ಇಂದು ಕಾರ್ಯಾಗಾರ
ಹೊಳೆಆಲೂರು: ಇಲ್ಲಿನ ಕಲ್ಮೇಶ್ವರ ವಿದ್ಯಾಪ್ರಸಾರಕ ಸಮಿತಿಯ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಮತ್ತು ಗದಗ ಜಿಲ್ಲಾ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಪರಿಷತ್ತು ಇವರ ಆಶ್ರಯದಲ್ಲಿ ಕನ್ನಡ ಭಾಷಾ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟನೆ ಮತ್ತು ವಿದ್ಯಾರ್ಥಿಗಳಿಗಾಗಿ ಬರವಣಿಗೆ ಕಲೆ ಕುರಿತ ಕಾರ್ಯಾಗಾರ ಕಾಲೇಜಿನ ರಜತ ಮಹೋತ್ಸವ ಭವನದಲ್ಲಿ ಆ. 17ರಂದು ಮಧ್ಯಾಹ್ನ 12.15ಕ್ಕೆ ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ ಉಪಾಧ್ಯಕ್ಷ ಎಂ.ಬಿ. ಕೊಳೇರಿ ಸಮಾರಂಭ ಉದ್ಘಾಟಿಸುವರು. ಪ್ರಾ. ಎಸ್.ಎಸ್. ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಶಿವಣ್ಣ ಕುರಿ, ಡಾ. ಸುಜಾತ ಬರದೂರ ಆಗಮಿಸಲಿದ್ದು, ಆರ್.ಎಲ್. ಪೊಲೀಸ್ಪಾಟೀಲ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಪ್ರೊ. ಎಸ್.ವಿ. ಅಂದಾನಶೆಟ್ರ ಉಪಸ್ಥಿತರಿರಲಿದ್ದಾರೆಂದು ಉಪಾಧ್ಯಕ್ಷ ಡಾ. ಪ್ರಭು ಗಂಜಿಹಾಳ, ಕಾರ್ಯದರ್ಶಿ ರಮೇಶ ಕಲ್ಲನಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರ
ಗದಗ: ರೋಟರಿ ಸಂಸ್ಥೆ ಗದಗ-ಬೆಟಗೇರಿ ಹಾಗೂ ಎಚ್ಸಿಜಿ ಹಾಸ್ಪಿಟಲ್ ಹುಬ್ಬಳ್ಳಿ ಇವುಗಳ ಆಶ್ರಯದಲ್ಲಿ ಆ. 17ರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಜಿಲ್ಲಾ ಕ್ರೀಡಾಂಗಣದ ಬಳಿಯ ರೋಟರಿ ಐಕೇರ್ ಸೆಂಟರ್ನಲ್ಲಿ ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಹುಬ್ಬಳ್ಳಿಯ ಎಚ್ಸಿಜಿ ಹಾಸ್ಟಿಟಲ್ನ ವೈದ್ಯ ಡಾ. ಪ್ರಸಾದ ಗುಣಾರಿ ಹಾಗೂ ತಂಡದವರು ಪಾಲ್ಗೊಳ್ಳಲಿದ್ದಾರೆ. ತಪಾಸಣೆಯಲ್ಲಿ ಆಯ್ಕೆಯಾದವರಿಗೆ ಹುಬ್ಬಳ್ಳಿ ಎಚ್ಸಿಜಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರದೀಪ ಉಗಲಾಟ, ಎಚ್ಸಿಜಿ ಹಾಸ್ಪಿಟಲ್ನ ಸಂಪರ್ಕಾಧಿಕಾರಿ ಗುರುರಾಜ ಜೋಶಿ ತಿಳಿಸಿದ್ದಾರೆ.
ಇಂದು ಪತ್ರಿಕೋದ್ಯಮ ಕುರಿತು ಉಪನ್ಯಾಸ
ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಾಪಂ ಆವರಣದಲ್ಲಿ ಆ.17ರ ಸಂಜೆ 6ಕ್ಕೆ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮ ಜರುಗಲಿದೆ. ವರದಿಗಾರ ಸಂಗಮೇಶ ಮೆಣಸಿನಕಾಯಿ ಇವರು ಸಾಹಿತ್ಯ ಮತ್ತು ಪತ್ರಿಕೋದ್ಯಮ ಕುರಿತು ಉಪನ್ಯಾಸ ನೀಡಲಿದ್ದಾರೆ. ಬಸವರಾಜ ದಂಡಿನ ಅವರು ಕಾವ್ಯವಾಚನ ಮಾಡಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಣ್ಣ ಕುರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಹಕಾರ ಸಂಘ ಚುನಾವಣೆ
ಗದಗ: ಜಿಲ್ಲೆಯಲ್ಲಿ 2013-14ರಿಂದ 2017-18ನೇ ಸಾಲಿಗೆ ಜರುಗುವ ಪ್ರಾಥಮಿಕ ಸಹಕಾರ ಸಂಘಗಳ ಚುನಾವಣೆ ನಿಮಿತ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಗೃಹ ನಿರ್ಮಾಣ ಸಹಕಾರ ಸಂಘಗಳು ಹಾಗೂ ವಿವಿಧೋದ್ದೇಶಗಳ ಸಹಕಾರ ಸಂಘಗಳಿಗೆ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ಆ. 24 ಕೊನೆ ದಿನವಾಗಿದೆ. ನಾಮಪತ್ರ ಪರಿಶೀಲನೆ ಆ. 25, ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನ, ಆ. 26 ವೇಳೆ ಮಧ್ಯಾಹ್ನ 3ರ ವರೆಗೆ, ಚುನಾವಣೆ ಸೆ.1ರಂದು ಇದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಇಂದು ಕುಂದುಕೊರತೆ ಸಭೆ
ಗದಗ: ಸಾರ್ವಜನಿಕ ಕುಂದುಕೊರತೆಗಳ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯವಾಗಿ ಸರ್ಕಾರದ ಆಹಾರ ಭದ್ರತೆ ಯೋಜನೆಯಡಿ ಸಾರ್ವಜನಿಕ ವಿತರಣಾ ಪದ್ಧತಿ, ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ ಹಾಗೂ ಮಧ್ಯಾಹ್ನದ ಬಿಸಿಯೂಟ ವಿಷಯಗಳ ಕುರಿತು ಸಭೆ ಆ.17ರ ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿಗಳು ಅಧ್ಯಕ್ಷತೆ ವಹಿಸಲಿದ್ದು, ಪ್ರತಿ ತಿಂಗಳ 1 ಮತ್ತು 3ನೇ ಶನಿವಾರರಂದು ದೂರು ಸ್ವೀಕರಿಸಿ ವಿಚಾರಣೆ ನಡೆಸಲಾಗುವುದು. ಕಾರಣ ಜಿಲ್ಲೆಯ ಸಾರ್ವಜನಿಕರು ಈ ದಿಸೆಯಲ್ಲಿ ಮೇಲ್ಕಾಣಿಸಿದ ಆಹಾರ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರುಗಳು ಇದ್ದಲ್ಲಿ ಜಿಲ್ಲಾಧಿಕಾರಿಗೆ ಸಲ್ಲಿಸಬಹುದಾಗಿದೆ.
ಕ್ಷೀರಭಾಗ್ಯ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಪ್ರಮುಖ
ಗಜೇಂದ್ರಗಡ: ಸರ್ಕಾರದ ಮಹತ್ವಾಕಾಂಕ್ಷಿಯ ಕ್ಷೀರಭಾಗ್ಯ ಯೋಜನೆ ಅನುಷ್ಠಾನಗೊಳ್ಳುವಲ್ಲಿ ಶಿಕ್ಷಕರ ಪಾತ್ರ ಪ್ರಾಮುಖ್ಯವಾಗಿದೆ. ಜತೆಗೆ ಮಕ್ಕಳು ಯೋಜನೆಯ ಲಾಭ ಪಡೆದು ಆರೋಗ್ಯವಂತರಾಗಿ ವಿದ್ಯೆ ಕಲಿಯಿರಿ ಎಂದು ಪುರಸಭೆ ಮಾಜಿ ಸದಸ್ಯ ಬಸವರಾಜ ಬಂಕದ ಹೇಳಿದರು.
ಸ್ಥಳೀಯ ಹಿಂದುಳಿದ ಭೋವಿ ಸಮುದಾಯ ಬಡಾವಣೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಹಾಲು ವಿತರಿಸಿ ಮಾತನಾಡಿದರು. ಸರ್ಕಾರದ ಯೋಜನೆಗಳನ್ನು ಶಿಕ್ಷಕರು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಮಕ್ಕಳಲ್ಲಿನ ಅನಕ್ಷರತೆ ಜತೆಗೆ ಅಪೌಷ್ಟಿಕತೆ ತೊಲಗಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕ ಸಮೂಹದ ಮೇಲಿರುವ ಜವಾಬ್ದಾರಿಗೆ ಚ್ಯುತಿ ಬಾರದಂತೆ ಸೇವಾ ಮನೋಭಾವನೆಯಿಂದ ಮಕ್ಕಳಲ್ಲಿ ಜ್ಞಾನದ ಬೀಜ ಬಿತ್ತಿ ಎಂದರು. ಅಂಗನವಾಡಿ ಕೇಂದ್ರದ ಎಸ್.ಎಸ್. ಗುರಿಕಾರ, ಶರಣಮ್ಮ ಕರಾಬದಿನ್ನಿ ಇದ್ದರು.