ಕ್ರೀಡಾ, ಎನ್‌ಎಸ್‌ಎಸ್ ಚಟುವಟಿಕೆಗೆ ಚಾಲನೆ
ಕನ್ನಡಪ್ರಭ ವಾರ್ತೆ, ಗದಗ, ಆ. 10
ಗುರು ಶಿಷ್ಯರ ಬಾಂಧವ್ಯ ಸಂತ ಶಿಶುನಾಳ ಶರೀಫ ಹಾಗೂ ಗುರು ಗೋವಿಂದ ಭಟ್ಟರಂತೆ ಇರಬೇಕು. ಇಂದು ಮಹಿಳೆಯರು ಎಲ್ಲ ರಂಗದಲ್ಲಿಯು ಉನ್ನತ ಸ್ಥಾನದಲ್ಲಿದ್ದು, ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎಂದು ಆಶುಕವಿ ರಾಮಣ್ಣ ಬ್ಯಾಟಿ ಹೇಳಿದರು.
ಈಚೆಗೆ ಅವರು ನಗರದ ಹುಲಕೋಟಿ ಸಹಕಾರ ಶಿಕ್ಷಣ ಸಂಸ್ಥೆಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಾಂಘಿಕ, ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಉದ್ಘಾಟಿಸಿದ ಕಾಲೇಜಿನ ಸ್ಥಾನಿಕ ಸಮಿತಿಯ ಸದಸ್ಯ ಮೋಹನ್ ದುರಗಣ್ಣನವರ ಮಾತನಾಡಿದರು. ಸ್ಥಾನಿಕ ಸಮಿತಿಯ ಅಧ್ಯಕ್ಷ ಆರ್.ಕೆ. ಹಬೀಬ ಮಾತನಾಡಿ, ಸಾಹಿತ್ಯ ಮತ್ತು ಸಂಗೀತಕ್ಕೆ ಸಾಧನೆಯ ಜತೆಗೆ ದೈವ ಕೃಪೆಯು ಅವಶ್ಯಕವಾಗಿರುತ್ತದೆ. ಆ ಕಾಲದಲ್ಲಿ ಕುಮಾರವ್ಯಾಸನು ದೈವಕವಿಯೆಂದು ಪ್ರಸಿದ್ಧಿ ಪಡೆದಿದ್ದರೆ ಇಂದು ರಾಮಣ್ಣ ಬ್ಯಾಟಿಯವರು ದೈವಕವಿಯಾಗಿ ಪ್ರಖ್ಯಾತಿಯನ್ನು ಹೊಂದಿದ್ದಾರೆ. ಒಬ್ಬ ಅನಕ್ಷರಸ್ಥ ವ್ಯಕ್ತಿ ಕವಿ ಮತ್ತು ಸಾಹಿತಿಯಾಗಲು ಸಾಧ್ಯ ಎಂಬುದಕ್ಕೆ ರಾಮಣ್ಣ ಬ್ಯಾಟಿಯವರೇ ಉದಾಹರಣೆ. ಯಾವುದೇ ಶಿಕ್ಷಣವಿಲ್ಲದಿದ್ದರೂ ಅವರು ರಚಿಸಿದ ಷಟ್ಪಧಿ ಕಾವ್ಯ ಬಂಡಾರ ಅಚಚ್ರಿ ಮೂಡಿಸುವಂತಿದೆ. ಎಷ್ಟೇ ಶಿಕ್ಷಣ ಪಡೆದು ರಚಿಸಲಾಗದ ಕಾವ್ಯಗಳನ್ನು, ಕೀರ್ತನೆಗಳನ್ನು ರಾಮಣ್ಣ ಬ್ಯಾಟಿಯವರು ರಚಿಸಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಸಮಿತಿಯ ಸದಸ್ಯ ಬಿ.ಎನ್. ದಾಯಮ್ಮನವರ ಮತನಾಡಿದರು. ಬಿಕಾಂ ಅಂತಿಮ ವರ್ಷದಲ್ಲಿ ಮೊದಲ ಸ್ಥಾನಪಡೆದ ನಸ್ರೀನಾಭಾನು ನದ್ದಿಮುಲ್ಲಾ, ಬಿಎ ಅಂತಿಮ ವರ್ಷದಲ್ಲಿ ಮೊದಲ ಸ್ಥಾನ ಪಡೆದ ಎಚ್.ಎಂ. ಮುಳ್ಳಣ್ಣವರ ಅವರನ್ನು ಸನ್ಮಾನಿಸಲಾಯಿತು. ಸಾವಿತ್ರಿ ತಿರ್ಲಾಪೂರ ಪ್ರಾರ್ಥಿಸಿದರು. ಪ್ರಾ. ಉಮೇಶ ಬಾರಕೇರ ಸ್ವಾಗತಿಸಿದರು. ಪ್ರೊ. ಎಸ್.ಎನ್. ಶ್ಯಾಗೋಟಿ ವಂದಿಸಿದರು.