ಜಿಲ್ಲಾದ್ಯಂತ ನಾಗರ ಪಂಚಮಿ ಸಂಭ್ರಮ
ಕನ್ನಡಪ್ರಭ ವಾರ್ತೆ, ಗದಗ, ಆ. 11
ಜಿಲ್ಲೆಯಾದ್ಯಂತ ಭಾನುವಾರ ನಾಗರ ಪಂಚಮಿಯನ್ನು ಶ್ರದ್ಧಾ, ಭಕ್ತಿ ಹಾಗೂ ಸಡಗರದಿಂದ ಆಚರಿಸಲಾಯಿತು.
ಕೆಲವರು ಈ ಹಿಂದಿನ ಮಾದರಿಯಲ್ಲಿಯೇ ಪಾರಂಪರಿಕವಾಗಿ ಆಚರಿಸಿದರೆ, ಕೆಲವರು ವೈಜ್ಞಾನಿಕ ಹಿನ್ನೆಲೆಯಲ್ಲಿ ಆಚರಿಸುವ ಮೂಲಕ ಹಳೆ ಮತ್ತು ಹೊಸ ತಲೆಮಾರಿನ ಆಚರಣೆಗೆ ಸಾಕ್ಷಿಯಾದರು. ಜಿಲ್ಲೆಯಲ್ಲಿ ಮತ್ತೊಮ್ಮೆ ಬರದ ಛಾಯೆ ಆವರಿಸಿದ್ದು, ಇದರ ಮಧ್ಯೆಯೇ ಸಾರ್ವಜನಿಕರು ಹಬ್ಬ ಆಚರಣೆಯಲ್ಲಿ ತೊಡಗಿದ್ದರು.
ತೋಂಟದಾರ್ಯ ಶ್ರೀಗಳ ನೇತೃತ್ವದಲ್ಲಿ ಕಲ್ಲು ನಾಗಪ್ಪನಿಗೆ ಹಾಲು ಎರೆಯುವ ಬದಲು, ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು ನೀಡುವ ಮೂಲಕ ಹಬ್ಬ ಆಚರಿಸಲಾಯಿತು. ಕಲ್ಲು ನಾಗಪ್ಪನಿಗೆ ಹಾಕುವ ಹಾಲು ವ್ಯರ್ಥವಾಗಿ ಹೋಗುತ್ತದೆ. ಹಬ್ಬದ ಹೆಸರಿನಲ್ಲಿ ಅದೇ ಹಾಲನ್ನು ರೋಗಿಗಳಿಗೆ ನೀಡಿದಲ್ಲಿ ಅವರ ಆರೋಗ್ಯಕ್ಕೆ ಹೆಚ್ಚಿನ ಸಹಕಾರಿಯಾಗಲಿದೆ ಎನ್ನುವುದು ಹಬ್ಬದ ಹಿಂದಿರುವ ವೈಜ್ಞಾನಿಕ ಚಿಂತನೆಯಾಗಿದೆ ಎಂದು ಬಿಂಬಿಸುವ ರೀತಿಯಲ್ಲಿಯೂ ಆಚರಿಸಿದರು.
ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿಯೂ ಮಹಿಳೆಯರು, ಮಕ್ಕಳು ಹೊಸ ಹೊಸ ಬಟ್ಟೆಗಳನ್ನು ಹಾಕಿಕೊಂಡು, ನಾಗಪ್ಪನ ಮೂರ್ತಿ ಇರುವ ದೇವಸ್ಥಾನಗಳಿಗೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಹಾಲು (ಅಳ್ಳಿಟ್ಟು) ವಿಶೇಷ ತಿಂಡಿಯನ್ನು ನೈವೇದ್ಯ ಮಾಡಿ, ನಂತರ ಮನೆ ಮಂದಿಯಲ್ಲ ಸೇರಿ ವಿಶೇಷ ಭೋಜನವನ್ನು ಸವಿಯುವ ಮೂಲಕ ಹಬ್ಬವನ್ನು ಆಚರಿಸಿದರು.
ಲಕ್ಷ್ಮೇಶ್ವರ ವರದಿ: ದೇವರ ಪಾಲು, ಹಿರಿಯರ ಪಾಲು, ಅಜ್ಜನ ಪಾಲು, ಅಮ್ಮನ ಪಾಲು, ಅಪ್ಪನ ಪಾಲು, ಅವ್ವನ ಪಾಲು, ಅಣ್ಣನ ಪಾಲು, ಅಕ್ಕನ ಪಾಲು, ತಮ್ಮನ ಪಾಲು, ತಂಗಿ ಪಾಲು, ಎಲ್ಲರ ಪಾಲು ಎನ್ನುತ್ತ ಲಕ್ಷ್ಮೇಶ್ವರ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಹೊಸ ಬಟ್ಟೆ ತೊಟ್ಟುಕೊಂಡು ಹೆಂಗಳೆಯರು ಮತ್ತು ಮಕ್ಕಳು ಕಲ್ಲು ನಾಗಪ್ಪನಿಗೆ ಹಾಲೆರೆದು ನಾಗರ ಪಂಚಮಿ ಹಬ್ಬವನ್ನು ಸಡಗರ ಹಾಗೂ ಸಂಭ್ರದಿಂದ ಆಚರಿಸಿದರು. ಉತ್ತರ ಕರ್ನಾಟಕದ ಸಡಗರದ ಹಬ್ಬಗಳಲ್ಲಿ ನಾಗರ ಪಂಚಮಿ ಹಬ್ಬವೂ ಒಂದು. ಶ್ರಾವಣ ಮಾಸದ ಪ್ರಾರಂಭದಲ್ಲೇ ಬರುವ ನಾಗರ ಪಂಚಮಿ ಹಬ್ಬವು ಹೆಂಗಳೆಯರಿಗೆ ಅಚ್ಚು ಮೆಚ್ಚಿನ ಹಬ್ಬವಾಗಿದೆ. ಪಂಚಮಿ ಹಬ್ಬದಲ್ಲಿ ವಿಶಿಷ್ಟತೆ ಎಂದರೆ ವಿವಿಧ ತರಹದ ಉಂಡೆಗಳನ್ನು ಮಾಡುವುದು. ಗುಳ್ಳಡಕಿ ಉಂಡೆ, ಶೇಂಗಾ ಉಂಡೆ, ಎಳ್ಳು ಉಂಡೆ, ಚುರುಮರಿ ಉಂಡೆ, ಗುಳಗಿ ಉಂಡೆ, ತಂಬಿಟ್ಟು, ಅಳ್ಳಿಟ್ಟು ಮಾಡುವುದೇ ವಿಶೇಷವಾಗಿದೆ. ಈ ಎಲ್ಲ ಭಕ್ಷ್ಯಗಳನ್ನು ನಾಗಪ್ಪನಿಗೆ ಹಾಲೆರೆದು ನೈವೇದ್ಯ ಮಾಡಿ ಎಲ್ಲರೂ ಸೇರಿ ಸವಿಯುತ್ತಾರೆ. ಪಂಚಮಿ ಹಬ್ಬದ ಇನ್ನೊಂದು ವಿಶಿಷ್ಟತೆ ಎಂದರೆ ಜೋಕಾಲಿಯಾಡುವುದು. ಗ್ರಾಮಾಂತರ ಪ್ರದೇಶದಲ್ಲಿ ಮನೆ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಜೋಕಾಲಿ ಕಟ್ಟುತ್ತಾರೆ. ಗಂಡು ಮಕ್ಕಳು ದೊಡ್ಡ ಗಿಡಗಳಲ್ಲಿ ಜೋಕಾಲಿಯನ್ನು ಕಟ್ಟಿ ಆಡುತ್ತಾರೆ. ಹೀಗೆ ಉತ್ತರ ಕರ್ನಾಟಕದ ಜನರಿಗೆ ನಾಗರ ಪಂಚಮಿ ಎಂದರೆ ಎಲ್ಲಿಲ್ಲದ ಸಡಗರ ಕಂಡು ಬರುತ್ತದೆ.
ರೋಣ ವರದಿ: ರೋಣ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಭಾನುವಾರ ಸಾರ್ವಜನಿಕರು ಸಂಭ್ರಮದಿಂದ ಪಂಚಮಿ ಹಬ್ಬ ಆಚರಿಸಿದರು. ಪಟ್ಟಣದ ಶಿವಪೇಟೆ ಬಡಾವಣೆಯ ಯುವಕರು ವಿಶೇಷವಾದ ಜೋಕಾಲಿಯನ್ನು ಕಟ್ಟಿ ನಲಿದರು. ಇನ್ನು ಗ್ರಾಮೀಣ ಭಾಗದಲ್ಲಿನ ಯುವಕರು ದೊಡ್ಡ ದೊಡ್ಡ ಗಿಡಕ್ಕೆ ಜೋಕಾಲಿಗಳನ್ನು ಕಟ್ಟಿ, ಪರಸ್ಪರ ಬಾಜಿ ಕಟ್ಟುವ ಮೂಲಕ ಜೋಕಾಲಿ ಆಡುವ ದೃಶ್ಯ ಸಾಮಾನ್ಯವಾಗಿತ್ತು. ಬಹುತೇಕ ಕೃಷಿಕರು ಇಂದು ಹೊಲಗಳಿಗೆ ತೆರಳದೇ ಮನೆಯಲ್ಲಿಯೇ ಇದ್ದು ಕುಟುಂಬ ಸದಸ್ಯರೊಂದಿಗೆ ಹಬ್ಬ ಆಚರಣೆ ಮಾಡಿದರು.
ಗಜೇಂದ್ರಗಡದಲ್ಲಿ ಆಚರಣೆ: ಗಜೇಂದ್ರಗಡ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿಯೂ ಬರದ ನಡುವೆಯೇ ಸಾರ್ವಜನಿಕರು ಪಂಚಮಿ ಹಬ್ಬವನ್ನು ಆಚರಿಸಿದರು. ಮಹಿಳೆಯರು ಮಕ್ಕಳು ಹೊಸ ಹೊಸ ಬಟ್ಟೆಗಳನ್ನು ಧರಿಸಿ ನಾಗದೇವರಿಗೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥಗಳಿಗಾಗಿ ದೇವರಲ್ಲಿ ಮೊರೆ ಇಟ್ಟರು. ಇನ್ನು ಮದುವೆಯಾಗುವ ಯುವತಿಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಹರಕೆ ಸಲ್ಲಿಸುವುದು ನಾಗರ ಪಂಚಮಿಯ ವಿಶೇಷವಾಗಿದ್ದು, ಎಲ್ಲರೂ ಸಂತಸದಿಂದ ಹಬ್ಬ ಆಚರಿಸಿದರು.
ನರಗುಂದ ವರದಿ: ನರಗುಂದ ತಾಲೂಕಿನಲ್ಲಿಯೂ ಪಂಚಮಿ ಹಬ್ಬದ ಸಡಗರ ಮನೆ ಮಾಡಿತ್ತು. ಮಹಿಳೆಯರು ಬೆಳಗ್ಗೆಯಿಂದಲೇ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಹಾಲು ಹಾಗೂ ವಿವಿಧ ಬಗೆಯ ಸಿಹಿ ತಿನಿಸುಗಳನ್ನು ನೈವೇದ್ಯ ಮಾಡಿ ನಂತರ ಕುಟುಂಬ ಸದಸ್ಯರೆಲ್ಲ ಸೇರಿ ಭೋಜನ ಮಾಡಿದ ನಂತರ ಜೋಕಾಲಿ ಆಡುವ ದೃಶ್ಯ ಸಾಮಾನ್ಯವಾಗಿತ್ತು. ಅದರಲ್ಲಿಯೂ ಯುವಕರು ದೊಡ್ಡ ದೊಡ್ಡ ಗಿಡಗಳಿಗೆ ಜೋಕಾಲಿಯನ್ನು ಕಟ್ಟಿ, ಬಾಜಿ ಕಟ್ಟಿ ಜೋಕಾಲಿ ಜೀಕುವುದು ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿತ್ತು. ಇದರೊಟ್ಟಿಗೆ ಕೆಲವು ಗ್ರಾಮಗಳಲ್ಲಿ ವಿಶೇಷ ಸಾಹಸ ಕ್ರೀಡೆಗಳನ್ನು ಹಾಗೂ ಮನರಂಜನಾ ಆಟಗಳನ್ನು ಆಡುವ ಮೂಲಕ ಹಬ್ಬ ಆಚರಿಸಿದರು.
ಮುಂಡರಗಿ, ಶಿರಹಟ್ಟಿಯಲ್ಲಿ ಆಚರಣೆ: ನಾಗರ ಪಂಚಮಿ ಅಂಗವಾಗಿ ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನಲ್ಲಿಯೂ ಸಡಗರದ ವಾತಾವರಣ ನಿರ್ಮಾಣವಾಗಿತ್ತು. ಮಹಿಳೆಯರು ಮಕ್ಕಳು ಹಬ್ಬದ ಆಚರಣೆಯಲ್ಲಿ ಮಗ್ನರಾಗಿದ್ದರೆ, ಯುವಕರು, ನಿಂಬೆ ಹಣ್ಣು ತೂರುವುದು, ಕೋಲುಗಳ ಮೂಲಕ ಅಳತೆ ಆಟ, ಸೇರಿದಂತೆ ಹಲವಾರು ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದರು. ಮನೆಯ ಜನರೆಲ್ಲಾ ಸೇರಿ ಸಿಹಿ ಊಟವನ್ನು ಮಾಡಿ ನಂತರ ಆಟಗಳಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಜಿಲ್ಲೆಯಾದ್ಯಂತ ಪಾರಂಪರಿಕ ಹಾಗೂ ವೈಜ್ಞಾನಿಕ ಹೀಗೆ ಎರಡೂ ವಿಧಗಳಲ್ಲಿ ಭಾನುವಾರ ಪಂಚಮಿ ಆಚರಿಸಿದ್ದು ವಿಶೇಷವಾಗಿತ್ತು.