ಅಪಘಾತ: ಇಬ್ಬರು ಬಾಲಕರ ಸಾವು
ನರಗುಂದ: ಪಟ್ಟಣದ ನೀರಾವರಿ ಕಾಲೋನಿಯ ಸಮೀಪದಲ್ಲಿ ಸೈಕಲ್ ಮೇಲೆ ತೆರಳುತ್ತಿದ್ದ ಬಾಲಕರಿಬ್ಬರು ಟಿಪ್ಪರ್ ಹಾಗೂ ಸೈಕಲ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ಮೃತ ಯುವಕರು ನರಗುಂದ ಪಟ್ಟಣದ ನಿವಾಸಿಗಳಾದ ವಿನೋದ ಕೋರದಾನಮಠ (16), ಆಕಾಶ ಕಾಳಿ (16) ಎಂದು ಗುರುತಿಸಲಾಗಿದೆ. ಯುವಕರು ಸಂಜೆ ಮನೆಯಿಂದ ಸೈಕಲ್ ಮೇಲೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು. ಕ್ಷಣಾರ್ಧದಲ್ಲಿ ನಡೆದು ಹೋದ ಈ ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಯಿತು. ಮೃತರ ಸಂಬಂಧಿಗಳ ರೋದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.