ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜನರಿಗೆ ದೊರೆಯದ ಶುದ್ಧ ನೀರು

Vishwanath S
Updated On : 11 Aug 2013, 11:49 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಆ. 10
ಕರ್ನಾಟಕ ನೀರು ಸರಬರಾಜು ಮತ್ತು ಜಲ ಮಂಡಳಿ ನಿಗಮ ಕೈಗೆತ್ತಿಕೊಂಡಿರುವ ಶುದ್ಧ ಕುಡಿವ ನೀರು ಪೂರೈಕೆ ಕಾಮಗಾರಿಗೆ 5 ವರ್ಷವಾದರೂ ಜನರಿಗೆ ಶುದ್ಧ ಕುಡಿವ ನೀರಿನ ಸೌಲಭ್ಯ ಹಗಲು ಕನಸಾಗಿದೆ. ರು. 28 ಕೋಟಿ ವೆಚ್ಚದಲ್ಲಿ ತಾಲೂಕಿನ ಹೊಳೆ ಇಟಗಿ ಗ್ರಾಮದ ತುಂಗಭದ್ರಾ ನದಿಯಿಂದ ಬೆಳ್ಳಟ್ಟಿ, ದೇವಿಹಾಳ, ಛಬ್ಬಿ, ಶಿರಹಟ್ಟಿ ಮಾರ್ಗವಾಗಿ ಗದಗ ತಾಲೂಕಿನ ಮುಳಗುಂದ ಗ್ರಾಮ ಮಧ್ಯದಲ್ಲಿ ಬರುವ 10 ಹಳ್ಳಿಗಳಿಗೆ ಅಂದಾಜು 48 ಕಿ.ಮೀ ವರೆಗೆ ಶುದ್ಧ ಕುಡಿವ ನೀರು ಪೂರೈಸುವ ಈ ಯೋಜನೆ ಕೊನೆ ಹಂತ ತಲುಪಿದ್ದರೂ ಬಹುದಿನಗಳ ಜನರ ಆಸೆ ಮಾತ್ರ ಈಡೇರಿಲ್ಲ.
ನಾಮಫಲಕ ಹಾಕಿಲ್ಲ: ನಿರ್ಲಕ್ಷ್ಯ ತೋರಿದ ಅಭಿಯಂತರು, ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರು, ಕಳಪೆ ಗುಣಮಟ್ಟದಿಂದ ಕೂಡಿದ ಕಾಮಗಾರಿಯಿಂದಾಗಿ ಕೋಟಿ ವೆಚ್ಚದ ಯೋಜನೆ ಯಶಸ್ವಿ ಸಾಧಿಸುವಲ್ಲಿ ವಿಫಲವಾಗುತ್ತಿರುವುದು ಸತ್ಯವಾಗಿದೆ.
ಆಂಧ್ರ ಮೂಲದ ಸಾಯಿ ಸುಧೀರ ಎಂಬುವರು ಕಾಮಗಾರಿ ಗುತ್ತಿಗೆ ಪಡೆದಿದ್ದು, ವೆಚ್ಚ, ಮುಗಿಯುವ ಅವಧಿ, ಗುಣಮಟ್ಟ ಮುಂತಾದ ಮಾಹಿತಿಯ ನಾಮಫಲಕವನ್ನು ಯಾವ ಸ್ಥಳದಲ್ಲಿಯೂ ಅಳವಡಿಸಿಲ್ಲ.
ಜನವರಿ 2008ರಲ್ಲಿ ಅಂದಿನ ಶಾಸಕ ಜಿ.ಎಸ್. ಗಡ್ಡದೇವರಮಠ ಹಾಗೂ ಬೆಳ್ಳಟ್ಟಿ ಮತ ಕ್ಷೇತ್ರದ ಜಿಪಂ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಅವರ ಹೋರಾಟದಿಂದಾಗಿ ಮಂಜೂರಾದ ಈ ಯೋಜನೆ ಫೆ. 2009ರಂದು ಟೆಂಡರ್ ಕರೆಯಲಾಗಿತ್ತು. ಕಾಮಗಾರಿ 18 ತಿಂಗಳ ಕಾಲಮಿತಿ ನಿಗದಿ ಮಾಡಲಾಗಿತ್ತು. ಕೇಂದ್ರ ಸರ್ಕಾರದ ಶೇ. 80. ರಾಜ್ಯ ಸರ್ಕಾರದ ಶೇ. 10, ಯುಸಿಓದ ಶೇ. 10 ಅನುದಾನ ಸೇರಿ ಒಟ್ಟು ರು. 28 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಕುಡಿವ ನೀರಿಗೆ ಪರದಾಟ: ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಕಂಡುಬರುತ್ತಿದೆ. ಕುಡಿವ ನೀರು ಯೋಜನೆಗಾಗಿ ಕಾದು ಜನತೆ ನಿರಾಶರಾಗಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಪ್ಲೋರೈಡ್ ಅಂಶವಿರುವ ನೀರು, ಬೋರ್‌ವೆಲ್‌ನ ಸವಳು ನೀರೇ ಗತಿಯಾಗಿದ್ದು, ಜನತೆ ಅನೇಕ ಕಾಯಿಲೆಗಳಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ.
ಕಳಪೆ ಕಾಮಗಾರಿ ಆರೋಪ
ಮೂಲ ಯೋಜನೆಯಂತೆ ರೈತರ ಜಮೀನಿನಲ್ಲಿ 5 ಪೂಟ ಆಳದವರೆಗೆ ಪೈಪ್ ಇಳಿಸಬೇಕು. ಇದರಿಂದ ರೈತರ ಜಮೀನಿನಲ್ಲಿರುವ ಫಸಲಿಗೆ ಹಾನಿಯಾಗುವುದಿಲ್ಲ. ಆದರೆ, ಕೇವಲ 2 ಅಡಿ ಆಳದವರೆಗೆ ಪೈಪ್ ಇಳಿಸಲಾಗಿದೆ. ಕಬ್ಬಿಣದ ಪೈಪ್ ಸುತ್ತಲೂ ಗುಣಮಟ್ಟ ಇಲ್ಲದ ಸಿಮೆಂಟ್ ಬಳಸಿ ಪೈಪ್ ತಯಾರಿಸಿದ್ದು, ಭೂಮಿಯಲ್ಲಿ ಅಳವಡಿಸುವ ಮೊದಲೇ ಬಿರುಕು ಬಿಟ್ಟಿವೆ. ಇದರಿಂದ ರೈತರ ಭೂಮಿಯಲ್ಲಿ ಜೋಡಿಸಿದ ಪೈಪ್ ಒಡೆದು ರೈತರ ಫಸಲಿಗೆ ಹಾನಿಯುಂಟಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ.
5 ವರ್ಷಗಳ ಹಿಂದೆಯೇ ಕಾಮಗಾರಿ ಆರಂಭಗೊಂಡಿದ್ದು, ತೀವ್ರ ಮಂದಗತಿಯಲ್ಲಿ ಸಾಗಿದೆ. ನೀರು ಸಂಗ್ರಹ ಘಟಕದಲ್ಲಿ ಚಪ್ಪಲಿ, ಬಿದ್ದು ಸತ್ತ ಕಪ್ಪೆಗಳು ನಾರುತ್ತಿವೆ. ನೀರು ಶುದ್ಧೀಕರಣ ಘಟಕ ಕಾಮಗಾರಿ ಅಪೂರ್ಣಗೊಂಡಿದ್ದು, ಅಳವಡಿಸಿದ ಕಬ್ಬಿಣ ಯಂತ್ರ ಸರಿಯಾದ ಉಸ್ತುವಾರಿ ಇಲ್ಲದೇ ತುಕ್ಕು ಹಿಡಿದು ಹಾಳಾಗಿದೆ. ಲಕ್ಷಾಂತರ ರೂ. ಬೆಲೆ ಬಾಳುವ ವಿದ್ಯುತ್ ಪರಿವರ್ತಕ ಬಯಲಲ್ಲಿ ಬಿದ್ದು ಹಾಳಾಗುತ್ತಿವೆ. ಸದ್ಯ 8 ತಿಂಗಳಿಂದ ಕಾಮಗಾರಿ ಬಂದಾಗಿದ್ದು, ಯೋಜನೆಯಂತೆ ಕಾಮಗಾರಿ
ನಡೆದಿಲ್ಲ.
ತಿಮ್ಮರಡ್ಡಿ ಮರಡ್ಡಿ, (ಬೆಳ್ಳಟ್ಟಿ ಗ್ರಾಪಂ ಅಧ್ಯಕ್ಷ)
ಮೋಹನ್ ಗುತ್ತೆಮ್ಮನವರ(ಸದಸ್ಯ)

-ಮಹದೇವಪ್ಪ ಎಂ. ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement