ಇಂದು ಬಸವ ಪಂಚಮಿ ಆಚರಣೆ
ಗದಗ: ಬಸವದಳ-ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಜ. ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ-2013 ಸಂಯುಕ್ತವಾಗಿ ಆ. 11ರಂದು ಬೆಳಗ್ಗೆ 10 ಗಂಟೆಗೆ ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಒಳರೋಗಿಗಳಿಗೆ ಹಾಗೂ 11 ಗಂಟೆಗೆ ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು, ಬಿಸ್ಕತ್ ವಿತರಿಸುವ ಮೂಲಕ ಬಸವ ಪಂಚಮಿಯನ್ನು ಆಚರಿಸಲಾಗುವುದು. ಕಾರಣ ಗದಗ-ಬೆಟಗೇರಿ ಮಹಾಜನತೆ ಬಸವಪಂಚಮಿಯ ಆಚರಣೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರೀಮಠಕ್ಕೆ ಬೆಳಗ್ಗೆ 9 ಗಂಟೆಗೆ ಆಗಮಿಸಬೇಕೆಂದು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾಕೂಟದಲ್ಲಿ ಯಶಸ್ಸು
ಗದಗ: ಸಾರ್ವಜನಿಕ ಶಿಕ್ಷಣ ಇಲಾಖೆಯ 2013-14ನೇ ಸಾಲಿನ ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಬಳಗಾನೂರ ಗ್ರಾಮದ ಚಿಕೇನಕೊಪ್ಪದ ಚನ್ನವೀರ ಶರಣರ ಪ್ರೌಢಶಾಲೆಯ ಬಾಲಕ ಬಾಲಕಿಯರು ವೈಯಕ್ತಿಕ ಹಾಗೂ ಗುಂಪು ಆಟಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಶಾಲೆಗೆ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಬಾಲಕಿಯರ ಗುಂಪು ಆಟಗಳಾದ ಖೋಖೋ ಪ್ರಥಮ, ಕಬಡ್ಡಿ ಪ್ರಥಮ ಸ್ಥಾನ, ಬಾಲಕರ ಗುಂಪು ಆಟಗಳಲ್ಲಿ ಕಬಡ್ಡಿಯಲ್ಲಿ ಪ್ರಥಮ, 100್ಢ4 ರಿಲೇ ದ್ವಿತೀಯ, 3 ಸಾವಿರ ಮೀಟರ್ ಓಟದಲ್ಲಿ ರಮೇಶ ಜೊತ್ರಣ್ಣವರ ಪ್ರಥಮ, ಅಡತಡೆ ಓಟದಲ್ಲಿ ಇನಾಯತ ಕಿನ್ನಾಳ ಪ್ರಥಮ, ನಡಿಗೆ ಸ್ಪರ್ಧೆಯಲ್ಲಿ ವಿನಾಯಕ ಕುರ್ತಕೋಟಿ ದ್ವಿತೀಯ, ಗುಂಡು ಎಸೆತದಲ್ಲಿ ಅಕ್ಷತಾ ಹೊಳಲಾಪುರ ದ್ವಿತೀಯ ಸ್ಥಾನ ಪಡೆದುಕೊಳ್ಳುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಪ್ರಶಸ್ತಿ ಗಳಿಸಿ ಶಾಲೆಗೆ ಕೀರ್ತಿ ತಂದ ಬಾಲಕ-ಬಾಲಕಿಯರಿಗೆ ಸಂಸ್ಥೆಯ ಅಧ್ಯಕ್ಷ ಶಿವಶಾಂತವೀರ ಶರಣರು, ಕಾರ್ಯಾಧ್ಯಕ್ಷ ಎಂ.ಬಿ. ಸಿಕ್ಕೇದೇಸಾಯಿ, ಕಾರ್ಯದರ್ಶಿ ಶೇಖಣ್ಣ ಗದ್ದಿಕೇರಿ, ನಿರ್ದೇಶಕ ಎ.ಎನ್. ನಾಗರಳ್ಳಿ, ಆಡಳಿತಾಧಿಕಾರಿ ಎಸ್.ಆರ್.ಹಳ್ಳೂರ, ಮುಖ್ಯೋಪಾಧ್ಯಾಯ ಜಿ.ಎಸ್.ರಾಜೂರ, ದೈಹಿಕ ಶಿಕ್ಷಕ ಎಸ್.ಎಸ್. ಗುಳೇದಗುಡ್ಡ, ಎಸ್.ಎಚ್. ಬಚನಳ್ಳಿ ಹಾಗೂ ಸಂಸ್ಥೆಯ ಸಿಬ್ಬಂದಿ ಅಭಿನಂದಿಸಿದ್ದಾರೆ.
16ರಿಂದ ಪ್ರವಚನ ಶಿಬಿರ
ಗದಗ: ನಗರದ ಅಬ್ಬಿಗೇರಿ ಕಾಂಪೌಂಡ್ನಲ್ಲಿರುವ ಸ್ಥಾನಿಕವಾಸಿ ಜೈನ ಭವನದಲ್ಲಿ ಆ. 16ರಿಂದ 20ರ ವರೆಗೆ ಬಸವಾನಂದ ಶ್ರೀಗಳ ನೇತೃತ್ವದಲ್ಲಿ ಪ್ರತಿನಿತ್ಯ ಬೆಳಗ್ಗೆ 5.30ರಿಂದ 6.30ರ ವರೆಗೆ ಚಂದ್ರು ಯೋಗ ಶಿಕ್ಷಕರಿಂದ ಯೋಗಾಸನ ಪ್ರಾಣಾಯಾಮ ಶಿಬಿರ ತದನಂತರ 6.30ರಿಂದ 7.30ರ ವರೆಗೆ ಬಸವಾನಂದ ಶ್ರೀಗಳಿಂದ ರೋಗದಿಂದ ಯೋಗದ ಕಡೆಗೆ ಅರೋಗ್ಯ ಮತ್ತು ಆಧ್ಯಾತ್ಮಿಕ ಪ್ರವಚನ ಶಿಬಿರ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಬಸವರಾಜ ಹಿರೇಹಡಗಲಿ-9449483506, ಶೇಖಣ್ಣ ಕವಳಿಕಾಯಿ-9448309711 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಅರ್ಜಿ ಆಹ್ವಾನ
ಮುಂಡರಗಿ: ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಾಗಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರನ್ನು ಆಯ್ಕೆ ಮಾಡಲು ಆಸಕ್ತ ಶಿಕ್ಷಕರಿಂದ ಮಾಹಿತಿ ಅಹ್ವಾನಿಸಲಾಗಿದೆ. ಸಮಗ್ರ ಮಾಹಿತಿಯುಳ್ಳ ಪುಸ್ತಕೆಯನ್ನು ತಯಾರಿಸಿ 3 ಪ್ರತಿಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಂಡರಗಿ ಇವರ ಕಚೇರಿಗೆ ಆ. 13ರ ಒಳಗಾಗಿ ಸಲ್ಲಿಸಲು ಕೋರಿದೆ.
2014ನೇ ಏಪ್ರಿಲ್ನಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿ 2014 ಮಾರ್ಚ್ 1ಕ್ಕೆ 15 ವರ್ಷ ವಯೋವಾನ ಪೂರ್ಣಗೊಳಿಸಿರಬೇಕು. ಅಂತಹ ಅಭ್ಯರ್ಥಿಗಳಿಗೆ ಖಾಸಗಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೂಡಲು ಅವಕಾಶ ಮಾಡಿಕೊಡಲಾಗಿದೆ. ಅರ್ಧಕ್ಕೆ ವ್ಯಾಸಂಗವನ್ನು ಮೊಟಕುಗೊಳಿಸಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಇಲ್ಲಿ ನಿಗದಿತ ಶುಲ್ಕ ಪಾವತಿಸಿ ನೋಂದಣಿ ಮಾಡಿಸಬೇಕು. ನೋಂದಣಿಗಾಗಿ ಆ. 12 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕರ ದೂ: 94804 60235 ಅಥವಾ ಮುಂಡರಗಿ ತಾಲೂಕಿನ ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಬಹುದು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಿಡಗಳು ನಮ್ಮ ಸ್ನೇಹಿತರಿದ್ದಂತೆ
ಗದಗ: ಗಿಡಗಳು ನಮ್ಮನಿಮ್ಮೆಲ್ಲರ ಸ್ನೇಹಿತರಿದ್ದಂತೆ, ಗಿಡ-ಮರಗಳಿಗೂ ನಮ್ಮಂತೆ ಬದುಕುವ ಹಕ್ಕಿದ್ದು, ಯುವ ಸಮೂಹ ಗಿಡಗಳನ್ನು ಬೆಳೆಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಎಲ್. ಗುಳೇದಗುಡ್ಡ ಹೇಳಿದರು.
ಅವರು ಈಚೆಗೆ ನಗರದ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಎನ್ಎಸ್ಎಸ್ ಘಟಕದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವಪೀಳಿಗೆಯು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಜಯಂತಿಲಾಲ ಕವಾಡದ ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರೊ. ಎಸ್.ಬಿ. ಜಾಧವ, ಎನ್ಎಸ್ಎಸ್ ಅಧಿಕಾರಿ ಪ್ರೊ. ಬಿ.ಪಿ. ಜೈನರ್ ಸೇರಿದಂತೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಇಂದು ಪೂರ್ವಭಾವಿ ಸಭೆ
ಗದಗ: ಸ್ಥಳೀಯ ಬಸವೇಶ್ವರ ನಗರದ ಉಳವಿ ಚನ್ನಬಸವೇಶ್ವರ (ಕಾಮನಕಟ್ಟಿ ಬಸವಣ್ಣ) ದೇವಸ್ಥಾನದ ಕಳಸಾರೋಹಣವು ಆ. 21ರಂದು ಜರುಗಲಿದ್ದು, ಪ್ರಯುಕ್ತ ಆ. 11ರ ಸಂಜೆ 6.30 ಗಂಟೆಗೆ ಬಸವೇಶ್ವರ ನಗರದ ಶಂಕರಲಿಂಗ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದ್ದು, ಈ ಸಭೆಗೆ ಸದ್ಭಕ್ತರು, ಓಣಿಯ ಹಿರಿಯರು ಪಾಲ್ಗೊಳ್ಳಬೇಕೆಂದು ಶಂಕರಲಿಂಗ ದೇವಸ್ಥಾನದ ಟ್ರಸ್ಟಿನ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.