ಅಧ್ಯಾತ್ಮ ಚಿಂತನೆಯಿಂದ ಸಮಾಜ ತಿದ್ದಲು ಸಾಧ್ಯ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಆ. 13
ಅಧ್ಯಾತ್ಮ ಚಿಂತನೆ ಮೂಲಕ ಸಮಾಜದ ಅಂಕು-ಡೊಂಕು ತಿದ್ದಿ ಮನುಕುಲದ ಒಳಿತಿಗೆ ಶ್ರಮಿಸಿದ ನಿರಂಜನ ಪ್ರಭುಗಳ ತತ್ವಾದರ್ಶಗಳು ಸರ್ವಕಾಲಿಕ ಎಂದು ಶೇಗುಣಸಿ ಪೀಠದ ಮಹಾಂತ ದೇವರು ಹೇಳಿದರು.
ಅವರು ಸ್ಥಳೀಯ ಮೈಸೂರು ಮಠದಲ್ಲಿ ಗಜೇಂದ್ರಗಡ-ಉಣಚಗೇರಿ ವೀರಶೈವ ಸಮಾಜ ವತಿಯಿಂದ ಸೋಮವಾರ ಸಂಜೆ ಶ್ರಾವಣ ಮಾಸ ಪ್ರಯುಕ್ತ ನಡೆಯುವ ಪ್ರವಚನಕ್ಕೆ ಚಾಲನೆ ನೀಡಿ ಮಾತನಾಡಿದರು. ಬಸವಾದಿ ಶರಣರು ತಮ್ಮ ಸ್ವಾರ್ಥ ಹಿತಾಸಕ್ತಿ ತ್ಯಾಗ ಮಾಡಿ ಆಧ್ಯಾತ್ಮಿಕ ತಳಹದಿ ಮೂಲಕ ಸಮಾಜದಲ್ಲಿನ ಕಲ್ಮಷ ತೊಳೆದು ವೈಚಾರಿಕತೆಯ ಬದುಕಿಗೆ ದಾರಿ ದೀಪವಾಗಿದ್ದಾರೆ ಎಂದರು. ಸಾನ್ನಿಧ್ಯ ವಹಿಸಿದ್ದ ಮೈಸೂರು ಸಂಸ್ಥಾನ ಮಠದ ವಿಜಯ ಮಹಾಂತ ಸ್ವಾಮೀಜಿ ಮಾತನಾಡಿದರು.
ಸಮಾಜ ಅಧ್ಯಕ್ಷ ಬಿ.ಎಂ. ಸಜ್ಜನ, ಪುರಸಭೆ ಸದಸ್ಯ ಶರಣಪ್ಪ ರೇವಡಿ, ಪ್ರಭು ಚವಡಿ, ವೀರೇಶ ನಂದಿಹಾಳ, ಮಲ್ಲಿಕಾರ್ಜುನ ಹಿರೇಮನಿ, ಅಶೋಕ ಹೊನವಾಡ, ಸಂತೋಶ ಸಂಕನೂರ, ವೀರೇಶ ನಿಡಶೇಶಿ, ಮಂಜುನಾಥ ಗವಾಯಿ, ಸಿದ್ದಲಿಂಗ ಗವಾಯಿ, ಜಗದೀಶ ದುಗ್ದಿ, ಸಿದ್ದಪ್ಪ ಮಳಗಿ ಇದ್ದರು.