ಉದ್ಯೋಗ ಖಾತ್ರಿ ಲೆಕ್ಕ ಕೊಡಿ ಶೆಟ್ರೆ: ಎಚ್.ಕೆ. ಪಾಟೀಲ್
ಕನ್ನಡಪ್ರಭ ವಾರ್ತೆ, ಗದಗ, ಆ. 16
ಬಿಜೆಪಿ ಸರ್ಕಾರದ ಕೊನೆ ಅವಧಿಯಲ್ಲಿ ರಾಜ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ 3.50 ಲಕ್ಷ ಕಾಮಗಾರಿ ಪ್ರಗತಿಯಲ್ಲಿವೆ ಎಂದು ಕೇಂದ್ರ ಸರ್ಕಾರಕ್ಕೆ ಅಂಕಿ ಅಂಶ ನೀಡಿದ್ದೀರಿ, ಮೊದಲು ಅದರ ಬಗ್ಗೆ ಲೆಕ್ಕ ಕೊಡ್ರಿ ಜಗದೀಶ ಶೆಟ್ರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಆಕ್ಷೇಪ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಗದಗ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ವಿಪ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಿಮ್ಮ ಸರ್ಕಾರದ ಕೊನೆಯ ಸಮಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರು. 600 ಕೋಟಿ ಖರ್ಚು ಹಾಕಿದ್ದೀರಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ್ದೀರಿ, ನಾನು ಅಧಿಕಾರ ವಹಿಸಿಕೊಂಡ ತಕ್ಷಣವೇ ಈ ಸಂಖ್ಯೆಯನ್ನು ನೋಡಿ ನಿಜವಾಗಿಯೂ ಗಾಬರಿಯಾದೆ, ಅದಕ್ಕಾಗಿ ಮೊದಲು ನನ್ನ ಜಿಲ್ಲೆಯಲ್ಲಿ ಆಗಿರುವ ಅನುಷ್ಠಾನ ಹಾಗೂ ಪ್ರಗತಿಯ ಕುರಿತು ಇಲಾಖೆಯ ನಿರ್ದೇಶಕರ ಮೂಲಕ ತನಿಖೆ ಮಾಡಿಸಿದ ವೇಳೆಯಲ್ಲಿ ಆಶ್ಚರ್ಯ ಕಾದಿತ್ತು ಎಂದರು.
ನೀವೆಲ್ಲಾ ಅಕ್ರಮ ನಡೆಸಿದ್ದೀರಿ: ನೀವು ಗದಗ ಜಿಲ್ಲೆಯಲ್ಲಿ 9525 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ್ದೀರಿ. ಆದರೆ, ವಾಸ್ತವದಲ್ಲಿ ಕೇವಲ 3 ಕಾಮಗಾರಿ ಪ್ರಗತಿಯಲ್ಲಿರುವುದು ತನಿಖೆ ವೇಳೆಯಲ್ಲಿ ಪತ್ತೆಯಾಗಿದೆ. ಇಂಥ ಹಲವಾರು ಅಕ್ರಮಗಳನ್ನು ನಡೆಸಿ, ಗ್ರಾಮಸಭೆಗಳನ್ನು ನಡೆಸದೇ ಕೇವಲ ಗ್ರಾಪಂ ಸದಸ್ಯರೀಗ ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ ಎನ್ನುತ್ತಾ, ಪ್ರವಾಸಿ ಮಂದಿರಗಳಲ್ಲಿ ಗ್ರಾಮ ಸಭೆಗಳನ್ನು ನಡೆಸಿ, ನೀವೆಲ್ಲಾ ಅಕ್ರಮ ನಡೆಸಿದ್ದೀರಿ. ಇಂಥ ಅಕ್ರಮ ನಡೆಸಿರುವ ಕೀರ್ತಿ ನಿಮ್ಮ ಸರ್ಕಾರದ್ದಾಗಿದೆ. ಅದನ್ನು ಬಿಟ್ಟು ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ಕಾಂಗ್ರೆಸ್‌ನವರು ಕಿತ್ತುಕೊಳ್ಳುತ್ತಿದ್ದಾರೆ ಎನ್ನುವ ಹಸಿ ಹಸಿ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಬೇಡಿ ಎಂದು ಎಚ್ಕೆ ತಿರುಗೇಟು ನೀಡಿದ್ದಾರೆ.
ಮೊದಲು ನಿಮ್ಮ ಸರ್ಕಾರ ಅವಧಿಯಲ್ಲಿ ನಡೆದಿರುವ ಈ ಅಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಲೆಕ್ಕ ಕೊಡಿ, ನಂತರ ಇನ್ನೊಂದು ಪಕ್ಷದವರ ಬಗ್ಗೆ ಟೀಕಿಸಿರಿ, ನೀವು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ವೇಳೆಯಲ್ಲಿ ಶೇ.70 ಗ್ರಾಮ ಸಭೆಗಳೇ ನಡೆದಿಲ್ಲ. ಆದರೆ, ಕಡತಗಳಲ್ಲಿ ಅವು ನಡೆದಿವೆ ಎನ್ನುವ ದಾಖಲೆಗಳಿವೆ. ಅಧಿಕಾರದ ವಿಕೇಂದ್ರೀಕರಣದ ಬಗ್ಗೆ ನೀವು ಟೀಕಿಸುತ್ತಿದ್ದೀರಿ. ನಿಮ್ಮ ಪಕ್ಷದ ಹಿರಿಯರೇ ಸುಪ್ರೀಂ ಕೋರ್ಟ್‌ನಲ್ಲಿ ಹಿಂದುಳಿದ ಹಾಗೂ ಮಹಿಳೆಯರು ಅಧಿಕಾರ ನಡೆಸುವಷ್ಟು ಪ್ರಬುದ್ಧರಾಗಿಲ್ಲ, ಅವರಿಗೆ ಅಧಿಕಾರ ನೀಡುವುದು ಸೂಕ್ತವಲ್ಲ ಎನ್ನುವ ವಾದವನ್ನು ಮಂಡಿಸುತ್ತಾರೆ. ಆದರೆ, ನೀವು ಮಾತ್ರ ಕಾಂಗ್ರೆಸ್‌ನ್ನು ಟೀಕಿಸುತ್ತಿದ್ದೀರಿ. ಟೀಕಿಸುವ ಮೊದಲು ವಾಸ್ತವ ಅಂಶಗಳನ್ನು ಗಮನಿಸಿ ಟೀಕಿಸಿ ಎಂದು ಜಗದೀಶ ಶೆಟ್ಟರ್‌ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದು ವಿಶೇಷವಾಗಿತ್ತು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ರಾಜೀವಗಾಂಧಿ ಅವರ ಕಲ್ಪನೆ ಮತ್ತು ಅಧಿಕಾರ ವಿಕೇಂದ್ರೀಕರಣದ ಚಿಂತನೆ ಬಗ್ಗೆ ವಿವರಿಸಿದರು. ನಗರಸಭೆಯ ಸದಸ್ಯ ಬಿ.ಬಿ. ಅಸೂಟಿ, ಟಿ. ಈಶ್ವರ ಮಾತನಾಡಿದರು. ಅನ್ಯ ಪಕ್ಷಗಳಿಂದ ಹಲವಾರು ಜನರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಅಭ್ಯರ್ಥಿ ನಾಗರಾಜ ಛಬ್ಬಿ ಮತಯಾಚನೆ ಮಾಡಿದರು. ಮಿಥುನ್ ಪಾಟೀಲ, ದಶರಥ ಗಾಣಿಗೇರ, ಅಶೋಕ ಮಂದಾಲಿ, ಫಾರೂಕ್ ಹುಬ್ಬಳ್ಳಿ ಮುಂತಾದವರು ಹಾಜರಿದ್ದರು. ವಿದ್ಯಾಧರ ದೊಡ್ಡಮನಿ ನಿರೂಪಿಸಿದರು.