ಅಭಿನಂದನೆ
ಗಜೇಂದ್ರಗಡ: ಸ್ಥಳೀಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಹಾಗೂ ಷಟಲ್ಕಾಕ್ ಪಂದ್ಯಾವಳಿಗಳಲ್ಲಿ ಎಸ್.ಎಂ. ಭೂಮರಡ್ಡಿ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸ್ಪರ್ಧೆಯಲ್ಲಿ ವಿಜೇತ ಕ್ರೀಡಾಪಟುಗಳ ಬಗೆಗೆ ಸಂಸ್ಥೆಯ ಅಧ್ಯಕ್ಷ ಡಾ. ಸಿ.ಸಿ. ಶಿವಪ್ಪಗೌಡರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇಂದು ಪ್ರಾಚೀನ ಸ್ಮಾರಕ ಕುರಿತು ಉಪನ್ಯಾಸ
ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಪಂಚಾಯಿತಿ ಆವರಣದಲ್ಲಿ ಆ. 10ರಂದು ಸಂಜೆ 6 ಗಂಟೆಗೆ ಶನಿವಾರ ಸಾಹಿತ್ಯ ಸಂಜೆ ಮಾಲಿಕೆ-33 ಕಾರ್ಯಕ್ರಮ ಜರುಗಲಿದೆ. ಗದಗಿನ ಹಿರಿಯ ಪ್ರಾಚ್ಯವಸ್ತು ಸಂಗ್ರಹಾಲಯದ ಮಾರ್ಗದರ್ಶಕ ಅ.ದ. ಕಟ್ಟಿಮನಿ ಇವರು ಗದಗ ಜಿಲ್ಲೆಯ ಪ್ರಾಚೀನ ಸ್ಮಾರಕ ಕುರಿತು ಉಪನ್ಯಾಸ ನೀಡುವರು. ಹುಲಕೋಟಿಯ ಕೆ.ಎಚ್. ಪಾಟೀಲ ಸರಕಾರಿ ಪದವಿ ಕಾಲೇಜಿನ ಕನ್ನಡ ಅತಿಥಿ ಉಪನ್ಯಾಸಕ, ಕವಿ ಡಾ. ಸದಾಶಿವ ದೊಡ್ಡಮನಿ ಕಾವ್ಯವಾಚನವನ್ನು ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಶಿವಪ್ಪ ಕುರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಶತಾಯುಷಿ ನಿಧನ
ಮುಳಗುಂದ: ಸ್ಥಳೀಯ ಶೇಖಿ ಓಣಿ ನಿವಾಸಿ ಶತಾಯುಷಿ ಹಲಿಮಾಬಿ ಕೋ ದಾದಾಶಾ ಮಕಾಂದಾರ (ದುರೇಲಿ) (125) ಶುಕ್ರವಾರ ಮಧ್ಯಾಹ್ನ ಸ್ವಗ್ರಹದಲ್ಲಿ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಐದು ಜನ ಪುತ್ರರು ಸೇರಿ ಅಪಾರ ಬಂಧುಗಳು ಇದ್ದಾರೆ. ಅಂತ್ಯಕ್ರಿಯೆ ಶನಿವಾರ ನಡೆಯಲಿದೆ.
ಬಸವರಾಜ ನಿಧನ
ಗದಗ: ಬೆಟಗೇರಿ ಗೌರಿಗುಡಿ ಓಣಿ ನಿವಾಸಿ ಬಸವರಾಜ ಅಜ್ಜಣ್ಣವರ (51) ಶುಕ್ರವಾರ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಹಾಗೂ ಅಪಾರ ಬಂಧು ಬಳಗ ಇದ್ದರು.
ಬಸವಣ್ಣೆಪ್ಪ ನಿಂಗಪ್ಪ ತೇಲಿ ನಿಧನ
ಶಿರಹಟ್ಟಿ: ಪಟ್ಟಣದ ವಾಲ್ಮಿಕಿ ನಗರದ ನಿವಾಸಿ ಬಸವಣ್ಣೆಪ್ಪ ನಿಂಗಪ್ಪ ತೇಲಿ (85) ಗುರುವಾರ ರಾತ್ರಿ ನಿಧನರಾದರು. ಇವರಿಗೆ ಪತ್ನಿ, ಐವರು ಪುತ್ರಿಯರು, ಓರ್ವ ಪುತ್ರ ಇದ್ದರು. ಸಾಮಾಜಿಕ ಕಳಕಳಿ ಹೊಂದಿದ್ದ ಬಸವಣ್ಣೆಪ್ಪ ಅವರು ಕಣ್ಣು ಹಾಗೂ ದೇಹವನ್ನು ಅವರ ಇಚ್ಛೆಯಂತೆ ಧಾರವಾಡ ಎಸ್ಡಿಎಂಸಿ ಕಾಲೇಜಿಗೆ ಒಪ್ಪಿಸಲಾಯಿತು.
ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಬಸಲಿಂಗಪ್ಪ ಕಪ್ಪತ್ತನವರ, ರಾಮಣ್ಣ ಡಂಬಳ, ದೇವಪ್ಪ ತಳವಾರ, ಬೀರಪ್ಪ ಸ್ವಾಮಿ, ಬಸವರಾಜ ಹರ್ತಿ, ಉಡಚಪ್ಪ ತಳವಾರ, ಶೀಮಣ್ಣ ಅಕ್ಕಿ ಸಂತಾಪ ಸೂಚಿಸಿದ್ದಾರೆ.
ಆರೋಗ್ಯವಿದ್ದಲ್ಲಿ ಮನಸ್ಸು ಆರೋಗ್ಯಕರ: ಚಿಂಚೆವಾಡೆ
ಗದಗ: ಆರೋಗ್ಯ ಉತ್ತಮವಾಗಿದ್ದಲ್ಲಿ ಮನಸ್ಸು ಆರೋಗ್ಯಕರವಾಗಿರುತ್ತದೆ, ಸದೃಢ ದೇಹದಲ್ಲಿ ಸದೃಢವಾದ ಮನಸ್ಸು ಇರಲು ಸಾಧ್ಯ ಎಂದು ಯುಆರ್ಸಿ ಸಮನ್ವಯಾಧಿಕಾರಿ ಎಂ.ಪಿ. ಚಿಂಚೆವಾಡೆ ಹೇಳಿದರು. ಅವರು ಈಚೆಗೆ ನಗರದ ಸರ್ಕಾರಿ ಮಾದರಿ ಕನ್ನಡ ಗಂಡುಮಕ್ಕಳ ಶಾಲೆ ನಂ 10ರ ಗದಗ ಸೆಂಟ್ರಲ್ ಸ್ಕೂಲಿನಲ್ಲಿ ನಡೆದ ಗ್ರೂಪ್ ನಂ-2ರ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ, ಹಸಿರು ಹಬ್ಬ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆರೋಗ್ಯವಂತರಾಗಲು ಪ್ರತಿ ಮಗು ಆಟಗಳಲ್ಲಿ ಭಾಗವಹಿಸುವುದು ಅವಶ್ಯ. ಕ್ರೀಡೆಗಳು ವ್ಯಕ್ತಿಯ ವಿಕಾಸಕ್ಕೆ ಪೂರಕವಾದಂತಹ ವಾತಾವರಣ ಕಲ್ಪಿಸುತ್ತದೆ ಎಂದರು. ಎಸ್ಡಿಎಂಸಿ ಸದಸ್ಯ ಪಿ.ಎಚ್. ತಳಗೇರಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಗದಗ: ಪ್ರತಿಭಾನ್ವಿತವಿದ್ಯಾರ್ಥಿಗಳಿಗೆ ಪುರಸ್ಕಾರ
ಗದಗ: ಹಾಲಕೇರಿ ಅನ್ನದಾನೇಶ್ವರ ಮಠದ ಗದುಗಿನ ಆನಂದಶ್ರಾಮದಲ್ಲಿ 101ನೇ ವಿಶೇಷ ಶತಮಾಸಿಕ ಶಿವಾನುಭವ ಕಾರ್ಯಕ್ರಮ ಆ. 14 ಮತ್ತು 15ರಂದು ಜರುಗಲಿದೆ. ಹಾಲಕೇರಿ ಪೀಠಾಧಿಕಾರಿ ಅಭಿನವ ಅನ್ನದಾನೇಶ್ವರ ಶ್ರೀಗಳ ನೇತೃತ್ವದಲ್ಲಿ ವಹಿಸಲಿದ್ದು, ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಶೈಕ್ಷಣಿಕ, ಕ್ರೀಡೆ, ಚಿತ್ರಕಲೆ, ಸಂಗೀತ, ನೃತ್ಯ ಮುಂತಾದ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯವನ್ನು ಶತಮಾಸಿಕ ಶಿವಾನುಭವ ಸಂಪದ ಕಾರ್ಯಕ್ರಮದ ಸಂಘಟನೆಯ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ವಿದ್ಯಾರ್ಥಿಗಳಿಗೆ ತಮ್ಮ ಭಾವಚಿತ್ರ ಹಾಗೂ ಸಾಧನೆಯ ಪರಿಚಯ ಪತ್ರವನ್ನು ಆ. 10 ರೊಳಗಾಗಿ ಆನಂದಶ್ರಾಮ ಹಾತಲಗೇರಿ ನಾಕಾಕ್ಕೆ ತಲುಪಿಸಲು ಕಾರ್ಯಕ್ರಮದ ಪದಾಧಿಕಾರಿಗಳಾದ ಎಸ್.ಪಿ. ಸಂಶಿಮಠ, ಪ್ರಾ. ಎಸ್.ವಿ. ಸಂಕನೂರ, ಬಿ.ಎಫ್. ಚೇಗರೆಡ್ಡಿ, ಸದಾನಂದ ಪಿಳ್ಳೆ, ಡಾ. ಎಸ್.ಎ.ಪಾಟೀಲ ತಿಳಿಸಿದ್ದಾರೆ.
ತರಬೇತಿ: ಅರ್ಜಿ ಆಹ್ವಾನ
ಗದಗ: ಹುಬ್ಬಳ್ಳಿಯ ನ್ಯಾಷನಲ್ ಕಂಪನಿಯ ವಿಭಾಗೀಯ ಕಚೇರಿಯವರ ಸಹಯೋಗದೊಂದಿಗೆ ದೇಶಪಾಂಡೆ ರುಡ್ಸೆಟ್ ಸಂಸ್ಥೆ, ಹಳಿಯಾಳ ಇವರು ಜನರಲ್ ಇನ್ಸೂರನ್ಸ್ ಏಜೆಂಟ್ರಾಗಲು ಆಸಕ್ತ ಯುವಕ ಯುವತಿಯರಿಂದ ತರಬೇತಿಗೆ ಅರ್ಜಿ ಆಹ್ವಾನಿಸಿದ್ದಾರೆ. 18 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟು ವಯೋವಾನದ, ವಿದ್ಯಾರ್ಹತೆ, ಕನಿಷ್ಠ ಪಿಯುಸಿ ಅಥವಾ ನಂತರದ ಶಿಕ್ಷಣವನ್ನು ಪೂರೈಸಿದ, ತಮ್ಮ ಇತ್ತೀಚಿನ 2 ಪಾಸ್ ಪೋರ್ಟ್ ಫೋಟೊಗಳೊಂದಿಗೆ ಮತ್ತು ವಾಸ್ತವ್ಯದ ದೃಢೀಕರಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ತಮ್ಮ ಪ್ಯಾನ್ಕಾರ್ಡನ ಝರಾಕ್ಸ ಪ್ರತಿ ಸಲ್ಲಿಸಬೇಕು. ತರಬೇತಿಯ ಅವಧಿ 7 ದಿನ ಮತ್ತು ತರಬೇತಿಯ ನಂತರ ಆನ್ಲೈನ್ ಪರೀಕ್ಷೆ ಇರುತ್ತದೆ. ಯಶಸ್ವಿ ಶಿಬಿರಾರ್ಥಿಗಳಿಗೆ ಐಆರ್ಡಿಎ ಮಾನ್ಯತೆ ಪಡೆದ ಲೈಸೆನ್ಸ್ ಪರೀಕ್ಷೆ ಮುಗಿದ 15 ದಿನದಲ್ಲಿ ನೀಡಲಾಗುತ್ತದೆ. ಲೈಸೆನ್ಸ್ ಪಡೆದ ಶಿಬಿರಾರ್ಥಿಗಳು ನ್ಯಾಷನಲ್ ಇನ್ಸೂರನ್ಸ ಕಂಪನಿಯ ಏಜೆಂಟ್ರಾಗಿ ಸೇವೆ ಸಲ್ಲಿಸಲು ಅರ್ಹರಾಗುತ್ತಾರೆ. ಆಸಕ್ತರು ಈ ಕೂಡಲೇ ದೇಶಪಾಂಡೆ ರುಡ್ಸೆಟ್ ಸಂಸ್ಥೆ, ಉದ್ಯೋಗ ವಿದ್ಯಾನಗರ, ದಾಂಡೇಲಿ ರಸ್ತೆ, ಹಳಿಯಾಳ, ಉ.ಕ. ಜಿಲ್ಲೆ, ಇವರಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ. 08284-220807, 9483485489, 9482188780 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.