ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೊಟ್ಟಿ ಪಂಚಮಿಗೆ ತರಕಾರಿ ಬಿಸಿ

Vishwanath S
Updated On : 9 Aug 2013, 11:30 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಆ. 8
ನಾಗರಪಂಚಮಿ ನಾಡಿಗೆ ದೊಡ್ಡ ಹಬ್ಬ. ಪಂಚಮಿ ಹಬ್ಬ ಬಂದರೆ ಸಾಕು ಹಬ್ಬಗಳು ಸಾಲುಗಟ್ಟಿ ಬರಲು ಪ್ರಾರಂಭವಾಗುತ್ತದೆ. ಇದೀಗ ಪಂಚಮಿ ಹಬ್ಬ ಬಂದಿದ್ದು, ಹಬ್ಬದ ಮೊದಲ ದಿನವಾದ ಶುಕ್ರವಾರ ರೊಟ್ಟಿ ಪಂಚಮಿ ನಡೆಯಲಿದೆ. ಜನರಿಗೆ ರೊಟ್ಟಿ ಪಂಚಮಿಗೆ ತರಕಾರಿ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ರೊಟ್ಟಿ ಪಂಚಮಿಯಲ್ಲಿ ಜೋಳದ ರೊಟ್ಟಿ, ಸಜ್ಜಿರೊಟ್ಟಿ, ಚಪಾತಿ ಹಾಗೂ ವಿವಿಧ ತರಕಾರಿಗಳ ಪಲ್ಯ ಹಾಗೂ ಸೊಪ್ಪುಗಳಿಂದ ಕೂಡಿದ ಪಚಡಿ ಮತ್ತು ಹೆಸರು, ಮಡಿಕೆ, ಅಲಸಂದಿ ಕಾಳಿನ ಪಲ್ಯ ಮಾಡುವುದು ಈ ರೊಟ್ಟಿ ಹಬ್ಬದ ವಿಶೇಷ.
5-6 ತಿಂಗಳಿನಿಂದ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ಇದೀಗ ಪಂಚಮಿ ಹಬ್ಬಕ್ಕೆ ಎಲ್ಲರಿಗೂ ಅವಶ್ಯವಿರುವುದರಿಂದ ತರಕಾರಿ ಬೆಲೆ ಇನ್ನಷ್ಟು ಹೆಚ್ಚಿದೆ. ಗ್ರಾಹಕರು ತರಕಾರಿ ಬೆಲೆ ಕೇಳಿ ದಂಗಾಗುತ್ತಿದ್ದಾರೆ.
ಗಗನಕ್ಕೇರಿದ ತರಕಾರಿ ಬೆಲೆ: ಒಂದು ಕೆಜಿ ಟೊಮೆಟೋ ಬೆಲೆ ರು. 40, ಒಂದು ಕೆಜಿ ಸೌತೆಕಾಯಿ ರು. 60, ಒಂದು ಕೆಜಿ ಹಿರೇಕಾಯಿ ರು. 50, ಒಂದು ಕೆಜಿ ಬೆಂಡೆಕಾಯಿ ರು. 60, ಒಂದು ಕೆಜಿ ಹಸಿ ಮೆಣಸಿನಕಾಯಿ ರು. 80, ಒಂದು ಕೆಜಿ ಉಳ್ಳಾಗಡ್ಡಿ ರು. 45 ರಿಂದ 50, ಒಂದು ಕೆಜಿ ಆಲೂಗಡ್ಡೆ ರು. 20, ಕಾಲಿಫ್ಲಾವರ್ ರು. 30, ಬೀಟ್‌ರೂಟ್ 60, ಕೋಸ್‌ಗಡ್ಡೆ 40, ಗಜ್ಜರಿ 60, ಹೀಗೆ ಎಲ್ಲ ತರಕಾರಿಗಳ ಬೆಲೆಯೂ ನೂರಕ್ಕೆ ಹತ್ತಿರವಾಗಿಯೇ ಇದೆ. ಅದಕ್ಕಾಗಿ ವ್ಯಾಪಾರಸ್ಥರು ಕೆಜಿ ದರದ ಬದಲು ಕಾಲು ಕೆಜಿ ದರವನ್ನೇ ಹೇಳುತ್ತಾರೆ.
ಈ ಹಬ್ಬಕ್ಕೆ ತರಕಾರಿಯಷ್ಟೇ ಸೊಪ್ಪುಗಳ ಅವಶ್ಯಕತೆಯೂ ಇದೆ. ಒಂದು ಕಟ್ಟು ಸಬ್ಬಸಗಿ ರು. 5, ಒಂದು ಕಟ್ಟು ಮೆಂತೆ ರು. 5, ಒಂದು ಮೂಲಂಗಿ ರು. 5, ಒಂದು ಪುಂಡೀಪಲ್ಯಸಿವುಡು ರು. 5, ಕೊತ್ತಂಬರಿ, ಕರಿಬೇವು ಅಲ್ಲ ಸೇರಿದಂತೆ ಸೊಪ್ಪುಗಳ ಬೆಲೆಯೂ ಸಾಕಷ್ಟು ಹೆಚ್ಚಿದೆ. ಅಲ್ಲದೇ ಹೆಸರು, ಮಡಿಕೆಗಳ ದರವೂ ಹೆಚ್ಚಿದೆ.
ಮಂಕಾದ ತರಕಾರಿ ಮಾರುಕಟ್ಟೆ: ತರಕಾರಿಗಳ ಬೆಲೆ ಏರಿಕೆಯಿಂದ ಗ್ರಾಮೀಣ ಭಾಗದ ಗ್ರಾಹಕರ ಸಂಖ್ಯೆ ಅತ್ಯಂತ ಕಡಿಮೆಯಾಗಿದೆ. ಗ್ರಾಹಕರಿಂದ ತುಂಬಿ ತುಳುಕಬೇಕಾಗಿದ್ದ ತರಕಾರಿ ಮಾರುಕಟ್ಟೆ ಅಷ್ಟೊಂದು ಗದ್ದಲವಿಲ್ಲ. ಹರಾಜಿನಲ್ಲಿ ಸಾಕಷ್ಟು ಹೆಚ್ಚಿನ ದರದಲ್ಲಿ ತರಕಾರಿ ತೆಗೆದುಕೊಂಡು ವ್ಯಾಪಾರವಿಲ್ಲದೇ ಸಾಕಷ್ಟು ಹಾನಿಯನ್ನು ಅನುಭವಿಸಬೇಕಾಗಿದೆ.
ಗ್ರಾಮೀಣ ಭಾಗದಲ್ಲಿ ಪಂಚಮಿ ಹಬ್ಬ ಹಾಗೂ ರೊಟ್ಟಿ ಹಬ್ಬವನ್ನು ಹೆಚ್ಚಿನ ಪ್ರಮಾಣದಲ್ಲಿ ಆಚರಿಸುವುದರಿಂದ ಅವರು ಬಂದರೆ ಮಾತ್ರ ಮಾರುಕಟ್ಟೆಯಲ್ಲಿ ಹೆಚ್ಚು ತರಕಾರಿ, ಸೊಪ್ಪು ಮಾರಾಟವಾಗುತ್ತವೆ ಎಂದು ತರಕಾರಿ ವ್ಯಾಪಾರಸ್ಥ ಕೆ. ಮಾರುತಿ ತಿಳಿಸಿದರು.

-ಶರಣು ಸೊಲಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement