ಸಕಾಲಕ್ಕೆ ಸಾಲ ಮರು ಪಾವತಿಸಿ: ಹಿರೇಮಠ
ಕನ್ನಡಪ್ರಭ ವಾರ್ತೆ, ಗದಗ, ಆ. 10
ಸಾಲ ಪಡೆದ ವ್ಯಕ್ತಿಯು ಸಕಾಲದಲ್ಲಿ ಸಾಲವನ್ನು ಬ್ಯಾಂಕ್ಗೆ ಮರುಪಾವತಿ ಮಾಡಿದಲ್ಲಿ ಇತರರು ಸಾಲ ಸೌಲಭ್ಯ ಪಡೆದುಕೊಳ್ಳಲು ಸಹಕಾರಿಯಾಗಲಿದೆ. ಸಾಲ ನಿಂತ ನೀರಾಗದೇ ಹರಿಯುವ ನೀರಾಗಬೇಕು ಎಂದು ಕೆವಿಜಿ ಬ್ಯಾಂಕ್ನ ಪ್ರಾದೇಶಿಕ ಕಚೇರಿಯ ಹಿರಿಯ ಅಧಿಕಾರಿ ಎಸ್.ಜಿ. ಹಿರೇಮಠ ಹೇಳಿದರು.
ಅವರು ಈಚೆಗೆ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ಕೆವಿಜಿ ಶಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಸಾಲ ವಿತರಣಾ ಸಪ್ತಾಹ ಕಾರ್ಯಕ್ರಮದಲ್ಲಿ ಸಾಲಪತ್ರ ವಿತರಿಸಿ ಮಾತನಾಡಿದರು.
ಇಂದು ಬ್ಯಾಂಕ್ಗಳು ಗ್ರಾಮೀಣ ಜನರ ಬದುಕಿಗಾಗಿ ಶ್ರಮಿಸುತ್ತಿವೆ. ಗ್ರಾಮೀಣ ಭಾಗದಲ್ಲಿನ ರೈತರಿಗಾಗಿ ಹಲವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಹಲವು ಗ್ರಾಮೀಣ ಪ್ರದೇಶದಲ್ಲಿ ಕೆವಿಜಿ ಬ್ಯಾಂಕ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆಲ್ಲ ಸಾರ್ವಜನಿಕರ ಸಹಕಾರವೇ ಕಾರಣವಾಗಿದೆ. ಅಲ್ಲದೇ ಜನರ ಏಳ್ಗೆಗಾಗಿಯೇ ಬ್ಯಾಂಕ್ ಇದ್ದು, ಬ್ಯಾಂಕ್ ನೀಡುವ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವಂತೆ ಸೂಚಿಸಿದರು.
ಬ್ಯಾಂಕ್ನ ಶಾಖಾ ವ್ಯವಸ್ಥಾಪಕ ಡಾ. ಟಿ.ಎಸ್. ಹಟ್ಟಿ, ಸಂಗಮೇಶ ಮಂಗಳೂರ, ಎಂ.ಎಚ್. ದಾಸರ ಮುಂತಾದವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಂ. ಪಟ್ಟಣಶೆಟ್ಟಿ ಪ್ರಾರ್ಥಿಸಿದರು. ಎಂ.ಎಸ್. ದಾಸರ ಸ್ವಾಗತಿಸಿದರು. ಎಂ.ಎಚ್. ಕರಿಗಾರ ನಿರೂಪಿಸಿದರು. ಶಿವಣ್ಣ ಬಳಿಗೇರ ವಂದಿಸಿದರು.