ಯವನ್ನು ಮನೆಬಾಗಿಲಿಗೆ ಮುಟ್ಟಿಸುವ ಕಾರ್ಯ ಮಾಡಲಾಗುತ್ತಿದೆ. ಈ ಕುರಿತು ಪ್ರತಿ ಜಿಲ್ಲೆಯಲ್ಲಿಯೂ ಸಲಹಾ ಪಾಲನಾ ಕೇಂದ್ರ, ಪ್ರತಿ ಜಿಲ್ಲೆಯಲ್ಲಿಯೂ 10 ಹಾಸಿಗೆಯುಳ್ಳ ಮಧ್ಯವರ್ಜನಾ ಘಟಕ, ಬುದ್ಧಿಮಾಂದ್ಯ ಮಕ್ಕಳ ಶಾಲೆ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದರು. ಜಿಲ್ಲಾಧಿಕಾರಿ ಎಸ್.ಟಿ.ಅಂಜನ್ಕುಮಾರ, ಡಿಎಚ್ಒ ಡಿ.ಬಿ. ಚೆನ್ನಶೆಟ್ಟಿ, ರಜನಿ ಪೈ ಮುಂತಾದವರು ಉಪಸ್ಥಿತರಿದ್ದರು.