ಮನಸ್ಸು ಪರಿಶುದ್ಧತೆಗೆ ಶಿವಾನುಭವ ಸಹಕಾರಿ: ಎಚ್ಕೆ
ಕನ್ನಡಪ್ರಭ ವಾರ್ತೆ, ಗದಗ, ಆ. 14
ಶ್ರೀಗಳ ಪ್ರವಚನ, ಧರ್ಮಚಿಂತನೆ, ಶಿವಾನುಭವಗಳು ಜರಗುತ್ತಿದ್ದು, ಇವುಗಳು ಜನರ ಮನಸ್ಸು ಪರಿಶುದ್ಧಗೊಳ್ಳಲು ಸಹಕಾರಿಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಬುಧವಾರ ನಗರದ ಹಾಲಕೇರಿಯ ಅನ್ನದಾನೀಶ್ವರ ಸಂಸ್ಥಾನಮಠ ಆನಂದಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಶತಮಾಸಿಕ ಶಿವಾನುಭವ ಸಂಪದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರಲ್ಲಿ ಧರ್ಮದ ಕುರಿತು ಜಾಗೃತಿ ಮೂಡಿಸುವ ಸದುದ್ದೇಶದಿಂದ ಸತತ ಶತಮಾನದ ವರೆಗೆ ಶ್ರೀಗಳ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿರುವ ಈ ಶಿವಾನುಭವ ಸಂಪದ ಕಾರ್ಯಕ್ರಮ ಇತರರಿಗೆ ಮಾದರಿ. ಮಠ, ಮಾನ್ಯಗಳು ಕೇವಲ ಪೂಜೆಗೆ ಸೀಮಿತವಾಗಿರದೇ ಜನರಲ್ಲಿನ ಅಧರ್ಮ, ಅಂಧಕಾರ, ಅಶಾಂತಿ ಹೊಡೆದೊಡಿಸಿ ಅವರಲ್ಲಿ ಧರ್ಮಜಾಗೃತಿ, ಮನಃ ಶಾಂತಿಯನ್ನೂ ದೊರೆಯುವಂತೆ ಮಾಡುವ ಇಂಥ ಶಿವಾನುಭವ ಸಂಪದಗಳು ಪ್ರತಿವಾರವೂ ಎಲ್ಲ ಮಠ, ಮಾನ್ಯಗಳಲ್ಲಿ ನಡೆಯುವಂತಾಗಬೇಕು. ಈ ಶಿವಾನುಭವದಲ್ಲಿ ಸಾಮಾಜಿಕ, ಶೈಕ್ಷಣಿಕ, ಅಧ್ಯಾತ್ಮಿಕ ವಿಷಯ ಚರ್ಚಿಸಲಾಗುತ್ತಿದೆ. ಇದರಿಂದಾಗಿ ಜನರಲ್ಲಿರುವ ಧರ್ಮದ, ಜನರ-ಜನರ ನಡುವೆ ಇರುವ ಉತ್ತಮ ಸಂಬಂಧ ಗಟ್ಟಿಗೊಳಿಸುವ ಕಾರ್ಯ ಮಾಡುತ್ತಿರುವ ಶ್ರೀಗಳ ಕಾರ್ಯ ಶ್ಲಾಘನೀಯ. ದೇಶವನ್ನು ರಕ್ಷಿಸುವ ಸದುದ್ದೇಶದಿಂದ ಉಡಿತುಂಬುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳುವಂತೆ ಕೋರಿದರು.
ಕನ್ನಡ ಸಂಸ್ಕೃತಿಗೆ ಆದ್ಯತೆ ನೀಡಿ: ಉಪನ್ಯಾಸಕರಾಗಿ ಆಗಮಿಸಿದ್ದ ಹೊಸಪೇಟೆಯ ವಿಜಯನಗರ ಕಾಲೇಜಿನ ಡಾ. ಮೃತ್ಯುಂಜಯ ರುಮಾಲೆ ಅವರು ಇಂದಿನ ಯುವಕರು-ಅಧ್ಯಾತ್ಮಿಕ ಕೊರತೆ ಕುರಿತು ಉಪನ್ಯಾಸ ನೀಡಿ, ಇಂದಿನ ಯುವಪೀಳಿಗೆಯಲ್ಲಿ ಅಧ್ಯಾತ್ಮಿಕತೆಯ ಅರಿವು ಕ್ಷೀಣಿಸುತ್ತಿರುವುದು ನೋವಿನ ಸಂಗತಿ. ಇದಕ್ಕೆ ಪ್ರಮುಖ ಕಾರಣವೇ ಇಂದಿನ ವೈಭವೀಕರಿಸಿದ ಜೀವನ ಶೈಲಿ. ಇಂದಿನ ಯುವಸಮೂಹ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಸಂಸ್ಕೃತಿ ಅವನತಿಯತ್ತ ಕಾಲಿಡುತ್ತಿದೆ. ಇನ್ನು ಕುಳಿತ ಸ್ಥಳದಲ್ಲಿಯೇ ಕ್ಷಣಮಾತ್ರದಲ್ಲಿ ದೇಶದಲ್ಲಾಗುವ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುವಂತಹ ಸಾಮರ್ಥ್ಯವನ್ನು ಇಂದಿನ ದಿನಗಳಲ್ಲಿ ವಿಜ್ಞಾನಿಗಳು ಕಂಡುಹಿಡಿದಿದ್ದಾರೆಯೇ ಹೊರತು ಮನುಷ್ಯನ ಅಂತರಾಳದಲ್ಲಿ ಅಡಗಿರುವ ಅಡಕವಾಗಿರುವ ನೋವಿಗೆ ಸೂಕ್ತ ಮಾರ್ಗದರ್ಶನ ಸಿಗದೇ ಈ ನೂವೆ ದೊಡ್ಡ ಸಮಸ್ಯೆಯಾಗಿ ಮಾರ್ಪಡುತ್ತಿದೆ. ಈ ಕನ್ನಡ ಸಂಸ್ಕೃತಿಗೆ ಆದ್ಯತೆ ನೀಡಬೇಕು ಎಂದರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಸಿ.ಎಸ್. ಮುತ್ತಿನಪೆಂಡಿಮಠ, ನಗರಸಭೆ ಸದಸ್ಯ ಸದಾನಂದ ಪಿಳ್ಳಿ, ವಾಸಣ್ಣ ಕುರಡಗಿ, ಪ್ರಾ. ಎಸ್.ವಿ. ಕಂಕನೂರ, ಹುಬ್ಬಳ್ಳಿ ಎಪಿಎಂಸಿ ಅಧ್ಯಕ್ಷ ದಾಸನೂರ ಮುಂತಾದವರು ಇದ್ದರು. ಸಾನ್ನಿಧ್ಯ ವಹಿಸಿದ್ದ ನಿಡಗುಂದಿಕೊಪ್ಪದ ಶಿವಬಸವ ಶ್ರೀಗಳು, ಹಾಲಕೇರಿಯ ಅಭಿನವ ಅನ್ನದಾನ ಶ್ರೀಗಳು ಹಾಗೂ ರೋಣದ ಗುಲಗಂಜಿ ಮಠದ ಗುರುಪಾದ ಶ್ರೀಗಳು ಮುಂತಾದವರು ಆಶೀರ್ವಚನ ನೀಡಿದರು. ಬಿ.ಎಫ್. ಚೇಗರಡ್ಡಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ, ಅಂದಾನೆಪ್ಪ ವಿಭೂತಿ ನಿರೂಪಿಸಿದರು. ಎಸ್.ವಿ. ಸಂಕನೂರ ವಂದಿಸಿದರು.