ಬರದ ಮಧ್ಯೆ ನೆರೆ ಬರೆ
ಕನ್ನಡಪ್ರಭ ವಾರ್ತೆ, ಗದಗ, ಆ. 9
ಜಿಲ್ಲೆಯ ರೈತರಿಗೆ ಬರಗಾಲದ ಬಿಸಿಯ ಮಧ್ಯೆಯೂ ನೆರೆ ಹಾವಳಿಯನ್ನು ಎದುರಿಸುವ ಸಂಕಷ್ಟ ಎದುರಾಗಿದೆ.
ಮಳೆಯಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ ಆದರೂ ಇಲ್ಲಿಯ ರೈತರು ನೆರೆ ಹಾವಳಿಯಿಂದ ತಾವು ಬೆಳೆದಿದ್ದ ಅಲ್ಪ ಸ್ವಲ್ಪ ಬೆಳೆಯು ನದಿಯ ಪ್ರವಾಹದಿಂದ ಹಾಳಾಗುತ್ತಿದ್ದು, ಇದರಿಂದ ಜಿಲ್ಲೆಯ ರೈತ ಸಮುದಾಯ ಕಂಗಾಲಾಗಿದೆ. ಜಿಲ್ಲೆಯಲ್ಲಿ ಹರಿದಿರುವುದೇ ಎರಡು ನದಿಗಳು. ಒಂದು ಮಲಪ್ರಭಾ, ಇನ್ನೊಂದು ತುಂಗಭದ್ರಾ.
ಮಲಪ್ರಭಾ ಜಲಾಶಯ ಈ ಬಾರಿ ಭರ್ತಿಯಾಗುವುದೇ ಕಷ್ಟಕರ ಹಾಗಾಗಿ ಈ ಬಾರಿಯೂ ಜಿಲ್ಲೆಯ ರೈತರಿಗೆ ಉತ್ತಮ ನೀರಾವರಿ ಸೌಲಭ್ಯ ಸಿಗುವ ಸಾಧ್ಯತೆ ಕಡಿಮೆ ಎನ್ನುವ ಮಾತುಗಳ ಮಧ್ಯೆಯೇ ಜಿಲ್ಲೆಯ ಇನ್ನೊಂದೆಡೆ ಹರಿಯುವ ತುಂಗಭದ್ರಾ ನದಿ ತನ್ನ ಪ್ರಲಾಪವನ್ನು ತೋರ್ಪಡಿಸಿದ್ದು, ತುಂಗಭದ್ರಾ ನದಿ ದಡದಲ್ಲಿರುವ ಸಾವಿರಾರು ಎಕರೆ ಪ್ರದೇಶದಲ್ಲಿನ ಬೆಳೆಗಳು ಇಂದು ಸಂಪೂರ್ಣ ಜಲಾವೃತವಾಗಿದ್ದು, ಆ ಭಾಗದ ರೈತರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಭದ್ರಾ ನೀರೇ ಸಮಸ್ಯೆಗೆ ಕಾರಣ: ತುಂಗಭದ್ರಾ ನದಿಪಾತ್ರದ ಪ್ರದೇಶದಲ್ಲಿ ಒಂದು ತಿಂಗಳಿಂದ ವ್ಯಾಪಕ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಯಲ್ಲಿ 1 ಲಕ್ಷ 75 ಸಾವಿರ ಕ್ಯುಸೆಕ್ಗೂ ಅಧಿಕ ನೀರು ಹರಿದು ಮುನಿರಾಬಾದ್ ಜಲಾಶಯಕ್ಕೆ ಹೋಗುತ್ತಿತ್ತು. ಇದರ ಮಧ್ಯೆಯೇ ಭದ್ರಾ ಜಲಾಶಯವೂ ಭರ್ತಿಯಾದ ಹಿನ್ನೆಲೆಯಲ್ಲಿ ಆಗಸ್ಟ್ ಮೊದಲವಾರದಿಂದ ನದಿಗೆ ನೀರು ಬಿಡಲು ಪ್ರಾರಂಭಿಸುತ್ತಿದ್ದಂತೆ ತುಂಗಭದ್ರಾ ನದಿಯಲ್ಲಿನ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿ, ನದಿ ಅಕ್ಕಪಕ್ಕದ ಹೊಲಗಳಲ್ಲಿನ ಬೆಳೆಗಳೂ ಸಂಪೂರ್ಣ ಜಲಾವೃತವಾಗಿವೆ. ಭದ್ರಾ ಜಲಾಶಯದಿಂದ 45 ಸಾವಿರ ಕ್ಯುಸೆಕ್ ಹೊರ ಹರುವಿದ್ದು. ತುಂಗಭದ್ರಾ ನದಿಯಲ್ಲಿ 2 ಲಕ್ಷ ಕ್ಯುಸೆಕ್ಗೂ ಅಧಿಕ ನೀರು ಹರಿಯುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ.
ಎಲ್ಲೆಲ್ಲಿ ಸಮಸ್ಯೆ ?: ಪ್ರವಾಹದ ಭೀತಿ ಸದ್ಯ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ, ಗಂಗಾಪುರ, ಗುಮ್ಮಗೋಳ, ಹೆಸರೂರ ಹಾಗೂ ಶಿರಹಟ್ಟಿ ತಾಲೂಕಿನ ಕೆಲ ತುಂಗಭದ್ರಾ ನದಿ ದಡದಲ್ಲಿರುವ ಗ್ರಾಮಗಳ ರೈತರ ಜಮೀನುಗಳಲ್ಲಿ ಬೆಳೆದಿದ್ದ ಕಬ್ಬು, ಗೋವಿನಜೋಳ ಮುಂತಾದ ಬೆಳೆಗಳು ಇಂದು ನೀರಿನಲ್ಲಿ ನಿಂತಿದ್ದು, ಪ್ರವಾಹದ ಸ್ಥಿತಿ ಇನ್ನೊಂದು ವಾರ ಹೀಗೆಯೇ ಮುಂದುವರಿದಲ್ಲಿ ಬೆಳೆಗಳು ಸಂಪೂರ್ಣ ಹಾಳಾಗುವ ಸಾಧ್ಯತೆ ನಿಚ್ಛಳವಾಗಿದೆ. ದಿನೇ ದಿನೇ ನದಿಯಲ್ಲಿನ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಈ ಭಾಗದ ರೈತರಲ್ಲಿ ಮತ್ತಷ್ಟು ಚಿಂತೆ ಹೆಚ್ಚಿಸಿದೆ.
ಸಂಪೂರ್ಣ ಹಾಳು...
ನದಿಯಲ್ಲಿ ಅಪಾರ ಪ್ರಮಾಣ ನೀರು ಹರಿಯುತ್ತಿರುವುದರಿಂದ ನಮ್ಮ ಹೊಲಗಳೆಲ್ಲ ಜಲಾವೃತವಾಗಿವೆ. ಬೆಳೆಗಳು ನೀರಿನಲ್ಲಿ ನಿಂತು ಹೋಗಿವೆ. ಸಾವಿರಾರು ಹಣ ಖರ್ಚು ಮಾಡಿದ್ದು, ಪ್ರವಾಹದಲ್ಲಿ ಅದೆಲ್ಲ ಕೊಚ್ಚಿಕೊಂಡು ಹೋಗುವ ಸಾಧ್ಯತೆಯೇ ಹೆಚ್ಚಾಗಿದೆ. ಜಿಲ್ಲೆಯ ಇನ್ನುಳಿದ ತಾಲೂಕಿನ ರೈತರು ಮಳೆ ಕೊರತೆಯಿಂದ ತೊಂದರೆ ಅನುಭವಿಸಿದರೆ, ನಾವು ಪ್ರವಾಹದಿಂದ ತೊಂದರೆ ಅನುಭವಿಸುವಂತಾಗಿದೆ.
- ಶಿವಾನಂದ ಇಟಗಿ
ಗುಮ್ಮಗೋಳ, ರೈತ
ಕೂಡಲೇ ಸಮೀಕ್ಷೆ ನಡೆಸಲಿ
ತುಂಗಭದ್ರಾ ನದಿಯ ಪ್ರವಾಹದಿಂದ ನಮ್ಮ ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ. ಕೂಡಲೇ ಜಿಲ್ಲಾಡಳಿತ ತಾಲೂಕು ಆಡಳಿತ ಮೂಲಕ ಜಲಾವೃತವಾಗಿ ಹಾನಿಯ ಅಂಚಿನಲ್ಲಿರುವ ಹೊಲಗಳ ಸಮೀಕ್ಷೆ ನಡೆಸಿ, ರೈತರಿಗೆ ಆಗುತ್ತಿರುವ ನಷ್ಟವನ್ನು ಭರಿಸುವ ನಿಟ್ಟಿನಲ್ಲಿ ಗಮನ ನೀಡಬೇಕು.
- ಶರಣಪ್ಪ
ಕೊರ್ಲಹಳ್ಳಿ ಗ್ರಾಮದ ರೈತ
- ಶಿವಕುಮಾರ ಕುಷ್ಟಗಿ