ಜೈ ಭಾರತಾಂಬೆ
ಕನ್ನಡಪ್ರಭ ವಾರ್ತೆ, ಗದಗ, ಆ. 15
ಬಂದೂಕಿನ ಎದುರು ಬರಿಗೈಯಿಂದ ಹೋರಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿರುವ ನಮ್ಮೆಲ್ಲಾ ಹಿರಿಯರ ಸ್ಮರಣೆ ಸುತ್ಯಾರ್ಹ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ರಾಜ ಮನೆತನದಲ್ಲಿ ಹುಟ್ಟಿ ಸುಖ ಭೋಗಗಳನ್ನು ತ್ಯಾಗ ಮಾಡಿ ಜಗತ್ತಿಗೆ ಶಾಂತಿ ಸಂದೇಶ ನೀಡಿದ ಗೌತಮ ಬುದ್ಧ, ಮಹಾವೀರರ ಕೊಡುಗೆ ಅಪಾರವಾದದ್ದು, ಪರೋಪಕಾರವೇ ಪರಮಧರ್ಮ ಎಂದು ಸಾರಿದ ಸಂಸ್ಕೃತಿಯ ವಾರಸುದಾರರು ನಾವು, ಸ್ವಾತಂತ್ರ್ಯ ಕಾಲಕ್ಕೆ ಬಡರಾಷ್ಟ್ರ ಎಂಬ ಖ್ಯಾತಿ ಹೊಂದಿದ್ದ ನಮ್ಮ ದೇಶ ಇಂದು ಪ್ರಪಂಚದ ಬಲಿಷ್ಠ ರಾಷ್ಟ್ರಗಳಲ್ಲಿ ಮಂಚೂಣಿಯಲ್ಲಿದೆ. ವಿಶಿಷ್ಠ ದೇಶದ ಘನತೆ, ಗೌರವ, ಏಕತೆ ಕಾಪಾಡುವತ್ತ ಬಲಿಷ್ಠ ರಾಷ್ಟ್ರ ಕಟ್ಟುವ ಕೆಲಸಕ್ಕೆ ನಾವೆಲ್ಲಾ ಕಂಕಣ ಬದ್ಧರಾಗಿ ಕೆಲಸ ಮಾಡೋಣ. ತ್ಯಾಗದಿಂದ ಬಿಲಿದಾನದಿಂದ ಸ್ಫೂರ್ತಿ ಪಡೆದು ರಾಷ್ಟ್ರ ಕಟ್ಟುವ ಕೆಲಸವಾದಾಗ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.
ಧ್ವಜಾರೋಹಣ ಪೂರ್ವದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ವಿವಿಧ ಶಾಲಾ ಕಾಲೇಜುಗಳಿಂದ ಆಕರ್ಷಕ ಪಥ ಸಂಚಲನ ಜರುಗಿತು. ಸಚಿವ ಪಾಟೀಲ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಉಪಾಧ್ಯಕ್ಷ ರಮೇಶ ಮುಂದಿನಮನಿ, ವಿಪ ಸದಸ್ಯ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ಎಸ್.ಟಿ. ಅಂಜನ್‌ಕುಮಾರ್, ಜಿಪಂ ಸಿಇಒ ವೀರಣ್ಣ ತುರಮರಿ, ಎಸ್ಪಿ ಡಾ. ಎಸ್.ಡಿ. ಶರಣಪ್ಪ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿ.ಎಸ್. ಗಡ್ಡದೇವರಮಠ ಮುಂತಾದವರು ಹಾಜರಿದ್ದರು.
ಗಮನ ಸಳೆದ ಮಲ್ಲಕಂಬ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ರಾಮಗಿರಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಡೆಸಿಕೊಟ್ಟ ಮಲ್ಲಕಂಬ ಹಾಗೂ ರೂಫ್ ಮಲ್ಲಕಂಬ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರನ್ನು ಬೆರಗುಗೊಳಿಸಿತು. ಇನ್ನು ವಿವಿಧ ಶಾಲಾ ಮಕ್ಕಳಿಂದ ಜರುಗಿದ ಸಾಮೂಹಿಕ ನೃತ್ಯಗಳು ತಮ್ಮ ಹಲವು ವಿಶೇಷತೆಗಳ ಮೂಲಕವೇ ಗಮನ ಸೆಳೆದವು. ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಶ್ವಾನಗಳ ವಿಶೇಷ ಕವಾಯತು ಪ್ರದರ್ಶನದಲ್ಲಿ ಶ್ವಾನಗಳು ಹಲವಾರು ರೀತಿಯ ಚಾಕಚಕ್ಯತೆಗಳನ್ನು ಸಾದರಪಡಿಸಿದವು.