ಗಾಂಧಿ ಪ್ರತಿಮೆ ಅನಾವರಣಕ್ಕೆ ನೀತಿ ಸಂಹಿತೆ ಅಡ್ಡಿ
ಕನ್ನಡಪ್ರಭ ವಾರ್ತೆ, ರೋಣ, ಆ. 15
ರಾಷ್ಟ್ರಪಿತ ಮಹಾತ್ಮ ಗಾಂಧಿಯ ಪ್ರತಿಮೆಯನ್ನು ಪಟ್ಟಣದ ಮಿನಿ ವಿಧಾನಸೌದ ಎದುರು ಸ್ಥಾಪಿಸಿ ಸುಮಾರು 9 ತಿಂಗಳ ಗತಿಸುತ್ತಾ ಬಂದಿದ್ದು, ಇಂದಲ್ಲ ನಾಳೆ ಅನಾವರಣಗೊಳಿಸುವುದಾಗಿ ಹೇಳುತ್ತಾ, ಕಾಲಹರಣ ಮಾಡುತ್ತಾ ಬಂದಿದ್ದ ತಾಲೂಕು ಆಡಳಿತ ಈಗ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ನೆಪ ಹೇಳುತ್ತಿದೆ.
ಹೌದು, ರಾಷ್ಟ್ರಕ್ಕೆ ಬೆಳಕು ನೀಡಿದ ಮಹಾತ್ಮ ಗಾಂಧೀಜಿಯ ನೆನಪಿಗಾಗಿ ಪಟ್ಟಣದ ಸ್ವಾತಂತ್ರ್ಯ ಹೋರಾಟಗಾರರಾದ ಗುರುಪಾದಪ್ಪ ಸಂತೋಜಿ ಅವರು ಈ ಹಿಂದಿನ ಜಿಲ್ಲಾಧಿಕಾರಿ ಮತ್ತು ತಾಲೂಕು ದಂಡಾಧಿಕಾರಿ ಒಪ್ಪಿಗೆ ಪಡೆದು, ತಮ್ಮ ಸ್ವಂತ ಖರ್ಚಿನಿಂದ ಸುಮಾರು ರು. 4 ಲಕ್ಷ ವೆಚ್ಚದಲ್ಲಿ ಗಾಂಧೀಜಿ ಪ್ರತಿಮೆ ನಿರ್ಮಿಸಿದ್ದಾರೆ. ತಾಲೂಕು ಆಡಳಿತ ತನ್ನ ಸುಪರ್ದಿಗೆ ಪಡೆದು ಪ್ರತಿಮೆ ಅನಾವರಣಕ್ಕೆ ದಿನಾಂಕ ನಿಗದಿಪಡಿಸಲು 9 ತಿಂಗಳಿನಿಂದ ದುಂಬಾಲು ಬಿದ್ದರೂ ತಾಲೂಕು ಆಡಳಿತ ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ಅನಾವಶ್ಯಕ ನೆಪವೊಡ್ಡಿ ಮುಂದೂಡುತ್ತಾ ಬಂದಿದೆ.
ಆಗಸ್ಟ್ 15ರಂದು ಪ್ರತಿಮೆ ಅನಾವರಣಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ, ಈಗ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆಯ ನೆಪ ಹೇಳುತ್ತಿದೆ ಎಂದು ನೋವಿನಿಂದ ಹೇಳುತ್ತಾರೆ ಸ್ವಾತಂತ್ರ್ಯ ಹೋರಾಟಗಾರ ಪುತ್ರ ಕಳಕಪ್ಪ ಸಂತೋಜಿ.
ಪ್ರಶ್ನಾತೀತವಾದ ನೀತಿ ಸಂಹಿತೆ: ಸಂವಿಧಾನಿಕ ಕಾನೂನು, ನಿಯಮ, ನೀತಿ ಸಂಹಿತೆ ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ, ದೇಶಕ್ಕೆ ಮಹತ್ತರವಾದ ಕೊಡುಗೆ ನೀಡಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆ ಅನಾವರಣಗೊಳಿಸಲು ನೀತಿ ಸಂಹಿ ತೆ ಅಡ್ಡಿ ಬಂದಿರುವುದು ನಾನಾ ಸಂಶಯಕ್ಕೆ ಎಡೆಮಾಡಿದೆ. ಗಾಂಧೀಜಿ ಪ್ರತಿಮೆ ಅನಾವರಣಕ್ಕೆ ಯಾಕೇ ಅಡ್ಡಿ ಬರುತ್ತಿದೆ. ನೀತಿ ಸಂಹಿತೆ ಇಲ್ಲದ ಸಂದರ್ಭದಲ್ಲಿ ಅನಾವರಣ ಮಾಡಬಹುದಿತ್ತಲ್ಲ ಎಂಬ ಅನೇಕ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ತಾಲೂಕು ಆಡಳಿತ ತನ್ನ ಸುಪರ್ದಿಗೆ ಪಡೆದುಕೊಂಡಲ್ಲಿ ನಿತ್ಯ ಪೂಜೆ, ಮಾಲಾರ್ಪಣೆ, ರಕ್ಷಣೆಯ ಹೊಣೆ ಹೊರಬೇಕಾಗುವುದು. ಅನಾವಶ್ಯಕ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವುದು ಬೇಕಾಗಿಲ್ಲ ಎಂದು ತಾಲೂಕು ಆಡಳಿತ ಈ ರೀತಿ ನುಣುಚಿಕೊಳ್ಳುವ ತಂತ್ರ ಅನುಸರಿಸುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಸ್ವಾತಂತ್ರ್ಯ ಹೋರಾಟಗಾರರು ಇಂದಿಗೂ ಮಾದರಿ: ಕಟ್ಟಿಮನಿ
ಕನ್ನಡಪ್ರಭ ವಾರ್ತೆ, ಗದಗ, ಆ. 15
ದೇಶದ ಹಲವು ಮಹಾನ್ ನಾಯಕರು ದೇಶದ ಸ್ವಾತಂತ್ರ್ಯೋತ್ಸವಕ್ಕಾಗಿ ತಮ್ಮ ಪ್ರಾಣವನ್ನೇ ಬಲಿ ನೀಡಿದ್ದಾರೆ. ಅಂತಹ ಮಹಾನ್ ನಾಯಕರ ಆದರ್ಶಗಳು ಇಂದಿನ ಯುವ ಮಿತ್ರರಿಗೆ ಮಾದರಿ ಎಂದು ರಾಜೇಶ ಕಟ್ಟಿಮನಿ ಹೇಳಿದರು.
ಅವರು ಗುರುವಾರ ನಗರದ ರಾಜೀವಗಾಂಧಿ ನಗರದ ಪ್ರಜಾಪ್ರಭುತ್ವ ರಕ್ಷಣಾ ಸಮಿತಿ ಹಾಗೂ ಗಜಾನನ ಮಿತ್ರ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 67ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಎನ್. ಶಿವಶಿಂಪಿಗೇರ ಮಾತನಾಡಿ, ಎಲ್ಲ ಸಮಾಜದ ಹಿರಿಯರಲ್ಲಿ ಮಕ್ಕಳಿಗೆ ಸ್ವಾತಂತ್ರ್ಯೋತ್ಸವದ ಮಹತ್ವವನ್ನು ತಿಳಿಸಿಕೊಟ್ಟು ಪ್ರತಿಯೊಬ್ಬರು ಭಾರತ ದೇಶದ ಸೈನಿಕರಂತೆ ಶಿಸ್ತು ಮತ್ತು ಶಿಕ್ಷಣ ಕಲಿಸಲೇಬೇಕು ಎಂದರು.
ಶ್ರೀಕಾಂತ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಕೇಶ ಘೋರ್ಪಡೆ, ವಸಂತ ಕಣವಿ, ಬಸವರಾಜ ಬಂಡಿವಾಡಮಠ, ಬಸವರಾಜ ಬದಾಮಿ, ರುದ್ರೇಶ ಕಣವಿ, ಬಾಬು ಶಿವಶಿಂಪಗೇರ, ರಾಜು ಘೋರ್ಪಡೆ, ಪ್ರಕಾಶ ಭಜಂತ್ರಿ, ಮಲ್ಲೇಶ, ಮಂಜು ಅಗಸಿಮನಿ, ಕರೀಮಸಾಬ ಕಲೇಗಾರ, ವೀರಯ್ಯ ಕಾರಡಗಿಮಠ, ಸುರೇಶ ನಿದ್ರೆ, ಅಶೋಕ ನರಗುಂದ, ಸುಭಾಸ ಐಹೊಳೆ ಮುಂತಾದವರು ಇದ್ದರು. ಇಮಾಮಸಾಬ ಕಲೇಗಾರ ನಿರೂಪಿಸಿದರು. ವಾಸು ಹುಯಿಲಗೋಳ ವಂದಿಸಿದರು.
-ಪಿ.ಎಸ್. ಪಾಟೀಲ