ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮತ್ತೆ ರೈತ ಬಂಡಾಯ?

Lingaraj Badiger
Updated On : 14 Aug 2013, 11:40 am

ನರಗುಂದ: 80ರ ದಶಕದಲ್ಲಿ ರಾಜ್ಯದ ರೈತರಲ್ಲಿ ಒಗ್ಗಟ್ಟು ಮೂಡಿ, ದೊಡ್ಡ ಮಟ್ಟದ ರೈತ ಚಳವಳಿಗೆ ಕಾರಣವಾಗಿದ್ದ ನರಗುಂದ ಭಾಗದ ರೈತರು ಮತ್ತೆ ನೀರಾವರಿ ವಿಷಯವಾಗಿಯೇ ಆ. 14ರಂದು 4 ಜಿಲ್ಲೆಗಳ 9 ತಾಲೂಕುಗಳ ವ್ಯಾಪ್ತಿಯಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ.
ಇನ್ನೊಬ್ಬ ರೈತನಿಗಾಗಿ, ನಾನು ಒಬ್ಬ ರೈತನಾಗಿ ಹೋರಾಟಕ್ಕಿಳಿಯಬೇಕು ಎನ್ನುವ ಮನೋಭಾವನೆ ರೈತರಲ್ಲಿ ಹಿಂದಿನಂತೆ ಮೂಡುತ್ತದೆಯೇ ಎನ್ನುವ ಬಲವಾದ ಸಂಶಯ ಎಲ್ಲರಲ್ಲಿ ಕಾಡುತ್ತಿದೆ.
ಹೋರಾಟ ಹಿನ್ನೆಲೆ: 1980ರ ಜುಲೈ 21ರಂದು ಆಗಿನ ಸಿಎಂ ಗುಂಡೂರಾವ್ ಸರ್ಕಾರವು ಈ ಭಾಗದ ಮಲಪ್ರಭಾ ಜಲಾಶಯ ಮೂಲಕ ನೀರು ಬಳಕೆ ಮಾಡುವ ರೈತರು ಜಮೀನುಗಳ ಮೇಲೆ ನೀರಿನ ಕರ ತುಂಬಬೇಕೆಂದು ಹೇಳಿದಾಗ ಅದಕ್ಕೆ ರೈತರು ವಿರೋಧಿಸಿದ್ದರು. ಆದರೆ, ಸರ್ಕಾರ ರೈತರ ಪಹಣಿ ಪತ್ರದಲ್ಲಿ ಸರ್ಕಾರವೆಂದು ನಮೂದು ಮಾಡಿದ್ದರಿಂದ ಬ್ಯಾಂಕ್‌ಗಳಲ್ಲಿ ರೈತರಿಗೆ ಯಾವುದೇ ರೀತಿಯ ಸೌಲಭ್ಯಗಳು ಸಿಗಲಿಲ್ಲ. ಮುಂದೆ ಇದಕ್ಕೆ ರೈತರು ಆಗಿನ ಸರ್ಕಾರ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ಹೋರಾಟ ಮಾಡಿದರು. ಹೋರಾಟ ಹಿಂಸಾರೂಪಕ್ಕೆ ತಿರುಗಿ ರೈತರ ಮೇಲೆ ಗುಂಡು ಹಾರಿಸಿದ್ದರಿಂದ ರೈತರು ರೊಚ್ಚಿಗೆದ್ದು ಸರ್ಕಾರಿ ಕಚೇರಿಗೆ ಬೆಂಕಿ ಹಚ್ಚಿದರು. ಇದರಲ್ಲಿ ನರಗುಂದ, ನವಲಗುಂದ ತಾಲೂಕಿನ ರೈತರು ಪೊಲೀಸರ ಗುಂಡಿಗೆ ಬಲಿಯಾದರು. ಹೀಗಾಗಿ ದೇಶದಲ್ಲಿ ಪ್ರಥಮ ಬಾರಿಗೆ ರೈತ ಸಮುದಾಯವನ್ನು ಒಗ್ಗೂಡಿಸಿದ ಕೀರ್ತಿ ನರಗುಂದ ರೈತರಿಗಿದೆ.
ಬಂದ್ ಯಶಸ್ವಿಯಾದೀತೆ?: ಜುಲೈ 21ರ ರೈತ ಹುತಾತ್ಮ ದಿನದಂದು, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರು ರೈತನ ವೀರಗಲ್ಲಿಗೆ ಮಾಲಾರ್ಪಣೆ ಮಾಡುವ ವೇಳೆಯಲ್ಲಿ ರೈತರು 'ನೀವು ನಿಮ್ಮ ದಕ್ಷಿಣ ಕರ್ನಾಟಕ ಭಾಗದ ರೈತರ ಸಮಸ್ಯೆಗಳ ಹೋರಾಟಕ್ಕೆ ಮಾತ್ರ ಸೀಮಿತವಾಗಿದ್ದೀರಿ, ಉತ್ತರ ಕರ್ನಾಟಕದಲ್ಲಿ ನೂರಾರು ನೀರಾವರಿ ಸಮಸ್ಯೆಗಳಿದ್ದರೂ ಲಕ್ಷ್ಯವಹಿಸುವುದಿಲ್ಲ' ಎಂದು ಮಾಲಾರ್ಪಣೆಗೆ ಅಡ್ಡಿಪಡಿಸಿದ್ದರು.
ಅದಕ್ಕೆ ಅಂದು ಪ್ರತಿಕ್ರಿಯಿಸಿದ ಕೋಡಿಹಳ್ಳಿ ಈ ಭಾಗದ ಪ್ರಮುಖ ಬೇಡಿಕೆಯಾದ ಕಳಸಾ-ಬಂಡೂರಿ ಯೋಜನೆ ವಿಳಂಬವಾಗಿರುವುದನ್ನು ಖಂಡಿಸಿ ಬೆಳಗಾವಿ ಜಿಲ್ಲೆಯ ರಾಮದುರ್ಗ, ಬೈಲಹೊಂಗಲ, ಗೋಕಾಕ, ಧಾರವಾಡ ಜಿಲ್ಲೆಯ ನವಲಗುಂದ, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ ಜಿಲ್ಲೆಯ ಬದಾಮಿ ಹಾಗೂ ಗದಗ ಜಿಲ್ಲೆಯ ನರಗುಂದ, ರೋಣ ತಾಲೂಕುಗಳಲ್ಲಿ ಆ. 14ರಂದು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು. ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ ರೈತರೊಟ್ಟಿಗೆ ಬೆಂಗಳೂರು ವಿಧಾನಸಭೆ ಮುಂದೆ ಹಗಲು ರಾತ್ರಿ ಧರಣಿ ನಡೆಸಲಾಗುವುದು ಎಂದು ಹೇಳಿದ್ದರು. ಇದಕ್ಕೆ ಎಲ್ಲರೂ ಪಕ್ಷಭೇದ ಮರೆತು ಒಪ್ಪಿಗೆ ನೀಡಿದ್ದಾರೆ. ಇಂದು ಹಲವಾರು ರೈತ ಮುಖಂಡರು, ರೈತರು ತಮ್ಮ ತಮ್ಮ ವೈಯಕ್ತಿಕ ಭವಿಷ್ಯಕ್ಕಾಗಿ ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಕಳಸಾ-ಬಂಡೂರಿಯಂತಹ ಯೋಜನೆ ಸಮಗ್ರವಾಗಿ ಜಾರಿಯಾಗಬೇಕಾದಲ್ಲಿ ಒಬ್ಬರ ಹೋರಾಟದಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಹಂಚಿ ಹೋಗಿರುವ ಎಲ್ಲ ರೈತ ಪರ ಚಿಂತನೆಯನ್ನು ಹೊಂದಿರುವ ನಾಯಕರು ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದೆ. ಅವರ ಪಕ್ಷ ಇಲ್ಲಿ ಮುಖ್ಯವಾಗುವುದಿಲ್ಲ. ರೈತರ ಹಿತ ಮುಖ್ಯವಾಗಿಟ್ಟುಕೊಂಡು ಎಲ್ಲ ಪಕ್ಷಗಳಲ್ಲಿರುವ ರೈತ ಮುಖಂಡರು ಹೋರಾಟಕ್ಕೆ ಮುಂದಾದಲ್ಲಿ ಖಂಡಿತ ಯಶಸ್ಸು ಸಿಗಲಿದೆ ಎನ್ನುವುದು ಬಹುತೇಕ ಹಿರಿಯ ರೈತರ ಅಭಿಪ್ರಾಯವಾಗಿದೆ.

ಇಂದು ಬೃಹತ್ ಪ್ರತಿಭಟನೆ
ಕಳಸಾ-ಬಂಡೂರಿ ಯೋಜನೆಯ ವಿಳಂಬ ಖಂಡಿಸಿ ಬೆಳಗಾವಿ ಜಿಲ್ಲೆಯ ರಾಮದುರ್ಗ, ಬೈಲಹೊಂಗಲ, ಗೋಕಾಕ, ಧಾರವಾಡ ಜಿಲ್ಲೆಯ ನವಲಗುಂದ, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ ಜಿಲ್ಲೆಯ ಬದಾಮಿ ಹಾಗೂ ಗದಗ ಜಿಲ್ಲೆಯ ನರಗುಂದ, ರೋಣ ತಾಲೂಕುಗಳಲ್ಲಿ ರೈತರು ಆ. 14ರಂದು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಬೆಂಗಳೂರು ವಿಧಾನಸಭೆ ಮುಂದೆ ಹಗಲು ರಾತ್ರಿ ಧರಣಿ ನಡೆಸಲು ನಿರ್ಧರಿಸಿದ್ದಾರೆ.

ರೈತರು, ಶ್ರೀಗಳ ಬೆಂಬಲ
ಈ ಹೋರಾಟವನ್ನು ರೈತ ಸಂಘ ಹಾಗೂ ಕಳಸಾ-ಬಂಡೂರಿ ಹೋರಾಟ ಸಮಿತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದೇವೆ. ಇದಕ್ಕೆ 4 ಜಿಲ್ಲೆಗಳ ಮತ್ತು 9 ತಾಲೂಕಿನ ಎಲ್ಲ ರೈತರು, ಸಾರ್ವಜನಿಕರು ಮತ್ತು ಮಠಾಧೀಶರು ಬೆಂಬಲಿಸುವ ಭರವಸೆ ನನಗೆ ಇದೆ.
- ವಿಜಯ ಕುಲಕರ್ಣಿ,ಕಳಸಾ-ಬಂಡೂರಿ ಯುವ ಹೋರಾಟ ಸಮಿತಿ ಅಧ್ಯಕ್ಷ.
ನ್ಯಾಯಾಧೀಕರಣ ಅಗತ್ಯವಿಲ್ಲ
ಈ ಭಾಗದಲ್ಲಿ 15 ರಿಂದ 20 ವರ್ಷ ಕಾಲ ವಿಜಯ ಕುಲಕರ್ಣಿ ಅವರ ನೇತೃತ್ವದಲ್ಲಿ ಕಳಸಾ-ಬಂಡೂರಿ ಹೋರಾಟ ನಡೆದಿದೆ. ಮೇಲಾಗಿ ಈ ಯೋಜನೆಗೆ ನ್ಯಾಯಾಧಿಕರಣ ಅವಶ್ಯವಿರಲಿಲ್ಲ. ಇದಕ್ಕೆ ನಾವು ಇಂದು ಕೈ ಜೋಡಿಸಿ ಯೋಜನೆ ಪೂರ್ಣಗೊಳ್ಳವವರಿಗೂ ಹೋರಾಟ ನಡೆಸಲಾಗುವುದು.
- ಕೋಡಿಹಳ್ಳಿ ಚಂದ್ರಶೇಖರ,ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ
- ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement