ಬಿಸಿಯೂಟ ಖಾಸಗೀಕರಣಗೊಳಿಸದಂತೆ ಆಗ್ರಹ
ಕನ್ನಡಪ್ರಭ ವಾರ್ತೆ, ಗದಗ, ಆ. 18
ಬಿಸಿಯೂಟ ಖಾಸಗೀಕರಣದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೈಬಿಡುವಂತೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದಸ್ವಾಮಿ ಆಗ್ರಹಿಸಿದರು.
ಅವರು ಭಾನುವಾರ ಎಪಿಎಂಸಿ ಯಾರ್ಡ್ನಲ್ಲಿರುವ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಸಿಯೂಟ ನೌಕರರ 3ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ-ರಾಜ್ಯ ಸರ್ಕಾರದ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟದ ಮಹಿಳೆಯರಿಗೆ ಕೆಲಸದ ಭದ್ರತೆ, ಕನಿಷ್ಠ ಕೂಲಿ ಇಲ್ಲದಿರುವುದು ವಿಷಾದನೀಯ ಹಾಗೂ ರಾಜ್ಯದಲ್ಲಿ 10 ವರ್ಷಗಳಿಂದ ಯೋಜನೆ ತುಂಬಾ ಯಶಸ್ವಿಯಿಂದ ನಡೆಯುತ್ತಿದ್ದು, ಅದರಲ್ಲಿ ಕೆಲಸ ಮಾಡುವವರು ನಿರ್ಲಕ್ಷಕ್ಕೆ ಒಳಗಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ನಡುವೆ ಬಿಹಾರದ ಘಟನೆಯನ್ನು ಮುಂದಿಟ್ಟುಕೊಂಡು ಯೋಜನೆಯನ್ನು ಖಾಸಗೀಕರಣ ಮಾಡಲು ಮುಂದಾಗುತ್ತಿದೆ. ಇದರ ವಿರುದ್ಧ ಎಲ್ಲರೂ ಬೀದಿಗಿಳಿದು ಹೋರಾಟ ಮಾಡಬೇಕೆಂದು ಕರೆ ನೀಡಿದರು. ರಾಜ್ಯ ಉಪಾಧ್ಯಕ್ಷ ಶರಣಬಸವ ಮರದ ಮಾತನಾಡಿ, ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣದ ಮಾತನ್ನು ಆಡುತ್ತಿದ್ದು ಮಹಿಳೆಯರ ಬಗ್ಗೆ ಗೌರವವಿದ್ದರೆ ಈ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ 90 ಸಾವಿರ ಮಹಿಳೆಯರಿಗೆ ಕನಿಷ್ಠ ಕೂಲಿ ನಿಗದಿ ಮಾಡಿ ಸೇವಾ ನಿಯಮಾವಳಿ ರೂಪಿಸುವಂತೆ ಆಗ್ರಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಶೋದಾ ಬೆಟಗೇರಿ ವಹಿಸಿದ್ದರು. 25 ಜನರ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಯಶೋದಾ ಬೆಟಗೇರಿ ಪುನರಾಯ್ಕೆಯಾದರು. ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ ಹಿರೇಮಠ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿ.ಎಸ್. ಸೊಪ್ಪಿನ, ಕಾರ್ಮಿಕ ಮುಖಂಡ ಎಂ.ಎಸ್. ಹಡಪದ, ವಿಠ್ಠಲ ನಾಯ್ಕ ಹಾಗೂ ತಾಲೂಕಿನ ಎಲ್ಲ ಅಧ್ಯಕ್ಷರು ಉಪಸ್ಥಿತರಿದ್ದರು. ಶಿವಾನಂದ ಭೊಸ್ಲೆ ಸ್ವಾಗತಿಸಿದರು. ಗೌಸ್ ಪೀರಣ್ಣವರ ನಿರೂಪಿಸಿದರು. ಬಾಲು ರಾಠೋಡ ವಂದಿಸಿದರು.