ಕಾಂಗ್ರೆಸ್ನಲ್ಲಿ 3 ಬಣಗಳಿವೆ: ಕಾರಜೋಳ
ಗದಗ: ಅನ್ಯ ಪಕ್ಷಗಳ ಬಗ್ಗೆ ಕಾಂಗ್ರೆಸ್ನವರು ಮಾತನಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿಯೇ ಇಂದು 3 ಬಣಗಳಿವೆ. ಅವುಗಳನ್ನು ಸಮಾಧಾನಪಡಿಸುವುದೇ ಅವರ ಹೈಕಮಾಂಡ್ಗೆ ಸವಾಲಾಗಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಲೇವಡಿ ಮಾಡಿದರು.
ಅವರು ಮಂಗಳವಾರ ರಾತ್ರಿ ಗದಗ ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ವಿಧಾನ ಪರಿಷತ್ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ಅವರದೊಂದು ಬಣ, ಶಾಮನೂರು ಶಿವಶಂಕರಪ್ಪ ಅವರದೊಂದು ಬಣ, ಪರಮೇಶ್ವರ ಅವರೊಂದು ಬಣ. ಹಾಗಾಗಿ ಅವರನ್ನು ಸಂತೈಸುವುದರಲ್ಲಿಯೇ ಕಾಲ ಹರಣವನ್ನು ಮಾಡುತ್ತಿದ್ದು, ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಇದರಿಂದಾಗಿ ಸಿಎಂ ಸಿದ್ದರಾಮಯ್ಯ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನ ಅವರ ಪಕ್ಷದವರೇ ಹೇಳುತ್ತಿದ್ದಾರೆ. ಬಡವರಿಗೆ ಇವರು ಅಕ್ಕಿ ಕೊಡುವ ವಿಷಯದಲ್ಲಿ ಇಂದು ಸಾಕಷ್ಟು ಪ್ರಚಾರ ಪಡೆಯುತ್ತಿದ್ದಾರೆ. ಇದು ಈ ಹಿಂದೆ ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ ಸೇರಿದಂತೆ ಕಾಂಗ್ರೆಸ್ಸೇತರ ನಾಯಕರು ಮಾಡಿದ ಕೆಲಸ ಎಂದರು.
ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಸ್ಲೀಪಿಂಗ್ ಸ್ಥಿತಿಯಲ್ಲಿದೆ. ಪ್ರತಿಯೊಂದು ಯೋಜನೆಗಳು ಕೇವಲ ಘೋಷಣೆಯಲ್ಲಿಯೇ ಉಳಿದಿವೆ. ಯಾವೊಂದು ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಹಲವಾರು ಯೋಜನೆಗಳನ್ನು ಸ್ಥಗಿತಗೊಳಿಸಿದ್ದೇ ಇವರ ಸಾಧನೆ ಎಂದರು.
ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ನಮ್ಮಲ್ಲಿ ಉಂಟಾದ ಗೊಂದಲದಿಂದ ಮತಗಳು ವಿಭಜನೆಯಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸೇತರರು ಒಟ್ಟಾಗಿ ಹೋರಾಟ ಮಾಡುತ್ತಿದ್ದು, ಇದರಿಂದ ರಾಜ್ಯದಲ್ಲಿ ಹೊಸ ರಾಜಕೀಯ ಪರ್ವ ಆರಂಭಗೊಂಡಂತಾಗಿದೆ ಎಂದರು.
ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.