ಭಾರತ ಮಾತ್ರ ಅಹಿಂಸೆಯಿಂದ ಸ್ವಾತಂತ್ರ್ಯ ಪಡೆದಿದೆ
ಮುಂಡರಗಿ: ಭಾರತ ಮಾತ್ರ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಪಡೆದಿದೆ ಎಂದು ತಾಲೂಕು ದಂಢಾದಿಕಾರಿ ಎಸ್.ಆರ್. ಶಿರಕೋಳ ಹೇಳಿದರು.
ಅವರು ಗುರುವಾರ ಪಟ್ಟಣದ ಪುರಸಭೆ ಪಕ್ಕದಲ್ಲಿರುವ ಪೊಲೀಸ್ ಪರೇಡ್ ಮೈದಾನದಲ್ಲಿ 67ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಿ.ಮೋಹನ್ ಮಾತನಾಡಿದರು. ಪಿಎಸ್ಐ ನಡುಗಡ್ಡಿ ಇದ್ದರು. ನಂತರ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಪತ್ರಕರ್ತ ಗೋಣಿಬಸಪ್ಪ ಕೊರ್ಲಹಳ್ಳಿ, ಮಾಜಿ ಸೈನಿಕ ವೈ.ವೈ. ಹೂಲಿಗೇರಿ, ಸಾಮಾಜಿಕ ಕಾರ್ಯಕರ್ತ ಬಸವರಾಜ ನವಲಗುಂದ, ಸಾಹಿತಿ ಕೆ.ಕೆ. ಹೂಗಾರ, ಕೃಷಿಯಲ್ಲಿ ಸಾಧನೆ ಮಾಡಿದ ಗುಡದಪ್ಪ ಲಿಂಗಶೆಟ್ಟರ್ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಹಿರೇವಡ್ಡಟ್ಟಿ ಮೊರಾರ್ಜಿ ವಸತಿ ಶಾಲೆಯ ಹೊಳಲಮ್ಮ ಸಿದ್ದನಗೌಡರ ಅವರನ್ನು ಸನ್ಮಾನಿಸಲಾಯಿತು.
ಸ್ಥಳೀಯ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಂಜುನಾಥ ಭಜಂತ್ರಿ ಸಂಗಡಿಗರಿಂದ ಕರಾಟೆ ಪ್ರದರ್ಶನ, ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕಾರ್ಗಿಲ್ ಯೋಧರ ಸ್ಮರಣೆ ಹಾಗೂ ಜ. ಅನ್ನದಾನೀಶ್ವರ ಕಿರಿಯ ಎನ್ಸಿಸಿ ವಿದ್ಯಾರ್ಥಿಗಳಿಂದ ಉತ್ತರಾಖಂಡದಲ್ಲಿ ಸಂತ್ರಸ್ತರಿಗೆ ಸಹಾಯ ಮಾಡುವ ದೃಶ್ಯ ರೂಪಕಗಳು ಜರುಗಿದವು. ತಾಪಂ ಅಧ್ಯಕ್ಷೆ ತಾರಾಬಾಯಿ ಚವ್ಹಾಣ, ಉಪಾಧ್ಯಕ್ಷೆ ಅಕ್ಕಮಹಾದೇವಿ ಹಾರೋಗೇರಿ, ಪುರಸಭೆ ಸದಸ್ಯೆ ಶಾರದಾ ದೇಸಾಯಿ, ಪಂಚಾಯತ್ ರಾಜ್ ಅಭಿಯಂತರ ಕೆ.ಬಿ. ಗಂಜಿಹಾಳ, ಲೋಕೋಪಯೋಗಿ ಎಂಜಿನಿಯರ್ ಹುಬ್ಬಳ್ಳಿಮಠ, ಸಮಾಜ ಕಲ್ಯಾಣಾಧಿಕಾರಿ ಶಿವಶಂಕರೇಗೌಡ, ಎನ್.ಎಸ್. ಅರಕೇರಿ, ಡಾ. ಎಸ್.ವಿ. ತಿಗರಿಮಠ, ರಮೇಶ ಬಾಲೇಹೊಸೂರ, ಮುಖ್ಯಾಧಿಕಾರಿ ಆರ್.ಎಂ. ಪಾಟೀಲ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ಸ್ವಾಗತಿಸಿದರು. ಪ್ರೊ. ಸಿ.ಎಸ್. ಅರಸನಾಳ ನಿರೂಪಿಸಿದರು. ಡಾ. ನಿಂಗು ಸೊಲಗಿ ವಂದಿಸಿದರು.
--
ಇಂದು ಗುಡಿ ಉದ್ಘಾಟನೆ
ಲಕ್ಷ್ಮೇಶ್ವರ: ಪಟ್ಟಣದ ಪೇಟೆಬಣದಲ್ಲಿ ನಿರ್ಮಿಸಿರುವ ಶಿವಶರಣೆ ಅಕ್ಕಮಹಾದೇವಿಯ ದೇವಸ್ಥಾನದ ಉದ್ಘಾಟನೆ ಆ. 16ರ ಬೆಳಗ್ಗೆ 11ಕ್ಕೆ ಜರುಗಲಿದೆ. ಫಕ್ಕಿರಸಿದ್ಧರಾಮ ಶ್ರೀಗಳು ಹಾಗೂ ಹೂವಿನ ಶಿಗ್ಲಿಯ ಚೆನ್ನವೀರ ಶ್ರೀಗಳು ಸಾನ್ನಿಧ್ಯ ವಹಿಸುವರು. ವೈದ್ಯ ಬಾಬುರಾವ್ ಕುಲಕರ್ಣಿ ಹಾಗೂ ಮೈಸೂರಿನ ಪುರೋಹಿತ, ಬ್ರಮರಾಂಭ ಮಹೇಶ್ವರಿ ಉಪಸ್ಥಿತರಿರುವರು. ಮಾಜಿ ಶಾಸಕ ರಾಜಶೇಖರ ಸಿಂಧೂರ ಉದ್ಘಾಟಿಸುವರು. ಲಿಂಬಯ್ಯ ಶ್ರೀಗಳು ಅಧ್ಯಕ್ಷತೆ ವಹಿಸುವರು. ಸಂಸದ ಶಿವಕುಮಾರ ಉದಾಸಿ, ಶಾಸಕ ರಾಮಕೃಷ್ಣ ದೊಡ್ಡಮನಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಆಗಮಿಸುವರು.
ಅವಳಿ ನಗರಾದ್ಯಂತ ಮಳೆ
ಗದಗ: ಕೆಲವು ದಿನಗಳಿಂದ ಕಣ್ಮರೆಯಾಗಿದ್ದ ಮಳೆರಾಯ ಗುರುವಾರ ಗದಗ-ಬೆಟಗೇರಿ ಅವಳಿ ನಗರದಾದ್ಯಂತ 10 ನಿಮಿಷಕ್ಕೂ ಹೆಚ್ಚುಕಾಲ ಸುರಿದ ಮಳೆಯಿಂದಾಗಿ ಅವಳಿ ನಗರದಲ್ಲಿ ಜನರಲ್ಲಿ ಹರ್ಷವನ್ನುಂಟು ಮಾಡಿತು. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸ್ವಾತಂತ್ರ್ಯೋತ್ಸವ ಧ್ವಜಾ ರೋಹಣ ನೆರವೇರಿಸಿದ ಕೆಲವು ಗಂಟೆಗಳಲ್ಲಿ ಮಳೆರಾಯನ ಸಿಂಚನ ಭೂಮಿಗೆ ಬೀಳುತ್ತಿದ್ದಂತೆಯೇ ಜನರಲ್ಲಿ ಹರ್ಷವನ್ನುಂಟು ಮಾಡಿದೆ. ಗುರುವಾರ ರಾತ್ರಿ ಅವಳಿ ನಗರ ಸೇರಿದಂತೆ ಕೆಲವೆಡೆ ತೀವ್ರ ಮೋಡಕವಿದ ವಾತಾವರಣ ಹಾಗೂ ಗುಡುಗು ಮಿಂಚಿನ ವಾತಾವರಣ ಕಂಡುಬಂದಿದೆ.