ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಕ್ರಮ ಮರಳು ಗಣಿಗಾರಿಕೆ ತಡೆಗೆ ಮನವಿ

Lingaraj Badiger
Updated On : 12 Aug 2013, 11:29 am

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಆ. 11
ಅಕ್ರಮ ಮರಳು ಗಣಿಗಾರಿಕೆ ತಾಲೂಕಿನ ಅನೇಕ ಹಳ್ಳ ಹಾಗೂ ನದಿ ಪಾತ್ರಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಹಳ್ಳ ಮತ್ತು ದಂಡೆಯ ಪಕ್ಕದ ಹೊಲಗಳಲ್ಲಿ ಅಕ್ರಮವಾಗಿ ಮರಳನ್ನು ತೆಗೆಯುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಕೋಗನೂರು ರೈತರು ಆಗ್ರಹಿಸಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಮನವಿ ಸಲ್ಲಿಕೆ ವೇಳೆ ರೈತರು ಸುದ್ದಿಗಾರರ ಜತೆ ಮಾತನಾಡಿ, ಗೋಜನೂರು, ಲಕ್ಷ್ಮೇಶ್ವರ, ಮಾಗಡಿ, ರಾಮಗೇರಿ, ಗೋವನಾಳ ಮುಂತಾದ ಹಳ್ಳಿಗಳಿಂದ ಬರುವ ನೀರು ಸೇರಿ ದೊಡ್ಡ ಹಳ್ಳ ನಿರ್ಮಾಣವಾಗಿದೆ. ಅದು ಮುಂದೆ ತುಂಗಭದ್ರಾ ನದಿ ಸೇರುತ್ತದೆ.
ಈ ಹಳ್ಳದ ಪಾತ್ರದಲ್ಲಿ ಅನೇಕ ಹಳ್ಳಿಗಳಿವೆ. ಮಳೆಗಾಲದಲ್ಲಿ ತುಂಬುವ ಈ ಹಳ್ಳ ಬೇಸಿಗೆಯಲ್ಲಿ ಬರಿದಾಗುತ್ತದೆ. ಹಳ್ಳದ ಮರಳಿನ ತಳದಲ್ಲಿರುವ ನೀರನ್ನು ಬಳಸಿಕೊಂಡು ರೈತರು ಬೇಸಿಗೆಯಲ್ಲೂ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಈಗ ಯಾಂತ್ರೀಕೃತ ಬೋಟ್ ಬಳಸಿ ಅಕ್ರಮವಾಗಿ ಮರಳು ಎತ್ತಲಾಗುತ್ತಿದ್ದು, ಬಸಿಯುವ ನೀರೂ ಇಲ್ಲವಾಗಿದೆ ಎಂದು ದೂರಿದರು.
ಲಕ್ಷ್ಮೇಶ್ವರ ಹೋಬಳಿಯ ಹುಲ್ಲೂರ, ಪು-ಬಡ್ನಿ, ಅಮರಾಪುರ, ಸ್ವಾಗ್ಯಾಳ, ಅಂಕಲಿ, ಕೋಗನೂರು, ಗೋವನಕೊಪ್ಪ, ಇಟಿಗಿ, ಹೆಬ್ಬಾಳ, ಸಾಸಲವಾಡ ಮುಂತಾದೆಡೆ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ಸಾಗಿದೆ. ಅಧಿಕಾರಿಗಳು ಮಾತ್ರ ಸುಮ್ಮನಿರುವುದು ಅನುಮಾನ ಮೂಡಿಸಿದೆ.
ಈ ಮಾಫಿಯಾಗೆ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಕೃಪಾಕಟಾಕ್ಷ ಇರುವ ಗುಮಾನಿಯಿದೆ ಎಂದು ಗೋವನಕೊಪ್ಪ ಗ್ರಾಮದ ರೈತರಾದ ಈಶ್ವರ ಹೂಗಾರ, ಮಾರುತಿ ದಾಸರ, ಮಹ್ಮದ್‌ಸಾಬ ನದಾಫ್, ಹನುಮಂತ ಇಮ್ಮಡಿ, ನಿಂಗಪ್ಪ ಕಲ್ಲಾಗನೂರ, ಗುಡ್ಡಪ್ಪ ಕಬ್ಬೇರಹಳ್ಳಿ, ನಿಂಗಪ್ಪ ಹೊಸಮನಿ, ಭೀಮಪ್ಪ ಇಮ್ಮಡಿ ಆರೋಪಿಸಿದರು.
ಮಾಜಿ ಶಾಸಕ ಎಸ್.ಎನ್. ಪಾಟೀಲ ಮಾತನಾಡಿ, ಅಕ್ರಮ ಮರಳು ಗಣಿಗಾರಿಕೆಯಿಂದ ಸರ್ಕಾರಕ್ಕೆ ರಾಜಧನ ನಷ್ಟವಾಗುತ್ತಿದ್ದರೂ ತಾಲೂಕಿನ ಕಂದಾಯ ಅಧಿಕಾರಿಗಳೇಕೆ ಮೌನವಾಗಿದ್ದಾರೆ? ಅಕ್ರಮ ಮರಳು ಸಾಗಾಟ ತಡೆಯಲು ಆಗದಿದ್ದರೆ ರಾಜಿನಾಮೆ ನೀಡಿ, ಮನೆಗೆ ಹೋಗಿ. ಇಲ್ಲವಾದರೆ ರೈತರು ನೀಡಿರುವ ಮನವಿಗೆ ಸ್ಪಂದಿಸಿ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement