ಶ್ರದ್ಧಾ ಭಕ್ತಿಯ ರಂಜಾನ್
ಕನ್ನಡಪ್ರಭ ವಾರ್ತೆ, ಗದಗ, ಆ. 9
ಒಂದು ತಿಂಗಳಿಂದ ಉಪವಾಸ ವ್ರತ ಮಾಡಿ, ಶ್ರದ್ಧಾ ಭಕ್ತಿಯಿಂದ ಮುಸ್ಲಿಂ ಬಾಂಧವರು ಶುಕ್ರವಾರ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಿದರು.
ಗುರುವಾರ ಚಂದ್ರ ದರ್ಶನವಾದ ನಂತರ ಹಬ್ಬಕ್ಕೆ ಚಾಲನೆ ನೀಡಿದ್ದ ಮುಸ್ಲಿಂ ಬಾಂಧವರು ಹೊಸ ಬಟ್ಟೆಗಳನ್ನು ಧರಿಸಿ ನಗರದ, ಡಂಬಳ ನಾಕಾ, ಈದ್ಗಾ, ಮುಳಗುಂದ ನಾಕಾದ ಪ್ರವಾಸಿ ಮಂದಿರದ ಮುಂಭಾಗದಲ್ಲಿರುವ ಶಾಹಿ ಈದ್ಗಾ, ಬೆಟಗೇರಿ ಭಾಗದ ಜನರು ರೇಲ್ವೆ ಈದ್ಗಾ ಮೈದಾನದಲ್ಲಿ ವಿಶೇಷ ನಮಾಜ ಸಲ್ಲಿಸಿದರು. ವಿಶೇಷ ಪ್ರಾರ್ಥನೆ ಮುಗಿಯುತ್ತಿದ್ದಂತೆ ಸ್ನೇಹಿತರು ಹಾಗೂ ಕುಟುಂಬ ವರ್ಗದ ಜನರು ಆಲಂಗಿಸಿಕೊಂಡು ಈದ ಮುಬಾರಕ ವಿನಿಮಯ ಮಾಡಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.
ರೋಣದಲ್ಲಿ ಆಚರಣೆ: ಪಟ್ಟಣದ ಅಂಜುಮನ್ ಪ್ರೌಢಶಾಲೆಯ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ರಂಜಾನ್ ಹಬ್ಬದ ಶುಭಾಶಯ ಕೋರುವ ಮೂಲಕ ರಂಜಾನ್ ಹಬ್ಬವನ್ನು ಸಡಗರದಿಂದ ಆಚರಿಸಿದರು. ಜನಾಬ ಅಬ್ದುಲ್ಗಣಿ ಮುಲ್ಲಾ ಮಾತನಾಡಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಶಫೀಕ ಮೂಗನೂರ, ಖಾದಿರಸಾಬ ಸಂಕನೂರ, ಅಶೋಕ ನವಲಗುಂದ, ಬಸವರಾಜ ಕಿರೇಸೂರ, ಬಾಬುಸಾಬ ಚಿನ್ನೂರ, ಮಲ್ಲನಗೌಡ ರಾಯನಗೌಡ್ರ, ಭವಾನಿ ಬೇಟಗೇರಿ, ಎ.ಕೆ. ಖತೀಬ, ಯೂಸೂಫ ಇಟಗಿ, ಮಲಿಕಸಾಬ ವಡಗೇರಿ, ಇನಾಯತ ತರಪದಾರ, ಕಲೀಲ ರಾಮದುರ್ಗ, ಯಮನೂರಸಾಬ ನದಾಫ, ಹಸನಸಾಬ ಅತ್ತಾರ ಸೇರಿದಂತೆ ಪಟ್ಟಣದ ಯುವಸೇವಾ ಸೇನಾ ಯುವಕ ಮಂಡಳ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಗಜೇಂದ್ರಗಡ ವರದಿ: ಪವಿತ್ರ ರಂಜಾನ್ ಮಾಸದಲ್ಲಿ ಬಡವರಿಗೆ ಅನಾಥರಿಗೆ, ನಿರ್ಗತಿಕರಿಗೆ ದಾನ, ಧರ್ಮ ಜತೆಗೆ ತಿಂಗಳ ಪೂರ್ತಿ ರೋಜಾ (ಉಪವಾಸ) ಆಚರಣೆಯಿಂದ ಮನುಷ್ಯನ ಅಂತರಂಗ, ಬಹಿರಂಗ ಶುದ್ಧಿಯಾಗಲಿದೆ ಎಂದು ಧರ್ಮಗುರು ಮೌಲಾನಾ ತ್ವಾಹಾ ಹೇಳಿದರು. ಸ್ಥಳೀಯ ಈದ್ಗಾ ಮೈದಾನದಲ್ಲಿ ಶುಕ್ರವಾರ ಸಾಮೂಹಿಕ ಪ್ರಾರ್ಥನೆಯಲ್ಲಿ ಅವರು ಮಾತನಾಡಿದರು. ಅಂಜುಮನ್ ಇಸ್ಲಾಂ ಕಮಿಟಿ ಚೇರಮನ್ ಎಂ.ಎಚ್. ಕೋಲಕಾರ, ಶಖೀಲ ಮೌಲಾನಾ, ಖಲೀಲ ಖಾಜಿ ಮೌಲಾನ, ರಫೀಕ್ ಮೌಲಾನ, ಯಾಸೀನ ಮೌಲಾನ, ಮಾತನಾಡಿದರು. ಟಕ್ಕೆದ ಮಸೀದಿಯ ಮೆಹಬೂಬ ಅಲಿಶಾ ಪೀರಾಂ ಮಕಾನದಾರ್, ಹಾಜಿ ಎ.ಆರ್. ಗೊಡೇಕಾರ, ಎಂ.ಕೆ. ಹೀರೇಹಾಳ, ಪಿ.ಕೆ. ಬಾಗವಾನ, ಉಮರಸಾಬ ಗೊಡೇಕಾರ, ಕೆ.ಡಿ. ಕಟ್ಟಿಮನಿ, ಎಂ.ಡಿ. ಮೋಮಿನ, ಎಂ.ಎಸ್. ಮೂಲಿಮನಿ, ಸುಬಾನಸಾಬ ಆರಗಿದ್ದಿ, ಡಿ.ಜಿ. ಮೋಮಿನ್, ಇಸ್ಮಾಯಿಲಸಾಬ ನಾಲಬಂದ, ಹಸನ ತಟಗಾರ, ಎ.ಎಸ್. ಮಕಾನದಾರ, ಎಂ.ಡಿ. ಸರಕಾವಸ ಸೇರಿದಂತೆ ಸಾವಿರಾರು ಸಂಖ್ಯೆಯ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.
ಲಕ್ಷ್ಮೇಶ್ವರ ವರದಿ: ಪಟ್ಟಣದ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಈದ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಸಡಗರದಿಂದ ಆಚರಿಸಿದರು. ಪಟ್ಟಣದ ಎಲ್ಲ ಮುಸ್ಲಿಂ ಬಾಂಧವರು ದೂದ ಪೀರಾ ದರ್ಗಾದಿಂದ ಮೆರವಣಿಗೆಯ ಮೂಲಕ ಸಾಗಿ ನಂತರ ಸೋಮೇಶ್ವರ ಸ್ಪಿನ್ನಿಂಗ್ಮಿಲ್ ಹತ್ತಿರ ಇರುವ ಈದ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೌಲ್ವಿಗಳು, ಪವಿತ್ರ ಹಬ್ಬವಾದ ರಂಜಾನ್ ಹಬ್ಬವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಿ ಅಲ್ಲಾನ ಕೃಪೆಗೆ ಪಾತ್ರರಾಗೋಣ. ದೇವರಲ್ಲಿ ನಂಬಿಗೆ ಇಟ್ಟು ಉತ್ತಮವಾದ ಕಾರ್ಯಗಳನ್ನು ಮಾಡುತ್ತ ಎಲ್ಲರೂ ಸಹಬಾಳ್ವೆಯಿಂದ ಜೀವನ ಸಾಗಿಸಬೇಕು ಎಂದು ನುಡಿದರು. ಒಂದು ತಿಂಗಳ ಪರ್ಯಂತ ಕಟ್ಟು ನಿಟ್ಟಿನ ಉಪವಾಸ ವೃತವನ್ನು ಆಚರಿಸುತ್ತಾ ಮಾಡಿದ ಪವಿತ್ರ ಮಾಸ ಮುಕ್ತಾಯದ ದಿನವು ರಂಜಾನ್ ಹಬ್ಬದ ವಿಶೇಷತೆಯಾಗಿದ್ದು, ಸಾಮೂಹಿಕ ಪ್ರಾರ್ಥನೆಯ ನಂತರ ಪರಸ್ಪರ ಅಪ್ಪಿಕೊಂಡು ಶುಭಾಷಯ ವಿನಿಮಯ ಮಾಡಿಕೊಳ್ಳುತ್ತಿರುವ ದೃಶ್ಯ ಎಲ್ಲ ಕಡೆಗೆ ಕಂಡು ಬಂದ ದೃಶ್ಯವಾಗಿತ್ತು.
ಮುಳಗುಂದ ವರದಿ: ಮುಳಗುಂದ ಪಟ್ಟಣದ ಮುಸ್ಲಿಂ ಸಮುದಾಯದ ಎಲ್ಲ ಜನರು ಶುಕ್ರವಾರ ಸಂಭ್ರಮದಿಂದ ರಂಜಾನ್ ಆಚರಿಸಿದರು. ಶಾಂತಿ, ಸಹನೆ, ಸೌಹಾರ್ದತೆ, ಪವಿತ್ರತೆಯ ಸಂಕೇತವಾಗಿರುವ ರಂಜಾನ್ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಪಟ್ಟಣದಲ್ಲಿ ಆಚರಿಸಲಾಯಿತು. ಹೊರವಲಯದಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದ ಎಲ್ಲ ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭ ಹಾರೈಸಿದರು.
ಶಿರಹಟ್ಟಿಯಲ್ಲಿ ಆಚರಣೆ: ಮುಸ್ಲಿಂ ಬಾಂಧವರು ಶುಕ್ರವಾರ ಈದ್ ಉಲ್ ಫಿತರ್ (ರಂಜಾನ್) ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಬೆಳಗ್ಗೆ 10 ಗಂಟೆಗೆ ಪಟ್ಟಣದ ಜಾಮಿಯಾ ಮಸೀದಿಯಿಂದ ಅಲ್ಲಾನ ನಾಮಸ್ಮರಣೆ ಮಾಡುತ್ತಾ ಪ್ರಮುಖ ಬೀದಿಗಳ ಮೂಲಕ ಸಂಚರಿಸುತ್ತಾ ಪಟ್ಟಣದ ಹೊರ ವಲಯದ ಹರಿಪುರ ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮೌಲಾನ ಅಬ್ದುಲ್ ಲತೀಫ್ ಖತೀಬ ಪವಿತ್ರ ಕುರಾನ ಫಠಣದ ನಂತರ ಧರ್ಮ ಸಂದೇಶದ ಪ್ರವಚನ ನೀಡಿದ ಅವರು, ಇಸ್ಲಾಂ ಧರ್ಮದಲ್ಲಿ ಉಪವಾಸ ವೃತಾಚರಣೆ ಮಹತ್ವದ ಸ್ಥಾನ ಪಡೆದುಕೊಂಡಿದೆ. ಪೈಗಂಬರರ ಸಂದೇಶದಂತೆ ಪ್ರತಿಯೊಬ್ಬ ಮುಸ್ಲಿಂ ಬಾಂಧವರು ನಮಾಜ್, ಹಜ್, ರೋಜಾ, ಜಕಾತ್, ಪಿತ್ರಾ ಈ ಪಂಚ ಸೂತ್ರಗಳನ್ನು ಪಾಲಿಸಿ ಅಲ್ಲಾನ ಕೃಪೆಗೆ ಪಾತ್ರರಾದಾಗ ಮೋಕ್ಷ ಸಾಧನೆ ಸಾಧ್ಯ ಎಂದು ಹೇಳಿದರು.
ಎ.ಎ. ಪಠಾಣ, ಪಪಂ ಮಾಜಿ ಅಧ್ಯಕ್ಷ ಹುಮಾಯೂನ ಮಾಗಡಿ, ಸದಸ್ಯ ಚಾಂದಸಾಬ ಮುಳಗುಂದ, ಮುಖಂಡರಾದ ಅಬ್ದುಲ್ಗೌಸ ಕುಬುಸದ, ಬಾಬೂಸಾಬ ಮನಿಯಾರ, ಅಜ್ಮದ ಮಾಗಡಿ, ಮಮ್ಮದಗೌಸ ಕುಬುಸದ, ಇಸಾಕ ಆದ್ರಳ್ಳಿ, ನಜೀರ ಡಂಬಳ, ಅಬ್ದುಲ್ ಲತೀಫ್ ಮಕಾನದಾರ, ಕೆ.ಎಫ್. ರಮಜಾನವರ ಮತ್ತಿತರರು ಉಪಸ್ಥಿತರಿದ್ದರು.