ಸಂಘದ ಸದಸ್ಯರು ಕ್ರಿಯಾಶೀಲರಾಗಬೇಕು
ಕನ್ನಡಪ್ರಭ ವಾರ್ತೆ, ಗದಗ, ಆ. 12
ಗದಗ ಜಿಲ್ಲಾ ನಿವೃತ್ತ ಪೌರಸೇವಾ ನೌಕರರ ಸಂಘವು ಪ್ರಗತಿಯೊಂದಿಗೆ ಮುನ್ನಡೆದಿದ್ದು, ಇನ್ನೂ ಹಲವಾರು ಕಾರ್ಯಚಟುವಟಿಕೆಗಳು, ಯೋಜನೆಗಳು ಅನುಷ್ಠಾನಗೊಳ್ಳಲು ಸಂಘದ ಸರ್ವ ಸದಸ್ಯರು ಕ್ರಿಯಾಶೀಲರಾಗಿ ಕಾರ್ಯ ಮಾಡಬೇಕಿದೆ ಎಂದು ಸಂಘದ ಕಾರ್ಯದರ್ಶಿ ಎಂ.ವಿ. ಹೂಲಿ ಅಭಿಪ್ರಾಯಪಟ್ಟರು.
ಅವರು ಶನಿವಾರ ಗದಗ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆದ ಗದಗ ಜಿಲ್ಲಾ ನಿವೃತ್ತ ಪೌರಸೇವಾ ನೌಕರರ ಸಂಘದ ಚತುರ್ಥ ವಾರ್ಷಿಕ ಸರ್ವಸಾಧಾರಣ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. 3 ವರ್ಷದ ಹಿಂದೆ 3 ಜನ ಸದಸ್ಯರೊಂದಿಗೆ ಆರಂಭಗೊಂಡಿದ್ದ ಸಂಘವು 75 ಆಜೀವ ಸದಸ್ಯರನ್ನು ಮತ್ತು 165 ವಾರ್ಷಿಕ ಸದಸ್ಯರನ್ನು ಹೊಂದಿದ್ದು, ಸಂಘವು ತನ್ನ ಇತಿಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಒಂದು ಸಂಘ ಸದೃಢವಾಗಿ ಬಲಗೊಳ್ಳಲು ಸಂಘಕ್ಕೆ ಆಜೀವ ಸದಸ್ಯತ್ವ ಹಾಗೂ ಸದಸ್ಯತ್ವ ಪಡೆಯುವ ಮೂಲಕ ಒಗ್ಗಟ್ಟಿನಿಂದ ಇದ್ದರೆ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಶಕ್ತಿ ಬರುತ್ತದೆ ಎಂದರು.
ಸಂಘದ ಅಧ್ಯಕ್ಷ ಬಿ.ಎನ್. ಸಿಂಗಾಡಿ ಮಾತನಾಡಿ, ಸಂಘವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸ್ವಂತ ಕಟ್ಟಡದ ಅವಶ್ಯಕತೆ ಇದೆ.
ಸೂಕ್ತ ನಿವೇಶನಕ್ಕಾಗಿ ಗದಗ ನಗರಸಭೆಗೆ ಈಗಾಗಲೇ ವಿನಂತಿಸಲಾಗಿದ್ದು, ಇದಕ್ಕೆ ಶಾಸಕರನ್ನು ಮತ್ತು ಸಂಸದರನ್ನು ಭೇಟಿಯಾಗಿ ಮನವಿ ಮಾಡಿಕೊಳ್ಳಲಾಗುವುದು ಎಂದರು. ಅತಿಥಿಯಾಗಿ ಆಗಮಿಸಿದ್ದ ನೌಕರರ ಮುಖಂಡ ಕೆ.ಎಚ್. ರೆಡ್ಡಿ ಪೌರಸೇವಾ ನೌಕರರ ಸಂಘಟನೆಯನ್ನು ಬಲಪಡಿಸುವ ಕುರಿತು ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜೆ.ಟಿ. ಚೌಧರಿ ಮಾತನಾಡಿ, ಸಂಘವನ್ನು ಇನ್ನಷ್ಟು ಬಲಪಡಿಸಲು ಎಲ್ಲರೂ ಶ್ರಮಿಸಬೇಕು, ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳನ್ನು ಪಡೆಯಲು ಸಂಘಟಿಕರಾಗುವುದು ಅವಶ್ಯವಿದೆ, ನಿವೃತ್ತ ನೌಕರರ ಅನೇಕ ಬೇಡಿಕೆಗಳು ಸರ್ಕಾರದ ಮಂಜೂರಾತಿಯ ಹಂತದಲ್ಲಿದ್ದು, ಅವುಗಳ ಈಡೇರಿಕೆಗೆ ಸಂಘಟನೆ ಅವಶ್ಯ ಎಂದರು. ಖಜಾಂಚಿ ಉಳವೇಶ ಅಂಗಡಿ ಹಾಗೂ ಸಿ.ವಿ. ಸಂಕದಾಳ ವಾರ್ಷಿಕ ವರದಿ, ಆಯವ್ಯಯ ಪತ್ರಿಕೆ ಓದಿದರು. ಎ.ಎ. ಮುಲ್ಲಾ, ಎಸ್.ಬಿ. ಮಲ್ಲಾಪುರ ಮುಂತಾದವರು ಉಪಸ್ಥಿತರಿದ್ದರು. ಡಿ.ಜಿ. ಮೋಗಜಿ ಪ್ರಾರ್ಥಿಸಿದರು. ಕಾರ್ಯದರ್ಶಿ ಎಂ.ವಿ.ಹೂಲಿ ಸ್ವಾಗತಿಸಿ, ನಿರೂಪಿಸಿದರು. ಡಿ.ಜಿ.ಮೋಗಜಿ ವಂದಿಸಿದರು.