ಇಂದಿನಿಂದ ದೂದಪೀರಾ ನಾನಾರ ಉರೂಸ್
ಲಕ್ಷ್ಮೇಶ್ವರ: ಭಾರತದಲ್ಲಿ ತಮ್ಮದೇಯಾದ ಮಹಾನ್ ಶಕ್ತಿಯ ಮೂಲಕ ಹೆಸರು ಮಾಡಿದ ಸೂಫಿಗಳಲ್ಲಿ ಒಂದಾದ ಲಕ್ಷ್ಮೇಶ್ವರದ ಹಜರತ್ ಸೈಯದ್ ಸುಲೇಮಾನ್ ಬಾದಶಾಹ ಖಾದ್ರಿ ಉರ್ಫ ದೂದಪೀರಾ ಅವರ 124ನೇ ಉರೂಸ್ ಆ. 19 ರಿಂದ 22ರವರೆಗೆ ಪಟ್ಟಣದಲ್ಲಿ ಅದ್ಧೂರಿಯಾಗಿ ಜರುಗಲಿದೆ.
ಮಹ್ಮದೀಯರ ಆಳ್ವಿಕೆ ಭಾರತಕ್ಕೆ ಕೇವಲ ಆಡಳಿತದ ಮೇಲೆ ಮಾತ್ರ ತನ್ನ ಪ್ರಭಾವ ಬೀರಲಿಲ್ಲ. ಬದಲಾಗಿ ನಮ್ಮ ಸಂಸ್ಕೃತಿ ಮತ್ತು ಆಚರಣೆಯ ಮೇಲೂ ಅಪಾರ ಪರಿಣಾಮ ಬೀರಿದ್ದನ್ನು ನಾವು ಇಂದಿಗೂ ಕಾಣುತ್ತೇವೆ. ಅವರ ಅರಮನೆಗಳು, ಮಸೀದಿಗಳು, ಗುಮ್ಮಟಗಳು, ಗೋರಿಗಳು, ಧರ್ಮ ಹಾಗೂ ವಿದ್ಯಾ ಪ್ರಸಾರಣಾ ಕೇಂದ್ರಗಳಾದ ಮದರಸಾಗಳು ಅಲ್ಲದೆ ಉರ್ದು ಸಾಹಿತ್ಯ ಹಾಗೂ ಘಜಲ್‌ಗಳು, ಕವ್ವಾಲಿಗಳು ಇಂದಿಗೂ ನಮ್ಮೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಹೀಗೆ ತಮ್ಮ ಧಾರ್ಮಿಕ ಪ್ರಭಾವ ಬೀರಿದವರಲ್ಲಿ ಅನೇಕ ಮುಸ್ಲಿಂ ಸಂತರು ಅಥವಾ ಸೂಫಿಗಳು ಭಾರತದಲ್ಲಿ ಅನೇಕ ಕಡೆಗಳಲ್ಲಿ ವಾಸವಾಗಿದ್ದು, ತಮ್ಮ ಅಪಾರ ಶಕ್ತಿ ಮತ್ತು ಪ್ರಭಾವವನ್ನು ಬೀರಿ ಜನರ ಸಂಕಷ್ಟ, ನೋವುಗಳನ್ನು ನಿವಾರಣೆ ಮಾಡಿದ್ದರು ಎನ್ನುವುದು ಇತಿಹಾಸದಿಂದ ತಿಳಿಯುತ್ತದೆ. ಅಂತಹ ಮಹಾನ್ ಸಂತರಲ್ಲಿ ಲಕ್ಷ್ಮೇಶ್ವರದ ದೂದಪೀರಾ ಸೂಫಿಗಳು ಒಬ್ಬರು. 19ನೇ ಶತಮಾನದಲ್ಲಿ ಲಕ್ಷ್ಮೇಶ್ವರದಲ್ಲಿ ನೆಲೆಸಿದ ಹಜರತ್ ಸೈಯದ್ ಸುಲೇಮಾನ್ ಬಾದಶಾಹ ಖಾದ್ರಿ ಉರ್ಫ್ ದೂದಪೀರಾಂ ಅಥವಾ ದೂದನಾನಾ ಎಂದೆ ಪ್ರಸಿದ್ಧಿಯನ್ನು ಪಡೆದು ಕರ್ನಾಟಕದ ತುಂಬೆಲ್ಲ ಮನೆ ಮಾತಾಗಿದ್ದಾರೆ.
ಜನರಲ್ಲಿ ಜಾಗೃತಿ: ಸೂಫಿಗಳೆಂದರೆ ಅನುಭಾವಿಗಳು, ದಾರ್ಶನಿಕರು, ಸಿದ್ಧಿಪುರುಷ ಎಂದರ್ಥ. ಸೂಫಿಗಳು ಎನ್ನುವುದು ಗ್ರೀಕ್ ಭಾಷೆಯ ಮೂಲವಾಗಿದೆ. ಹೀಗೆ ಭಾರತದಲ್ಲಿ ನೆಲೆ ನಿಂತ ಅನೇಕ ಸೂಫಿಗಳು ಕೇವಲ ಪವಾಡಗಳನ್ನು ಮಾಡಲಿಲ್ಲ, ಅನೇಕ ಸೂಫಿಗಳು ಭಾರತೀಯ ಪರಂಪರೆಯ ಮೇಲೆ ಗಾಢ ಪ್ರಭಾವವನ್ನು ಬೀರುವ ಉರ್ದು ಸಾಹಿತ್ಯವನ್ನು ರಚನೆ ಮಾಡಿದರು. ದೂದಪೀರಾರವರು ಇರಾಕ್‌ನ ಬಗದಾದಿ ಹಂಕಾರಿ ಮನೆತನದ ಮೂಲದಿಂದ ದೆಹಲಿಯ ಕಡೆಗೆ ಬಂದು, ಹುಬ್ಬಳ್ಳಿಯ ಮೂಲಕ ಲಕ್ಷ್ಮೇಶ್ವರಕ್ಕೆ ಬಂದು ನೆಲೆ ನಿಂತರು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಇಲ್ಲಿ ಬಂದು ನೆಲೆ ನಿಂತ ಮೇಲೆ ಇಲ್ಲಿನ ಜನ ಸಮುದಾಯಕ್ಕೆ ದೇಶಿ ಪದ್ಧತಿಯ ವೈದ್ಯರಾಗಿ, ಮದರಸಾಗಳಲ್ಲಿ ಅರೆಬಿಕ್ ಭಾಷೆಯ ಶಿಕ್ಷಕರಾಗಿ ಶಿಕ್ಷಣವನ್ನು ನೀಡುತ್ತ, ಧರ್ಮ ಪ್ರಸಾರದಲ್ಲಿ ನಿರತರಾದರು. ಅಸಹಾಯಕ ಜನರ ನೋವುಗಳಿಗೆ ಧ್ವನಿಯಾಗಿ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕಾರ್ಯ ಕೈಗೊಳ್ಳುವ ಮೂಲಕ ಜನರಲ್ಲಿ ಜಾಗೃತಿಯನ್ನುಂಟು ಮಾಡಿದರು.
ಜನರ ನೋವೆ ನನ್ನ ನೋವು ಎನ್ನುವ ಭಾವನೆ ಬೆಳೆಸಿಕೊಂಡರು. ಲಕ್ಷ್ಮೇಶ್ವರ ಭಾಗದಲ್ಲಿ ಒಮ್ಮೆ ಮಳೆಯ ಅಭಾವ ತೀವ್ರವಾಗಿ ಬರಗಾಲ ಉಂಟಾಗಿ ಜನರು ಹಾಗೂ ಜಾನುವಾರುಗಳು ತೊಂದರೆ ಅನುಭವಿಸುತ್ತಿರುವುದನ್ನು ನೋಡಿ, ಕರುಣೆ ಉಂಟಾಗಿ ದೇವರಲ್ಲಿ ಮೊರೆ ಹೋದಾಗ ಮಳೆರಾಯನು ಬಂದು ಭೂಮಿಯನ್ನು ತಂಪು ಮಾಡಿ ಜನರ ಸಂಕಷ್ಟಗಳನ್ನು ತಡೆದರೆಂದು ಹಿರಿಯರು ಹೇಳುತ್ತಾರೆ.
ಮಕ್ಕಳ ಭಾಗ್ಯ: ಮಕ್ಕಳಿಲ್ಲದೆ ಪರಿತಪಿಸುತ್ತಿದ್ದ ದಂಪತಿಗೆ ಮಕ್ಕಳನ್ನು ಕರುಣಿಸಿ, ಬಹು ದಿನಗಳಿಂದ ಕುಷ್ಠ ರೋಗದಿಂದ ಬಳಲುತ್ತಿದ್ದ ಲಂಬಾಣಿ ಮಹಿಳೆ ಜೀವನದಲ್ಲಿ ಜಿಗುಪ್ಸೆಗೊಂಡಿದ್ದಳು. ಒಮ್ಮೆ ದೂದನಾನಾರನ್ನು ಭೇಟಿಯಾದಾಗ ಆ ಮಹಿಳೆಯ ರೋಗವನ್ನು ಗುಣಪಡಿಸಿದರು. ಆಗ ಆ ಮಹಿಳೆಯು ಅವರ ಶಿಷ್ಯೆಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿ ತನ್ನ ಜೀವಕಾಲದ ಕೊನೆಯವರೆಗೂ ನಾನಾರ ಸೇವೆಯಲ್ಲಿ ತೊಡಗಿದ್ದಳು ಎಂದು ಸಾರ್ವಜನಿಕರು ಹೇಳುತ್ತಾರೆ. ಇಂದಿಗೂ ಕೂಡ ದೂದಪೀರಾ ದರ್ಗಾದಲ್ಲಿ ಭೂತಚೇಷ್ಟೆ ಅಥವಾ ದೆವ್ವ ಬಡಿದುಕೊಂಡಿರುವ ವ್ಯಕ್ತಿಯನ್ನು ದರ್ಗಾಕ್ಕೆ ಕರೆತಂದರೆ ದೂದಪೀರಾ ನಾನಾ ದರ್ಶನ ಮಾತ್ರದಿಂದ ಆ ವ್ಯಕ್ತಿಗೆ ಬಡಿದುಕೊಂಡಿರುವ ದೆವ್ವ ಅಥವಾ ಭೂತಚೇಷ್ಟೆ ದೂರಾಗಿ ಹೋಗುವುದೆನ್ನುವ ನಂಬಿಕೆ ಜನರಲ್ಲಿ ಇದೆ. ಇಲ್ಲಿಗೆ ನಾನಾ ರಾಜ್ಯಗಳಿಂದ ಜನರು ಬಂದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತಾರೆ. ಮನೋರೋಗಕ್ಕೆ ಮದ್ದು ನೀಡುವ ದಿವ್ಯ ಕೇಂದ್ರವೆಂದು ಜನರ ನಂಬಿಕೆ ಗಾಢವಾಗಿದೆ. ಸಾಸಲವಾಡದ ನದಿಯ ದಂಡೆಯಲ್ಲಿ ಒಮ್ಮೆ ತಪಸ್ಸಿಗೆ ಕುಳಿತಾಗ ಹಂದಿಗನೂರ ದೇಸಾಯಿಯವರಿಗೆ ತಾವು ಇಹಲೋಕ ತ್ಯೆಜಿಸಿದ ನಂತರವೂ ದರ್ಶನ ಭಾಗ್ಯ ಕಲ್ಪಿಸಿಕೊಟ್ಟಿದ್ದರೆಂದು ಅವರ ವಂಶಸ್ಥರು ಹೇಳುತ್ತಾರೆ. ದೂದಪೀರಾಂ ನಾನಾ ಅವರು 1890ರಲ್ಲಿ ಪೈಗಂಬರವಾಸಿಗಳಾದರು. ಆ. 19 ರಿಂದ 22ರ ವರೆಗೆ 4 ದಿನಗಳ ಕಾಲ ದೂದಪೀರಾ ಅವರ 124ನೇ ಉರೂಸ್ ಕಾರ್ಯಕ್ರಮ ಜರುಗಲಿದೆ. ಪ್ರತಿವರ್ಷದಂತೆ ಈ ವರ್ಷವು ಆ. 22 ರಂದು ದೆಹಲಿ ಮತ್ತು ಮುಂಬಯಿ ಮೂಲದ ಕವ್ವಾಲಿ ಗಾಯಕರಿಂದ ಪ್ರಸಿದ್ಧ ಕವ್ವಾಲಿ ಕಾರ್ಯಕ್ರಮ ಜರುಗಲಿದೆ.