ಕಲ್ಲು ನಾಗರದ ಬದಲು ಬಡಮಕ್ಕಳಿಗೆ ಹಾಲು..!
ಕನ್ನಡಪ್ರಭ ವಾರ್ತೆ, ಮುಂಡರಗಿ, ಆ. 10
ನಾಗರ ಪಂಚಮಿ ಎಂದರೆ ನಾಗರ ಕಟ್ಟೆಯ ಮೇಲೆ ಇಟ್ಟಿರುವ ಕಲ್ಲಿನ ನಾಗರ ಮೂರ್ತಿಗಳಿಗೆ ಹಾಲು ಹಾಕಿ ಹಬ್ಬ ಆಚರಿಸುವುದು ಎಲ್ಲೆಡೆ ವಾಡಿಕೆ. ಆದರೆ, ಮುಂಡರಗಿ ಇದಕ್ಕೆ ವಿಭಿನ್ನವಾಗಿದೆ. ಇಲ್ಲಿನ ಕೆಲವು ಕ್ರಿಯಾಶೀಲ ಗೆಳೆಯರು ಹಾಗೂ ಬಸವ ಭಕ್ತರು ತಮ್ಮ ಮನೆಗಳಲ್ಲಿ ಕಲ್ಲು ನಾಗರಕ್ಕೆ ಹಾಲು ಎರೆಯುವ ಬದಲು ಪಟ್ಟಣದಲ್ಲಿ ಇರುವ ಸ್ಲಂಗಳಿಗೆ ತೆರಳಿ ಅಲ್ಲಿನ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಕಳೆದ 8-10 ವರ್ಷಗಳಿಂದ ಆಚರಿಸುತ್ತಾ ಬಂದಿದ್ದಾರೆ.
ಮುಂಡರಗಿಯಲ್ಲಿ 8-10 ವರ್ಷಗಳ ಹಿಂದೆ ಇಲ್ಲಿನ ತಾಲೂಕು ಭಾರತ ಜ್ಞಾನ ವಿಜ್ಞಾನ ಸಮಿತಿ ಗೆಳೆಯರೆಲ್ಲರೂ ಸೇರಿಕೊಂಡು ಕಲ್ಲುನಾಗರಕ್ಕೆ ಹಾಲು ಹಾಕುವುದರಿಂದ ಯಾವುದೇ ಪ್ರಯೋಜನವಿಲ್ಲ. ಆ ಹಾಲನ್ನು ಹಸಿದ ಮಕ್ಕಳಿಗೆ ಕುಡಿಸಿದರೆ ಅದು ಸಾರ್ಥಕವಾಗುತ್ತದೆ ಎಂದು ಇದನ್ನು ಪ್ರಾರಂಭಿಸಿದರು. ಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಹೋಗಿ ಗೆಳೆಯರೆಲ್ಲರೂ ಪ್ರತಿವರ್ಷ ಒಂದೆಡೆ ಕೂಡಿಕೊಂಡು ಸ್ವಂತ ಖರ್ಚಿನಿಂದ ಈ ಕಾರ್ಯವನ್ನು ಮಾಡುತ್ತ ಸಾಗಿದರು.
ಬಸವ ಪಂಚಮಿ: ಈ ಕಾರ್ಯಕ್ರಮವನ್ನು ಗದಗ ತೋಂಟದಾರ್ಯ ಮಠದಲ್ಲಿ ಜ. ತೋಂಟದ ಡಾ. ಸಿದ್ದಲಿಂಗ ಶ್ರೀಗಳೂ ಈ ಕಲ್ಲು ನಾಗರಕ್ಕೆ ಹಾಲು ಹಾಕುವುದನ್ನು ವಿರೋಧಿಸಿ ಅದೇ ಹಾಲನ್ನು ಹಸಿದವರಿಗೆ ಹಾಗೂ ರೋಗಿಗಳಿಗೆ ಕುಡಿಸುವ ಮೂಲಕ ಬಸವ ಪಂಚಮಿಯನ್ನು ಆಚರಿಸಲು ಪ್ರಾರಂಭಿಸಿದ್ದರು. ನಂತರ ಆ ಪದ್ಧತಿಯನ್ನು ಮುಂಡರಗಿಯ ತೋಂಟದಾರ್ಯ ಮಠದಲ್ಲಿಯೂ ಅಳವಡಿಸಿಕೊಂಡು ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ತೋಂಟದಾರ್ಯಮಠ ಈ ಕಾರ್ಯಕ್ರಮವನ್ನು ಆಚರಿಸಲು ಪ್ರಾರಂಭಿಸಿದವು. ಇದೀಗ ಈ ಕಾರ್ಯಕ್ರಮವನ್ನು ತೋಂಟದ ಸಿದ್ಧಲಿಂಗ ಶ್ರೀಗಳ ಮಾರ್ಗದರ್ಶನದಲ್ಲಿ ಸಂಪೂರ್ಣವಾಗಿ ಮುಂಡರಗಿ ತೋಂಟದಾರ್ಯ ಮಠದಿಂದಲೇ ಆಚರಿಸಲಾಗುತ್ತಿದೆ.
ಅಪಾರ ಜನತೆ: ಮೊದಲು ಭಾರತ ಜ್ಞಾನ ವಿಜ್ಞಾನ ಸಮಿತಿ ಈ ಕಾರ್ಯಕ್ರಮವನ್ನು ಆಚರಿಸುವಾಗ ಸಂಘಟನೆಯ ಕೆಲವು ಗೆಳೆಯರು ಹಾಗೂ ಪದಾಧಿಕಾರಗಳು ಮಾತ್ರ ಸೇರುತ್ತಿದ್ದರು. ನಂತರ ಮಠದಲ್ಲಿ ಪ್ರಾರಂಭಿಸಿದಾಗ ಈ ಸಂಖ್ಯೆ ಮತ್ತಷ್ಟು ಹೆಚ್ಚಿತು. ಇದೀಗ ನೂರಾರು ಜನರು ಸ್ವಯಂ ಪ್ರೇರಣೆಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬರುವ ಎಲ್ಲ ಬಸವ ಭಕ್ತರೂ ತಮ್ಮ ಮನೆಯಲ್ಲಿ ಕಲ್ಲು ನಾಗರಕ್ಕೆ ಹಾಕಬೇಕಿರುವ ಹಾಲಿನ ಜತೆಗೆ ಇನ್ನಷ್ಟು ಹಾಲು ತರುತ್ತಾರೆ. ಇದರ ಜತೆಗೆ ಶ್ರೀಮಠದಿಂದಲೂ ಹಾಲನ್ನು ನೀಡಲಾಗುತ್ತಿದೆ.
ಸ್ಲಂ ನಿವಾಸಿಗಳಿಗೆ ಹಾಲು: 8-10 ವರ್ಷಗಳಿಂದ ಮುಂಡರಗಿ ಪಟ್ಟಣದಲ್ಲಿರುವ ಸ್ಲಂಗಳಿಗೆ ಹಾಗೂ ಸರ್ಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿನ ರೋಗಿಗಳಿಗೆ ಹಾಗೂ ಗರ್ಭಿಣಿಯರಿಗೆ ಹಾಲು ಕುಡಿಸುವುದರಿಂದ ನಾಗರ ಪಂಚಮಿ ಬಂದರೆ ಸಾಕು ಇಲ್ಲಿನ ಕೆಲವು ಸ್ಲಂಗಳಲ್ಲಿನ ಜನ ಇಂದು ನಮಗೆ ಹಾಲು ಕುಡಿಸಲು ಬರುತ್ತಾರೆ ಎಂದು ಕಾಯುತ್ತ ಇವರ ಆಗಮನದ ನಿರೀಕ್ಷೆಯಲ್ಲಿರುತ್ತಾರೆ.
ಗದುಗಿನ ತೋಂಟದ ಸಿದ್ಧಲಿಂಗ ಶ್ರೀಗಳು ಇಂತಹ ವಿಶೇಷ ಕಾರ್ಯಕ್ರಮವನ್ನು ಗದಗನಲ್ಲಿ ಕಳೆದ ಅನೇಕ ವರ್ಷಗಳಿಂದ ಮಾಡುತ್ತ ಬಂದಿದ್ದು, ಕಲ್ಲು ನಾಗರಕ್ಕೆ ಹಾಲು ಹಾಕುವ ಸಂಪ್ರದಾಯಕ್ಕೆ ತೆರೆ ಎಳೆದಿದ್ದಾರೆ. ಇಂತಹ ಜನೋಪಯೋಗಿ ಕಾರ್ಯಕ್ರಮಗಳು ಇಂದು ಹೆಚ್ಚು ಅವಶ್ಯವಾಗಿವೆ.
ಕೊಟ್ರೇಶ ಅಂಗಡಿ
ಶ್ರೀಮಠದ ಭಕ್ತ
ಈ ಜಗತ್ತಿನಲ್ಲಿರುವ ಎಷ್ಟೋ ಮಕ್ಕಳಿಗೆ ಹಾಲು ಎಂದರೆ ಏನು ಎನ್ನುವುದೇ ಗೊತ್ತಿಲ್ಲ. ಹಾಲು ಎಂದರೆ ಅಮೃತಕ್ಕೆ ಸಮಾನವಾದುದು. ಅಂತಹ ಹಾಲನ್ನು ಕಲ್ಲಿಗೆ ಹಾಕಿ ಹಾಳು ಮಾಡುವುದಕ್ಕಿಂತ ಬಡವರ ಹಾಗೂ ಶ್ರಮಿಕರ ಮಕ್ಕಳಿಗೆ ಕುಡಿಸಬೇಕೆನ್ನುವ ಗದುಗಿನ ತೋಂಟದ ಸಿದ್ಧಲಿಂಗ ಶ್ರೀಗಳ ಅಭಿಪ್ರಾಯಕ್ಕೆ ತೋಂಟದಾರ್ಯ ಮಠದ ಭಕ್ತರೆಲ್ಲರೂ ಈ ಕಾರ್ಯವನ್ನು ಚಾಚೂ ತಪ್ಪದೇ ಮಾಡಿಕೊಂಡು ಬರುತ್ತಿದ್ದೇವೆ.
ಈಶ್ವರಪ್ಪ ಬೆಟಗೇರಿ
(ತೋಂಟದಾರ್ಯ ಸೇವಾ ಸಮಿತಿ ಅಧ್ಯಕ್ಷ)
-ಶರಣು ಸೊಲಗಿ